ಕೆನ್ನಾಳು ಗ್ರಾಪಂನಲ್ಲಿ ನಿರ್ಗತಿಕರಿಗೆ ಊಟ
ಮಂಡ್ಯ

ಕೆನ್ನಾಳು ಗ್ರಾಪಂನಲ್ಲಿ ನಿರ್ಗತಿಕರಿಗೆ ಊಟ

April 2, 2020

ಪಾಂಡವಪುರ, ಏ.1- ತಾಲೂಕಿನ ಕೆನ್ನಾಳು ಗ್ರಾಪಂ ಆವರಣದಲ್ಲಿ ನಿರ್ಗತಿಕರಿಗೆ ಊಟ ನೀಡುವ ಕಾರ್ಯಕ್ಕೆ ತಾಪಂ ಇಓ ಆರ್.ಪಿ.ಮಹೇಶ್ ಚಾಲನೆ ನೀಡಿದರು.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಲಾಕ್‍ಡೌನ್ ಆಗಿರುವುದರಿಂದ ಕೆನ್ನಾಳು ಗ್ರಾಪಂ ಆವರಣದಲ್ಲಿ ಪಂಚಾಯಿತಿಯ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಗ್ರಾಮಸ್ಥರು, ಮುಖಂಡರಿಂದ ಸಹಕಾರ ಪಡೆದುಕೊಂಡು ನಿರ್ಗತಿಕರಿಗೆ ಉಚಿತ ಊಟ ನೀಡುವ ಕಾರ್ಯವನ್ನು ತಾಪಂ ಇಓ ಆರಂಭಿಸಿದರು.

ಪಾಂಡವಪುರ ರೈಲ್ವೇ ನಿಲ್ದಾಣ ಹಾಗೂ ಆರತಿ ಉಕ್ಕಡ ಬಳಿ ಹೆಚ್ಚು ಮಂದಿ ನಿರ್ಗತಿಕರು, ಊಟಕ್ಕಾಗಿ ಪರದಾಟ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಅವರಿಗೆ ನೆರವಾಗುವ ಉದ್ದೇಶದಿಂದ ಗ್ರಾಪಂ ಪಿಡಿಓ, ಅಧ್ಯಕ್ಷರು, ಸದಸ್ಯರು ಎಲ್ಲರೂ ಸೇರಿ ಗ್ರಾಮಸ್ಥರಿಂದ ವಿವಿಧ ದವಸ ಧಾನ್ಯಗಳನ್ನು ಪಡೆದುಕೊಂಡು ಪಂಚಾಯಿತಿ ಆವರಣದಲ್ಲಿ ಉಚಿತ ಊಟ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತ್ತು.

ಪಂಚಾಯಿತಿ ಆವರಣದಲ್ಲಿಯೇ ಊಟ ತಯಾರಿಸಿ ನಿರ್ಗತಿಕರಿಗೆ, ಬೀದಿನಿವಾಸಿಗಳಿಗೆ ಊಟ ನೀಡಿದರು. ಉಚಿತ ಊಟದ ವ್ಯವಸ್ಥೆಯೂ ನಿತ್ಯ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೂ ಇರಲಿದ್ದು, ನಿರ್ಗತಿಕರು ಇಲ್ಲಿಗೆ ತೆರಳಿ ಊಟ ಮಾಡಬಹುದಾಗಿದೆ. ಮೊದಲ ದಿನ ಊಟದ ವ್ಯವಸ್ಥೆಯನ್ನು ಗ್ರಾಪಂ ಸದಸ್ಯರೇ ನಡೆಸಿದರು. ನಂತರ ಗ್ರಾಮಸ್ಥರಿಂದ ಪಡೆದಿ ರುವ ದವಸ ದಾನ್ಯಗಳಿಂದ ಊಟ ತಯಾರಿಸಲಾಗುವುದು, ನಾಳೆಯಿಂದ ಶಾಲೆಯ ಬಿಸಿಯೂಟ ನೌಕರರು ಊಟ ತಯಾರಿಸಲಿದ್ದಾರೆ ಎಂದು ಪಿಡಿಓ ಶ್ರೀನಿವಾಸ್ ತಿಳಿಸಿದರು.

ಅಧ್ಯಕ್ಷ ಕೆ.ಟಿ.ವಿಶ್ವನಾಥ್, ಚಂದ್ರಕಲಾ, ಪಿಡಿಓ ಶ್ರೀನಿವಾಸ್, ಸದಸ್ಯರಾದ ಬಾಲಕೃಷ್ಣ, ಶಿವರಾಮು, ಲಕ್ಷ್ಮಣ, ರಾಜೇಶ್, ಶಿವಕುಮಾರ್, ದಾನಿ ಲೋಕೇಶ್ ಸೇರಿದಂತೆ ಹಲವರು ಹಾಜರಿದ್ದರು.

Translate »