ಶಿಮ್ಲಾದಿಂದ ಮಾನಸಿಕ ಸಂತ್ರಸ್ತೆ  ಸುರಕ್ಷಿತವಾಗಿ ಮೈಸೂರಿಗೆ ವಾಪಸ್
ಮೈಸೂರು

ಶಿಮ್ಲಾದಿಂದ ಮಾನಸಿಕ ಸಂತ್ರಸ್ತೆ  ಸುರಕ್ಷಿತವಾಗಿ ಮೈಸೂರಿಗೆ ವಾಪಸ್

August 3, 2018
  • ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಭ ಕೋರಿಕೆ
  • ಮೈಸೂರು ವಿಜಯನಗರ ಮಹಿಳಾ ನಿಲಯದಲ್ಲಿ ಆಶ್ರಯ

ಮೈಸೂರು: ಮಾನಸಿಕ ಅಸ್ವಸ್ಥತೆ ಯಿಂದ ಕಳೆದ 2 ವರ್ಷಗಳ ಹಿಂದೆ ಶಿಮ್ಲಾ ಸೇರಿದ್ದ ಪಿರಿಯಾಪಟ್ಟಣ ತಾಲೂಕು ಕಂಪಲಾಪುರ ಸಮೀಪದ ಮೂಕನ ಹಳ್ಳಿ ಪಾಳ್ಯದ ಸರಸ್ವತಿ ಅಲಿಯಾಸ್ ಪದ್ಮ ಅವರನ್ನು ಜಿಲ್ಲಾಡಳಿತವು ಇಂದು ರಾತ್ರಿ ಮೈಸೂರಿಗೆ ಕರೆ ತಂದಿದೆ.

ಈಕೆಯನ್ನು ತವರಿಗೆ ಕರೆತರುವ ಸಲುವಾಗಿ ಜಿಲ್ಲಾಡಳಿತದ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳಾ ಪಾಟೀಲ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ಮಂಜು ಪ್ರಸಾದ್, ಪೊಲೀಸ್ ಸಿಬ್ಬಂದಿ ನಗೀನಾ ಮುಲ್ಲಾ ಮತ್ತು ಪದ್ಮ ಅವರ ಸೋದರ ಸಂಬಂಧಿ ಮಹದೇವ ಅವರನ್ನೊಳ ಗೊಂಡ ತಂಡವು ಕಳೆದ ಸೋಮವಾರ ಶಿಮ್ಲಾಗೆ ಕಳುಹಿಸಿಕೊಡಲಾಗಿತ್ತು.

ಈ ತಂಡವು ಶಿಮ್ಲಾ ಮಾನಸಿಕ ಆಸ್ಪತ್ರೆಯ ವೈದ್ಯರಾದ ಡಾ. ಸಂಜಯ್ ಪಾಠಕ್ ಮತ್ತು ಅಲ್ಲಿನ ಸಾಮಾಜಿಕ ಹೋರಾಟಗಾರ್ತಿ ಸುನೀಲ್ ಶರ್ಮ ಅವ ರನ್ನು ಭೇಟಿ ಮಾಡಿ, ಅಲ್ಲಿನ ಸರ್ಕಾರ ವನ್ನು ಸಂಪರ್ಕಿಸಿ ಪದ್ಮ ಅವರನ್ನು ಮೈಸೂರಿಗೆ ಕರೆತರಲು ಸಿದ್ಧತೆ ಮಾಡಿಕೊಂಡಿತ್ತು. ಶಿಮ್ಲಾ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮತ್ತು ಅವರ ಪತ್ನಿ ಬೆಂಗಳೂರಿನ ಚಾಮರಾಜಪೇಟೆ ಮೂಲದವರಾದ ಸಾಧನಾ ಠಾಕೂರ್ ಅವರು ಬುಧವಾರ ಪದ್ಮಾ ಅವರಿಗೆ ಅಲ್ಲಿನ ಸಾಂಪ್ರದಾಯಿಕ ಪೇಟ ತೊಡಿಸಿ, ಶಾಲು ಹೊದಿಸಿ ‘ಕಳೆದ ಎರಡು ವರ್ಷಗಳಿಂದ ಸಾಕಷ್ಟು ಕಷ್ಟ ಅನುಭವಿಸಿ ದ್ದೀರಿ, ನಿಮಗೆ ತವರಿನಲ್ಲಿ ಒಳ್ಳೆಯ ನೆಲೆ ಸಿಗಲಿ’ ಎಂದು ಹಾರೈಸಿ ಬೀಳ್ಕೊಟ್ಟರು.

ಇಂದು ರಾತ್ರಿ ಬೆಂಗಳೂರಿಗೆ ಪದ್ಮ ಅವರನ್ನು ಕರೆತಂದ ಜಿಲ್ಲಾಡಳಿತದ ತಂಡ ಅವರನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಳಿಗೆ ಕರೆದೊಯ್ಯಿತು. ಈ ವೇಳೆ ಮುಖ್ಯಮಂತ್ರಿಗಳು ಶಾಲು ಹೊದಿಸಿ, ಸಿಹಿ ನೀಡಿ ಶುಭ ಹಾರೈಸಿ ಕಳುಹಿಸಿಕೊಟ್ಟರು. ತಡ ರಾತ್ರಿ ಮೈಸೂರಿಗೆ ಆಗಮಿಸಿದ ಈ ತಂಡ ಪದ್ಮ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿದ ವಿಜಯನಗರದಲ್ಲಿ ಇರುವ ಮಹಿಳಾ ನಿಲಯದಲ್ಲಿ ಆಶ್ರಯ ಕಲ್ಪಿಸಿದೆ.

ಹಿನ್ನೆಲೆ: ಪಿರಿಯಾಪಟ್ಟಣ ತಾಲೂಕು ಕಂಪಲಾಪುರ ಸಮೀಪದ ಮಾಕನಹಳ್ಳಿ ಪಾಳ್ಯ ಗ್ರಾಮದ ಸರಸ್ವತಿ ಅಲಿಯಾಸ್ ಪದ್ಮ ಅವರನ್ನು ಅವರ 19ನೇ ವಯಸ್ಸಿನಲ್ಲಿ ಚನ್ನರಾಯಪಟ್ಟಣ ತಾಲೂಕು ನುಗ್ಗೇ ಹಳ್ಳಿ ಹೋಬಳಿ ಭುವನಹಳ್ಳಿ ಸಮೀಪದ ವಡ್ಡರಹಳ್ಳಿ ನಿವಾಸಿ ಧರಣೇಶ್ ಎಂಬಾತ ನಿಗೆ ವಿವಾಹ ಮಾಡಿಕೊಡಲಾಗಿತ್ತು.

ಪದ್ಮ ಅವರಿಗೆ ಮಕ್ಕಳಾಗಲಿಲ್ಲ ಎಂಬ ನೆಪವೊಡ್ಡಿ ಧರಣೇಶ್ ಪತ್ನಿಯನ್ನು ತೊರೆದಿದ್ದ. ನಂತರ ತವರಿಗೆ ಆಗಮಿಸಿದ ಪದ್ಮ, ಟೈಲರ್ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಪತಿಯಿಂದ ದೂರವಾದದ್ದು ಹಾಗೂ ಮಕ್ಕಳಿಲ್ಲದ ಕೊರಗಿನಿಂದಾಗಿ ಆಕೆ ಮಾನಸಿಕವಾಗಿ ಜರ್ಝರಿತರಾಗಿದ್ದರು ಎಂದು ಹೇಳಲಾಗಿದೆ. ಕಳೆದ 2 ವರ್ಷಗಳ ಹಿಂದೆ ಈಕೆ ನಾಪತ್ತೆಯಾಗಿದ್ದು, ಕುಟುಂಬ ದವರು ಪಿರಿಯಾಪಟ್ಟಣ ಪೊಲೀಸ್ ಠಾಣೆ ಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಶಿಮ್ಲಾದಲ್ಲಿ ಪದ್ಮ: ಶಿಮ್ಲಾದ ಕಾಂಗ್ಡಾ ಎಂಬ ಊರಿನಲ್ಲಿ ಮಾನಸಿಕ ಅಸ್ವಸ್ಥತೆಯಿಂದ ತಿರುಗಾಡುತ್ತಿದ್ದ ಈಕೆಯನ್ನು ಅಲ್ಲಿನ ಸ್ವಯಂ ಸೇವಾ ಸಂಸ್ಥೆಯೊಂದು ಶಿಮ್ಲಾದ ಮಾನಸಿಕ ಆಸ್ಪತ್ರೆಗೆ ದಾಖಲಿ ಸಿದೆ. ಅಲ್ಲಿನ ಮಾನಸಿಕ ರೋಗ ತಜ್ಞ ಸಂಜಯ್ ಠಾಕೂರ್ ಅವರು ಆಕೆಗೆ ಚಿಕಿತ್ಸೆ ಕೊಡುತ್ತಿದ್ದರು. ಇತ್ತೀಚೆಗೆ ಪದ್ಮ ಗುಣಮುಖಳಾದರಾದರೂ, ಆಕೆಗೆ ಕನ್ನಡ ಹೊರತುಪಡಿಸಿ ಬೇರೆ ಭಾಷೆ ಬಾರದ ಕಾರಣ ಆಕೆ ವಿಳಾಸವನ್ನು ಹುಡುಕುವಲ್ಲಿ ಕಷ್ಟವಾಗಿತ್ತು. ಈ ವೇಳೆ ಸಾಮಾಜಿಕ ಹೋರಾಟಗಾರ್ತಿ ಸುನೀಲ್ ಶರ್ಮಾ ಅವರು ಆಕೆಯ ವಿವರಗಳೊಂದಿಗೆ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ, ಆಕೆಯ ವಿಳಾಸ ಪತ್ತೆಗೆ ಮನವಿ ಮಾಡಿದ್ದರು.
ಅದನ್ನು ಕಂಡ ರಾಜ್ಯ ಮಟ್ಟದ ಪತ್ರಿಕಾ ವರದಿಗಾರನೋರ್ವ ಸುನೀಲ್ ಶರ್ಮಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರ ನೆರವಿನಿಂದ ಪದ್ಮ ಜೊತೆಯಲ್ಲೂ ಮಾತನಾಡಿ, ಆಕೆ ಪಿರಿಯಾಪಟ್ಟಣ ಮೂಲದವಳು ಎಂಬುದನ್ನು ತಿಳಿದು, ವರದಿ ಪ್ರಕಟಿಸಿದ್ದರು.

ಕಳೆದ 2 ವಾರಗಳ ಹಿಂದೆ ಈ ವಿಷಯ ಗಮನಕ್ಕೆ ಬಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಈ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಪ್ರಕರಣದ ಬಗ್ಗೆ ಖುದ್ದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಸಕ್ತಿ ವಹಿಸಿ ಪದ್ಮಳನ್ನು ತವರಿಗೆ ಕರೆತರಲು ವ್ಯವಸ್ಥೆ ಮಾಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಇಂದು ಆಕೆಯನ್ನು ಮೈಸೂರಿಗೆ ಕರೆತಂದಿದೆ.

ತಾನು ಪತಿಯನ್ನು ನೋಡಲು ಚನ್ನ ರಾಯಪಟ್ಟಣಕ್ಕೆ ಹೋಗಲು ಮೈಸೂರಿನಲ್ಲಿ ರೈಲು ಹತ್ತಿದ್ದು ಮಾತ್ರ ನೆನಪಿದೆ. ಹೇಗೆ ಶಿಮ್ಲಾಗೆ ಬಂದೇ ಎಂಬುದು ಗೊತ್ತಾಗು ತ್ತಿಲ್ಲ ಎಂದು ಪದ್ಮ ಹೇಳಿದ್ದಾಳೆ ಎನ್ನಲಾಗಿದೆ.

Translate »