ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಅಟ್ಟಹಾಸ
News

ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಅಟ್ಟಹಾಸ

December 19, 2021

ಬೆಳಗಾವಿ, ಡಿ.18- ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಪದೇ ಪದೆ ತಗಾದೆ ತೆಗೆಯುತ್ತಿದ್ದ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ಪುಂಡರು ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಯುವ ವೇಳೆಯೇ ಪುಂಡಾಟ ನಡೆಸುತ್ತಿದ್ದು ಕೆಲ ದಿನಗಳ ಹಿಂದೆ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ ಉದ್ವಿಗ್ನ ವಾತಾವರಣ ಸೃಷ್ಟಿಸಿದ್ದರು. ಅದು ಸಾಲದೆಂಬಂತೆ ಕಳೆದ ರಾತ್ರಿ (ಶುಕ್ರವಾರ) ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದಲ್ಲದೇ ವಾಹನಗಳು ಹಾಗೂ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿ ಪುಂಡಾಟ ಮೆರೆದಿದ್ದಾರೆ.

ಶುಕ್ರವಾರ ರಾತ್ರಿ ಬೆಂಗಳೂರಿನ ಸದಾಶಿವನಗರದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಗೆ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ ಎಂಬುದನ್ನೇ ನೆಪವಾಗಿಟ್ಟು ಕೊಂಡ ಎಂಇಎಸ್ ಪುಂಡರು, ಎಂಇಎಸ್ ಮುಖಂಡ ಶುಭಂ ಶಳಕೆ ಮತ್ತು ಶ್ರೀರಾಮಸೇನಾ ಹಿಂದೂಸ್ತಾನ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ ನೇತೃತ್ವದಲ್ಲಿ ರಾತ್ರಿ 11.30ರ ವೇಳೆಗೆ ಧರಣಿ ನಡೆಸಲಾರಂಭಿಸಿದರು. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿ ಗಳು ಪ್ರತಿಭಟನಾಕಾರರ ಜೊತೆ ಸಂಧಾನದ ಮಾತುಕತೆ ನಡೆಸುತ್ತಿದ್ದರು. ಆದರೆ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಎಂಇಎಸ್ ಪುಂಡರ ಯೋಜನೆಯೇ ಬೇರೆಯಾಗಿತ್ತು. ಇದ್ದಕ್ಕಿದ್ದಂತೆ ಗುಂಪೊಂದು ಶಿವಾಜಿ ರಸ್ತೆಯ ಲಾಡ್ಜ್‍ವೊಂದರ ಮುಂದೆ ನಿಲ್ಲಿಸಿದ್ದ ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾರಂಭಿಸಿತು.

ಕೆಲ ಪುಂಡರು ದೊಣ್ಣೆಗಳಿಂದ ಸರ್ಕಾರಿ ಕಾರುಗಳ ಗಾಜುಗಳನ್ನು ಒಡೆದು ಹಾಕಿದರು. ಅಲ್ಲದೇ ಕನ್ನಡ ನಾಮಫಲಕವಿದ್ದ ಹೋಟೆಲ್‍ಗಳ ಮೇಲೆಯೂ ಕಲ್ಲು ತೂರಾಟ ನಡೆಸಿದರು. ಕೆಲ ಹೊತ್ತಿನಲ್ಲೇ 20 ಕಾರುಗಳು ಹಾಗೂ 3 ಹೋಟೆಲ್‍ಗಳ ಮೇಲೆ ದಾಳಿ ನಡೆಸಲಾಯಿತು. ದಾಳಿಕೋರರು ಸರ್ಕಾರಿ ವಾಹನಗಳನ್ನೇ ಗುರಿಯಾಗಿಟ್ಟು ಕೊಂಡು ದಾಳಿ ನಡೆಸಿದ್ದು ಕಂಡು ಬಂತು. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು. ಮತ್ತೊಂದು ಗುಂಪು ಬೆಳಗಾವಿಯ ಅನಗೋಳದ ಕನಕದಾಸ ಕಾಲೋನಿಯಲ್ಲಿ ಪ್ರತಿಷ್ಠಾಪಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಕೆಡವಿ ಅಟ್ಟಹಾಸ ಮೆರೆದರು. ಪ್ರತಿಮೆಯನ್ನು ಭಗ್ನಗೊಳಿಸಿದ್ದಲ್ಲದೇ ಪ್ರತಿಮೆಯಲ್ಲಿನ ಕತ್ತಿ, ಗುರಾಣಿಯನ್ನು ಬೇರೆ ಬೇರೆ ಕಡೆ ಬಿಸಾಡಿ ಪುಂಡಾಟ ನಡೆಸಿದರು. ಪೊಲೀಸರ ಮೇಲೆಯೂ ಕಲ್ಲು ತೂರಾಟ ನಡೆಸಿ ಉದ್ದಟತನ ಮೆರೆದರು.

ಬೆಳಗಾವಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣ ವಾಗುತ್ತಿದ್ದಂತೆ ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಿ ರಾಮಲಿಂಗ ಖಿಂಡಾ ಗಲ್ಲಿ, ಕುಲಕರ್ಣಿ ಗಲ್ಲಿ, ಪಾಟೀಲ್ ಗಲ್ಲಿ, ಕನಕದಾಸ ಕಾಲೋನಿ, ಶಿವಾಜಿ ಪಾರ್ಕ್ ಮುಂತಾದೆಡೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿ ಹತೋಟಿಗೆ ತಂದು ಗಸ್ತು ಆರಂಭಿಸಿದರು. ಮುಂಜಾನೆ 4 ಗಂಟೆ ವೇಳೆಗೆ ಎಂಇಎಸ್ ಮುಖಂಡ ಶುಭಂ ಶಳಕೆ ಮತ್ತು ಶ್ರೀರಾಮಸೇನಾ ಹಿಂದೂಸ್ತಾನ ಅಧ್ಯಕ್ಷ ರಮಾಕಾಂತ ಕೊಂಡುಸ್ಕರ ಸೇರಿದಂತೆ 27 ಮಂದಿಯನ್ನು ಬಂಧಿಸಿದ ಪೊಲೀಸರು ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಎಲ್ಲಾ 27 ಮಂದಿಯನ್ನು ಹಿಂಡಲಗ ಜೈಲಿಗೆ ರವಾನಿಸಲಾಯಿತು. ಎಂಇಎಸ್ ಪುಂಡರು ಕಳೆದ ರಾತ್ರಿ ಬೆಳಗಾವಿಯ 10 ಪ್ರದೇಶಗಳಲ್ಲಿ ಪುಂಡಾಟ ನಡೆಸಿದ್ದಾರೆ. 20 ಸರ್ಕಾರಿ ಕಾರುಗಳು ಹಾಗೂ 3 ಹೋಟೆಲ್‍ಗಳ ಮೇಲೆ ದಾಳಿ ನಡೆಸಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದಾರೆ. ಈ ಸಂಬಂಧ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆ, ಖಡೇ ಬಜಾರ್ ಠಾಣೆ ಮತ್ತು ಮಾರ್ಕೆಟ್ ಠಾಣೆ ಸೇರಿದಂತೆ 3 ಪೊಲೀಸ್ ಠಾಣೆಗಳಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಈ ನಡುವೆ ಇಂದು ಬೆಳಗಾವಿ ಮಾತ್ರವಲ್ಲದೇ ಮಹಾರಾಷ್ಟ್ರ ಗಡಿಭಾಗದಲ್ಲೂ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರು ಪುಂಡಾಟ ನಡೆಸಿದ ಪರಿಣಾಮ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾರಾಷ್ಟ್ರದ ಮೀರಜ್‍ನಲ್ಲಿ ಶಿವಸೇನೆ ಕಾರ್ಯಕರ್ತರು ಮತ್ತು ಸಾಂಗ್ಲಿಯಲ್ಲಿ ಎಂಇಎಸ್ ಕಾರ್ಯಕರ್ತರು ದಾಂಧಲೆ ನಡೆಸಿದ್ದು, ಕರ್ನಾಟಕ ನೋಂದಣಿ ಇರುವ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕನ್ನಡಿಗರ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿದ್ದಾರೆ. ಕನ್ನಡ ನಾಮಫಲಕಗಳನ್ನು ಕಿತ್ತು ಬಿಸಾಡಿ ಮಸಿ ಬಳಿದು ಉದ್ದಟತನ ಮೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ಕೆಎಸ್‍ಆರ್‍ಟಿಸಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಾತ್ರವಲ್ಲದೇ ಕರ್ನಾಟಕ ನೋಂದಣಿ ಇರುವ ವಾಹನಗಳು ಮಹಾರಾಷ್ಟ್ರ ಪ್ರವೇಶಿಸದಂತೆ ಸಲಹೆ ನೀಡಲಾಗಿದೆ. ಸಾರಿಗೆ ಸಂಸ್ಥೆ ಬಸ್‍ಗಳು ಗಡಿಭಾಗ ನಿಪ್ಪಾಣಿವರೆಗೆ ಮಾತ್ರ ಹೋಗಿ ವಾಪಸ್ ಬರುತ್ತಿವೆ. ಅತ್ತ ಮಹಾರಾಷ್ಟ್ರದಿಂದಲೂ ಬೆಳಗಾವಿಗೆ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿಯಲ್ಲಿ ಭಾನುವಾರ ಬೆಳಗ್ಗೆ 6 ಗಂಟೆವರೆಗೆ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬೆಳಗಾವಿಗೆ ಬೇರೆ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸ್ ಪಡೆಗಳನ್ನು ಕಳುಹಿಸಲಾಗುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಬೆಳಗಾವಿಯಲ್ಲೇ ಮೊಕ್ಕಾಂ ಹೂಡಿದ್ದಾರೆ.

Translate »