ವಿಧಾನಪರಿಷತ್  ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್
News

ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್

January 28, 2022

ಬೆಂಗಳೂರು,ಜ.27-ರಾಜ್ಯ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಹಿರಿಯ ಮುಖಂಡ ಬಿ.ಕೆ.ಹರಿ ಪ್ರಸಾದ್ ಅವರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶಿಸಿದ್ದಾರೆ.

ಹಾಗೆಯೇ ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕರನ್ನಾಗಿ ಪ್ರಕಾಶ್ ರಾಠೋಡ್‍ರನ್ನು ನಿಯೋಜಿಸಲಾಗಿದೆ. ಇನ್ನು ಪರಿಷತ್ ವಿಪಕ್ಷಗಳ ಉಪನಾಯಕ ರನ್ನಾಗಿ ಕೆ.ಗೋವಿಂದರಾಜುರನ್ನು ನೇಮಕ ಮಾಡಲಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿರುವ ವಿಧಾನ ಪರಿಷತ್ ಅಧಿವೇಶನದಲ್ಲಿ ಈ ಬಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಅಧಿಕೃತವಾಗಿ ಪ್ರಕಟಣೆ ಮಾಡುವ ಸಾಧ್ಯತೆಗಳು ಇದೆ. ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರಾದ ನಸೀರ್ ಅಹ್ಮದ್ ಅಥವಾ ಸಿ.ಎಂ.ಇಬ್ರಾಹಿಂ ಅವರ ಹೆಸರುಗಳು ಕೇಳಿಬಂದಿದ್ದವು. ಆದರೆ, ಇದೀಗ ಎಐಸಿಸಿ ಅಂತಿಮ ಆದೇಶ ಹೊರಡಿಸಿದ್ದು, ಬಿ.ಕೆ.ಹರಿಪ್ರಸಾದ್ ಅವರನ್ನು ನೇಮಕ ಮಾಡಿದೆ.

ವಿರೋಧ ಪಕ್ಷದ ನಾಯಕರಾಗಿದ್ದ ಎಸ್.ಆರ್.ಪಾಟೀಲ ಹಾಗೂ ಮುಖ್ಯ ಸಚೇತಕರಾಗಿದ್ದ ನಾರಾಯಣ ಸ್ವಾಮಿ ಅವರ ಅವಧಿ ಜನವರಿ 5ಕ್ಕೆ ಮುಕ್ತಾಯವಾಗಿದೆ. ಸ್ಥಳೀಯ ಸಂಸ್ಥೆ ಗಳಿಂದ ವಿಧಾನಪರಿಷತ್‍ಗೆ ಇತ್ತೀಚೆಗೆ ನಡೆದ ಚುನಾವಣೆ ಯಲ್ಲಿ ಪಾಟೀಲ ಅವರಿಗೆ ಪಕ್ಷ ಟಿಕೆಟ್ ನೀಡಿರಲಿಲ್ಲ. ನಾರಾ ಯಣ ಸ್ವಾಮಿ ಮತ್ತೆ ಸ್ಫರ್ಧೆ ಮಾಡಲು ನಿರಾಕರಿಸಿದ್ದರು.

ಇನ್ನು ಹರಿಪ್ರಸಾದ್ ಈಡಿಗ ಸಮುದಾಯಕ್ಕೆ ಸೇರಿದವರು ಆಗಿದ್ದಾರೆ. ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ ಅವರಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿದ ಕಾಂಗ್ರೆಸ್, ಇದೀಗ ಹಿಂದುಳಿದ ಸಮುದಾಯದಲ್ಲಿ ತನ್ನ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಈ ಸಮುದಾಯದ ನಾಯಕರಿಗೆ ವಿಧಾನಪರಿಷತ್ ವಿಪಕ್ಷ ನಾಯಕ ಸ್ಥಾನವನ್ನು ನೀಡಿದೆ ಎಂಬ ಮಾತು ಕೂಡಾ ಕೇಳಿ ಬರುತ್ತಿದೆ.

Translate »