400 ಪಶುವೈದ್ಯರ ನೇಮಕ, ಸನ್ನಡತೆ ಆಧಾರದ  ಮೇಲೆ 166 ಕೈದಿಗಳ ಬಿಡುಗಡೆಗೆ ಸಂಪುಟ ಅಸ್ತು
News

400 ಪಶುವೈದ್ಯರ ನೇಮಕ, ಸನ್ನಡತೆ ಆಧಾರದ ಮೇಲೆ 166 ಕೈದಿಗಳ ಬಿಡುಗಡೆಗೆ ಸಂಪುಟ ಅಸ್ತು

January 28, 2022

ಬೆಂಗಳೂರು,ಜ.27-ಪಶು ಇಲಾಖೆಯಲ್ಲಿ 400 ಪಶುವೈದ್ಯರನ್ನು ಇಲಾಖೆ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಮತ್ತು ಸನ್ನಡತೆ ಆಧಾರದ ಮೇಲೆ 166 ಕೈದಿಗಳ ಬಿಡುಗಡೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಪಶು ಇಲಾಖೆಯಲ್ಲಿ ಸುಮಾರು 800 ಹುದ್ದೆಗಳು ಖಾಲಿ ಇದ್ದು, 400 ಪಶು ವೈದ್ಯರನ್ನು ನೇಮಕ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದರು. 2021-22ನೇ ಶೈಕ್ಷಣಿಕ ಸಾಲಿಗೆ ವಿದ್ಯಾವಿಕಾಸ ಪೆÇ್ರೀತ್ಸಾಹ ದಾಯಕ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿಗಳ ವಿದ್ಯಾರ್ಥಿಗಳಿಗೆ 93.27 ಕೋಟಿಗಳ ರೂ. ವೆಚ್ಚದಲ್ಲಿ ಉಚಿತವಾಗಿ ಸಮವಸ್ತ್ರ ವಿತರಿಸುವ ಬಗ್ಗೆಯೂ ತೀರ್ಮಾನಿಸಲಾಗಿದೆ ಎಂದರು. ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 14 ಎಂಜಿನಿಯರಿಂಗ್ ಕಾಲೇಜುಗಳು ಮತ್ತು 87 ಸರ್ಕಾರಿ ಪಾಲಿಟೆಕ್ನಿಕ್ ಗಳಲ್ಲಿ 6000 ಸ್ಮಾರ್ಟ್ ತರಗತಿಗಳನ್ನು ಆರಂಭಿಸಲು 97.50 ಕೋಟಿ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಮತ್ತು ಕರ್ನಾಟಕ ಗೇರು ಅಭಿವೃದ್ಧಿ ನಿಗಮಗಳನ್ನು ಒಂದೇ ನಿಗಮ ವಾಗಿ ವಿಲೀನಗೊಳಿಸಲು ಒಪ್ಪಿಗೆ ನೀಡಲಾಗಿದೆ ಎಂದರು. ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 166 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಮಾಧುಸ್ವಾಮಿ ತಿಳಿಸಿದರು. ರಾಜ್ಯದಲ್ಲಿ ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ವಸತಿ ಹಕ್ಕು ದಾಖಲೆಗಳನ್ನು ಹಾಗೂ ಕೃಷಿ ಭೂಮಿಯ ಹಕ್ಕು ದಾಖಲೆಗಳನ್ನು ಮತ್ತು ಪಟ್ಟಣ/ನಗರ ಆಸ್ತಿಗಳ ದಾಖಲೆಗಳನ್ನು ಸಿದ್ಧಪಡಿಸುವುದಕ್ಕಾಗಿ ಕೆಟಿಪಿಪಿ ಕಾಯ್ದೆ ಅನುಸರಿಸಿ ಅರ್ಹ ಖಾಸಗಿ ಏಜೆನ್ಸಿಗಳಿಂದ ಡ್ರೋನ್ ಒಂದು ಸೇವೆ ಅಥವಾ ವೈಮಾನಿಕ ಸಮೀಕ್ಷೆ ನಡೆಸಲು 287 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಅನುಮತಿ ನೀಡಲಾಗಿದೆ. ಕೇಂದ್ರ ಸರ್ಕಾರ 5 ಡ್ರೋನ್‍ಗಳನ್ನು ನೀಡಿತ್ತು. ಹೆಚ್ಚುವರಿ ಡ್ರೋನ್‍ಗಳನ್ನು ಖರೀದಿಸಿ ಸಮೀಕ್ಷೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

Translate »