ಮೈಸೂರು ರಿಂಗ್ ರಸ್ತೆ ಮುಂದುವರೆದ ಡಾಂಬರೀಕರಣಕ್ಕೆ ಉಸ್ತುವಾರಿ ಸಚಿವ ಸೋಮಶೇಖರ್ ಗುದ್ದಲಿಪೂಜೆ
ಮೈಸೂರು

ಮೈಸೂರು ರಿಂಗ್ ರಸ್ತೆ ಮುಂದುವರೆದ ಡಾಂಬರೀಕರಣಕ್ಕೆ ಉಸ್ತುವಾರಿ ಸಚಿವ ಸೋಮಶೇಖರ್ ಗುದ್ದಲಿಪೂಜೆ

February 23, 2021

ಮೈಸೂರು,ಫೆ.22(ಆರ್‍ಕೆ)-ಮೈಸೂರಿನ ರಿಂಗ್ ರಸ್ತೆ ಮುಂದುವರಿದ ಡಾಂಬರೀಕರಣ ಕಾಮಗಾರಿಗೆ ದಟ್ಟಗಳ್ಳಿಯ ಮಾರಮ್ಮ ದೇವಸ್ಥಾನದ ಬಳಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೋಮ ವಾರ ಬೆಳಿಗ್ಗೆ ಗುದ್ದಲಿಪೂಜೆ ನೆರವೇರಿಸಿದರು.

ಹಳೇ ಕೆಸರೆ ಗೇಟ್‍ನಿಂದ ದೇವೇಗೌಡ ವೃತ್ತ ಆರ್‍ಎಂಸಿ ಸರ್ಕಲ್, ಶ್ರೀರಾಂಪುರ ವೃತ್ತ, ದಟ್ಟಗಳ್ಳಿ ಕೆಇಬಿ ವೃತ್ತ ಮಾರ್ಗವಾಗಿ ಹಿನಕಲ್ ಜಂಕ್ಷನ್ ವರೆಗೆ 31.5 ಕಿ.ಮೀ. ಉದ್ದದ 6 ಪಥದ ರಿಂಗ್ ರೋಡ್ ಮತ್ತು ಎರಡೂ ಕಡೆಯ ಸರ್ವೀಸ್ ರಸ್ತೆ ಗಳ ಡಾಂಬರೀಕರಣ ಮತ್ತು ಅಭಿವೃದ್ಧಿಗೊಳಿಸುವ 14,471.88 ಲಕ್ಷ ರೂ. ಅಂದಾಜು ವೆಚ್ಚದ ಕಾಮ ಗಾರಿಯನ್ನು ಬೆಂಗಳೂರು ಮೂಲದ ಮೆ. ಗಣ ಪತಿ ಸ್ಟೋನ್ ಕ್ರಷರ್ಸ್ ಸಂಸ್ಥೆಗೆ ಒಪ್ಪಿಸಲಾಗಿದೆ.

ಹಳೇ ಕೆಸರೆ ಜಂಕ್ಷನ್‍ನಿಂದ ಕೊಲಂಬಿಯಾ ಏಷಿಯಾ ಆಸ್ಪತ್ರೆ, ಕೆ.ಆರ್.ಎಸ್. ರಸ್ತೆಯ ರಾಯಲ್ ಇನ್ ಜಂಕ್ಷನ್ ಮಾರ್ಗವಾಗಿ ಹಿನಕಲ್ ಜಂಕ್ಷನ್ ವರೆಗಿನ ರಿಂಗ್ ರಸ್ತೆ ಮತ್ತು ಸರ್ವೀಸ್ ರೋಡ್ ಡಾಂಬರೀಕರಣಗೊಳಿಸುವ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕೆಲಸ ಪ್ರಗತಿಯಲ್ಲಿದೆ. ಎರಡೂ ಹಂತಗಳ ಕಾಮಗಾರಿ ಪೂರ್ಣಗೊಂಡಲ್ಲಿ ಮೈಸೂರಿನ 42 ಕಿ.ಮೀ. ಹೊರವರ್ತುಲ ರಸ್ತೆಯಲ್ಲಿ ವಾಹನಗಳು ಸರಾಗ ವಾಗಿ ಓಡಾಡುವಂತಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ತಿಳಿಸಿದರು.

ನಂತರ ರಿಂಗ್ ರಸ್ತೆಯುದ್ದಕ್ಕೂ ಎಲ್‍ಇಡಿ ಬಲ್ಬ್ ಗಳನ್ನು ಅಳವಡಿಸಲಾಗುವುದು. ಮುಡಾ ಮತ್ತು ನಗರ ಪಾಲಿಕೆಯು ವಿದ್ಯುತ್ ಬಿಲ್ ಪಾವತಿಸಿ ರಿಂಗ್ ರಸ್ತೆಯ ಬೀದಿ ದೀಪಗಳನ್ನು ನಿರ್ವಹಿಸ ಲಿವೆ ಎಂದು ಸಚಿವರು ಇದೇ ಸಂದರ್ಭ ತಿಳಿಸಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ್ ಸಿಂಹ, ಮುಡಾ, ಕಾರ್ಪೋರೇಷನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಚೆಸ್ಕಾಂ ಅಧಿಕಾರಿಗಳು ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸುವ ವೇಳೆ ಉಪಸ್ಥಿತರಿದ್ದರು.

ನಮ್ಮ ಪಕ್ಷದವರೇ ಮೇಯರ್ ಆಗ್ತಾರೆ: ಸಚಿವ ಎಸ್.ಟಿ.ಸೋಮಶೇಖರ್ ವಿಶ್ವಾಸ
ಮೈಸೂರು,ಫೆ.22(ಆರ್‍ಕೆ)-ನಮ್ಮ ಪಕ್ಷದವರೇ ಮೈಸೂರು ಮೇಯರ್ ಆಗ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ದಟ್ಟಗಳ್ಳಿ ಬಳಿ ರಿಂಗ್ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಸಚಿವರು, ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿ, ಮೈಸೂರು ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಬಿಜೆಪಿ ಅಧಿಕಾರ ಹಿಡಿಯುವ ವಿಶ್ವಾಸವಿದೆ. ಜೆಡಿಎಸ್‍ನ ಹೆಚ್.ಡಿ. ಕುಮಾರ ಸ್ವಾಮಿಯೊಂದಿಗೆ ನಾನು ಚರ್ಚೆ ಮಾಡಿಲ್ಲ. ಪಕ್ಷದ ಅಧ್ಯಕ್ಷರು, ಸಂಸದ, ಶಾಸಕರು, ಪಾಲಿಕೆ ಸದಸ್ಯರೊಂದಿಗೆ ಮಾತನಾಡಿದ ನಂತರ ಒಮ್ಮತಕ್ಕೆ ಬರುತ್ತೇವೆ ಎಂದರು.

ಮೇಯರ್ ಚುನಾವಣೆ ಸಂಬಂಧ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರನ್ನು ಪಕ್ಷದ ವೀಕ್ಷಕರನ್ನಾಗಿ ನೇಮಿಸಲಾಗಿದೆ. ಪಾಲಿಕೆ ಸದಸ್ಯರ ಅಭಿಪ್ರಾಯ ಏನೆಂಬ ಮಾಹಿತಿ ನನಗಿಲ್ಲ. ಇಂದು ತಿಳಿದುಕೊಂಡು ನಂತರ ಮಾತ ನಾಡುತ್ತೇನೆ ಎಂದು ಸೋಮಶೇಖರ್ ನುಡಿದರು.

ಈ ವೇಳೆ ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ, ನಮ್ಮೊಂದಿಗೆ ಜೆಡಿಎಸ್‍ನವರು ಬಂದರೆ ಸಂತೋಷ. ಇಲ್ಲದಿ ದ್ದರೆ ಪಾಲಿಕೆಯಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಸಿದ್ಧ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರ್ಕಾರಗಳಿವೆ. ಮೈಸೂರು ಮಹಾನಗರ ಪಾಲಿಕೆಗೆ ಏನು ಕೆಲಸ ಆಗ ಬೇಕೋ ಅದನ್ನು ಮಾಡಿಸಿಕೊಳ್ಳುತ್ತೇವೆ ಎಂದರು.

ಈ ಹಿಂದೆ ಪಾಲಿಕೆ ಮತ್ತು ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅನುಭವ ಚೆನ್ನಾಗಿತ್ತು. ಕಳೆದೆರಡು ವರ್ಷಗಳಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಏನಾಗ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದನ್ನು ಅರ್ಥ ಮಾಡಿ ಕೊಂಡು ಜೆಡಿಎಸ್‍ನವರು ನಮ್ಮೊಂದಿಗೆ ಬಂದರೆ ಉತ್ತಮ ಎಂದೂ ಪ್ರತಾಪ್ ಸಿಂಹ ನುಡಿದರು.

ಎಲ್ಲೆಂದರಲ್ಲಿ ಡೆಬ್ರಿಸ್ ಹಾಕಿದರೆ ಜೈಲು: ಸೋಮಶೇಖರ್
ಮೈಸೂರು,ಫೆ.22(ಆರ್‍ಕೆ)- ಮೈಸೂರು ನಗರದಾದ್ಯಂತ ಎಲ್ಲೆಂದರಲ್ಲಿ ಕಟ್ಟಡ ತ್ಯಾಜ್ಯ (ಡೆಬ್ರಿಸ್) ಸುರಿದರೆ ಅಂತಹ ವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ, ಜೈಲಿಗೆ ಕಳುಹಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ದಟ್ಟಗಳ್ಳಿ ಬಳಿ ರಿಂಗ್ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡು ತ್ತಿದ್ದ ಅವರು, ಈಗಾಗಲೇ ರಿಂಗ್ ರಸ್ತೆ ಯಲ್ಲಿ ಸುರಿದಿದ್ದ ಡೆಬ್ರಿಸ್ ಅನ್ನು ತೆರವು ಮಾಡಿ ಸ್ವಚ್ಛಗೊಳಿಸಲಾಗಿದೆ. ಇದೀಗ ಕೋಟ್ಯಾಂತರ ರೂ. ಖರ್ಚು ಮಾಡಿ ಡಾಂಬರೀಕರಣ ಕಾಮಗಾರಿಯನ್ನೂ ಮಾಡಲಾಗುತ್ತಿದೆ ಎಂದರು.

ರಿಂಗ್ ರಸ್ತೆಯ ಸರ್ವಿಸ್ ರೋಡ್ ನಲ್ಲಿ ಅಥವಾ ಮೈಸೂರು ನಗರದ ಯಾವುದೇ ಖಾಲಿ ಜಾಗದಲ್ಲಿ ಕಟ್ಟಡ ತ್ಯಾಜ್ಯ, ಕೋಳಿ, ಮಾಂಸದ ತ್ಯಾಜ್ಯ ಅಥವಾ ಇನ್ನಿತರ ಕಸ ತಂದು ಎಲ್ಲೆಂ ದರಲ್ಲಿ ಬೇಕಾಬಿಟ್ಟಿ ಸುರಿದರೆ ಅಂತಹ ವರನ್ನು ಮುಲಾಜಿಲ್ಲದೇ ಜೈಲಿಗೆ ಕಳುಹಿಸಲಾಗುವುದು ಎಂದರು.

ಅಲ್ಲಲ್ಲಿ ಸಿಸಿ ಕ್ಯಾಮರಾಗಳನ್ನು ಅಳ ವಡಿಸಲಾಗಿದೆಯಲ್ಲದೆ, ವಿಚಕ್ಷಕ ದಳ, ಪೊಲೀಸ್ ತಂಡದ ಸಿಬ್ಬಂದಿ ಗಸ್ತು ತಿರು ಗುತ್ತಿರುತ್ತಾರೆ. ಪಾಲಿಕೆ, ಮುಡಾ ಅಧಿಕಾರಿ ಗಳೂ ರಿಂಗ್ ರಸ್ತೆಯಲ್ಲಿ ನಿಗಾ ವಹಿಸು ವುದರಿಂದ ಡೆಬ್ರಿಸ್ ಹಾಕುವವರು ತಪ್ಪಿಸಿ ಕೊಳ್ಳಲು ಸಾಧ್ಯವಿಲ್ಲ. ಪತ್ತೆಯಾದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲು ಹಿಂಜರಿಯುವುದಿಲ್ಲ. ಉತ್ಪತ್ತಿ ಯಾದ ಕಟ್ಟಡ ತ್ಯಾಜ್ಯವನ್ನು ನಿಗದಿ ಪಡಿಸಿರುವ ಹಂಚ್ಯಾ-ಸಾತಗಳ್ಳಿ ಬಳಿ ಸ್ಥಳಕ್ಕೆ ಕೊಂಡೊಯ್ದು ಹಾಕಬೇಕು ಎಂದರು.

 

 

Translate »