ಕುವೆಂಪು ನಿವಾಸಕ್ಕೆ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ
ಮೈಸೂರು

ಕುವೆಂಪು ನಿವಾಸಕ್ಕೆ ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ

November 1, 2020

ಮೈಸೂರು,ಅ.31-ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚನೆ ಕುರಿತು ಸರ್ಕಾ ರದ ಮಟ್ಟದಲ್ಲಿ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದರು. ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಒಂಟಿಕೊಪ್ಪಲಿನಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ನಿವಾಸ `ಉದಯ ರವಿ’ಗೆ ಶನಿವಾರ ಭೇಟಿ ನೀಡಿ ಕುವೆಂಪು ಅವರ ಪುತ್ರಿ ತಾರಣಿ ಮತ್ತು ಅಳಿಯ ವಿಶ್ರಾಂತ ಕುಲಪತಿ ಪ್ರೊ. ಚಿದಾನಂದಗೌಡ ಅವರ ಕುಶಲೋಪರಿ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ಬೃಹತ್ ಮೈಸೂರು ಮಹಾನಗರ ಪಾಲಿಕೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿರುವ 8-9 ಗ್ರಾಮ ಪಂಚಾಯ್ತಿಗಳಲ್ಲಿ 50ರಿಂದ 60 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದೆ ಎಂಬ ಮಾಹಿತಿ ನೀಡಿದ್ದಾರೆ. ಗ್ರಾಮ ಪಂಚಾಯ್ತಿಗೆ ಇಂತಿಷ್ಟೇ ಜನಸಂಖ್ಯೆ ಇರಬೇಕು ಎಂಬ ಮಿತಿ ಇದೆ. ಆ ಮಿತಿಯನ್ನು ಮೀರಿದರೆ ಅಂತಹ ಗ್ರಾಮ ಪಂಚಾಯ್ತಿಗಳನ್ನು ಪಟ್ಟಣ ಪಂಚಾಯ್ತಿ ಅಥವಾ ಪುರಸಭೆಯಾಗಿ ಮೇಲ್ದರ್ಜೆಗೇರಿಸಬೇಕು ಎಂಬುದು ನಿಯಮ.

ಆ ವಿಚಾರವಾಗಿ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಿದ್ದಾರೆ. ಸರ್ಕಾರವು ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಅದನ್ನು ಹೊರತುಪಡಿಸಿ ಗ್ರಾಪಂಗಳನ್ನು ಮೈಸೂರು ಪಾಲಿಕೆಗೆ ಸೇರಿಸಿ ಬೃಹತ್ ಮೈಸೂರು ಮಹಾನಗರ ಪಾಲಿಕೆ ರಚಿಸುವ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಆರ್‍ಆರ್ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಭಿವೃದ್ಧಿ ಆಧಾರದ ಮೇರೆಗೆ ನಾವು ಮತ ಯಾಚಿಸಿದ್ದೇವೆ. ಮುನಿರತ್ನ ಅವರು ಆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಯಡಿಯೂರಪ್ಪ ನವರು ಮುಖ್ಯಮಂತ್ರಿಯಾದ ನಂತರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಇದರಿಂದಾಗಿ ಬಿಜೆಪಿ ಅಭ್ಯರ್ಥಿಯಾಗಿರುವ ಮುನಿರತ್ನ, 30ರಿಂದ 35 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ. ರಾಜೀವ್, ಬಿಜೆಪಿ ಮಾಧ್ಯಮ ಸಂಚಾಲಕ ಕೇಬಲ್ ಮಹೇಶ್ ಉಪಸ್ಥಿತರಿದ್ದರು.

 

 

 

Translate »