ಸುಣ್ಣದಕೇರಿ ಮಹದೇಶ್ವರ ದೇಗುಲಕ್ಕೆ ಎಂಕೆಎಸ್ ಕೋಟಿ ಅನುದಾನ ಸತ್ಯಕ್ಕೆ ದೂರ
ಮೈಸೂರು

ಸುಣ್ಣದಕೇರಿ ಮಹದೇಶ್ವರ ದೇಗುಲಕ್ಕೆ ಎಂಕೆಎಸ್ ಕೋಟಿ ಅನುದಾನ ಸತ್ಯಕ್ಕೆ ದೂರ

March 5, 2021

ಮೈಸೂರು,ಮಾ.4(ಪಿಎಂ)-ಮೈಸೂರಿನ ಸುಣ್ಣದಕೇರಿಯ ನಾಯಕರ ಸಂಘಕ್ಕೆ ಸೇರಿದ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ತಾವು ಶಾಸಕರಾಗಿದ್ದ ಅವಧಿ ಯಲ್ಲಿ ಕೋಟಿ ರೂ. ಅನುದಾನ ನೀಡಿರುವುದಾಗಿ ಎಂ.ಕೆ.ಸೋಮಸೇಖರ್ ಕೆಲ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಇದು ಸತ್ಯಕ್ಕೆ ದೂರ ಎಂದು ಸಂಘದ ಕಾರ್ಯದರ್ಶಿ ವಿ. ಗೋವಿಂದರಾಜು ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂ.ಕೆ.ಸೋಮಶೇಖರ್ ಅವರ ಅವಧಿಯಲ್ಲಿ ನಮ್ಮ ಸಂಘದ ವ್ಯಾಪ್ತಿಯ ದೇವಸ್ಥಾನಕ್ಕೆ ಒಟ್ಟು 22 ಲಕ್ಷ ರೂ. ಮಾತ್ರ ಅನುದಾನ ಬಂದಿದ್ದು, ಕೋಟಿ ರೂ. ಅನುದಾನ ಬಂದಿಲ್ಲ ಎಂದು ಹೇಳಿದರು.

2006ರ ಅವಧಿಯಲ್ಲಿ 6 ಲಕ್ಷ ರೂ. ಹಾಗೂ 2017ರ ಅವಧಿಯಲ್ಲಿ 16 ಲಕ್ಷ ರೂ. ಮಾತ್ರ ಅನುದಾನ ನಮ್ಮ ದೇವಸ್ಥಾನಕ್ಕೆ ಬಂದಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ. ಎಂ.ಕೆ.ಸೋಮಶೇಖರ್ ಈ ರೀತಿಯ ಹೇಳಿಕೆ ನೀಡಿರುವ ಹಿನ್ನೆಲೆ ಯಲ್ಲಿ ಎಲ್ಲಾ ಜನಾಂಗದ ಭಕ್ತಾದಿಗಳು, ಸೇವಾರ್ಥದಾರರು ಕೋಟಿ ರೂ. ಅನುದಾನ ಕಲ್ಪಿಸಿದರೂ ದೇವಸ್ಥಾನದ ಅಭಿವೃದ್ಧಿ ಏಕಾಗಿಲ್ಲ? ಎಂದು ಪ್ರಶ್ನೆ ಮಾಡುತ್ತಿದ್ದಾರೆ ಎಂದರು.

ಜೊತೆಗೆ ಸಂಘದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರಲ್ಲದೆ, ಎಂ.ಕೆ.ಸೋಮಶೇಖರ್ ಅವರು ತಮ್ಮ ಹೇಳಿಕೆ ಸಂಬಂಧ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷ ಬಿ.ಸಿದ್ದಪ್ಪ, ಖಜಾಂಚಿ ವಿಜಯಕುಮಾರ್, ನಿರ್ದೇಶಕ ಕುಮಾರ್ ಉತ್ತಮ್ ಸುದ್ದಿಗೋಷ್ಠಿಯಲ್ಲಿದ್ದರು.

Translate »