ಕಣಿವೆ ತೂಗು ಸೇತುವೆ ದುರಸ್ತಿಗೆ ಕ್ರಮ ಶಾಸಕ ಅಪ್ಪಚ್ಚು ರಂಜನ್ ಭರವಸೆ
ಕೊಡಗು

ಕಣಿವೆ ತೂಗು ಸೇತುವೆ ದುರಸ್ತಿಗೆ ಕ್ರಮ ಶಾಸಕ ಅಪ್ಪಚ್ಚು ರಂಜನ್ ಭರವಸೆ

October 2, 2018

ಕುಶಾಲನಗರ:  ಸೋಮವಾರಪೇಟೆ ತಾಲೂಕಿನ ಕಣಿವೆ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಬಳಿ ನಿರ್ಮಿಸಿರುವ ತೂಗುಸೇತುವೆ ನದಿ ಪ್ರವಾಹಕ್ಕೆ ಸಿಲುಕಿ ಸಂಪೂರ್ಣ ಹಾನಿಯಾಗಿದ್ದು, ಸದ್ಯದಲ್ಲಿಯೇ ಸೇತುವೆ ದುರಸ್ತಿ ಪಡಿಸಿ ಜನರ ಅನುಕೂಲಕ್ಕೆ ಒದಗಿಸ ಲಾಗುವುದು ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.

ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ರಂಜನ್, ಕಾವೇರಿ ಹಾಗೂ ಹಾರಂಗಿ ನದಿ ಪ್ರವಾಹದಿಂದ ಸಂಪೂರ್ಣ ಹಾನಿಯಾಗಿರುವ ಕಣಿವೆ ತೂಗು ಸೇತುವೆಯನ್ನು ಪರಿಶೀಲಿಸಿದರು.

ಕಳೆದ ಎರಡು ತಿಂಗಳಿಂದ ಸೇತುವೆ ದುರಸ್ತಿಯಾಗದೆ ಈ ಭಾಗದ ಜನರಿಗೆ ತುಂಬಾ ತೊಂದರೆ ಉಂಟಾಗಿದೆ. ಕೊಡಗು ಮತ್ತು ಮೈಸೂರು ಜಿಲ್ಲೆಗಳ ಗಡಿ ಗ್ರಾಮಗಳಿಗೆ ಸಂಪರ್ಕ ಏಕೈಕ ಸೇತುವೆ ಇದಾಗಿತ್ತು. ಸಂಚಾರ ಸ್ಥಗಿತಗೊಂಡಿರುವುದರಿಂದ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಆದಷ್ಟು ಬೇಗ ಈ ಸೇತುವೆಯನ್ನು ದುರಸ್ತಿ ಮಾಡಿಸಬೇಕು ಎಂದು ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದರು.

ಗ್ರಾಮಸ್ಥರ ಮನವಿಯನ್ನು ಆಲಿಸಿದ ಶಾಸಕ ರಂಜನ್, ಈ ಸೇತುವೆಯನ್ನು ಸರಿಪಡಿಸಿ ಎರಡು ಜಿಲ್ಲೆಗಳ ಜನರಿಗೆ ಅನುಕೂಲ ಮಾಡಿಕೊಡಲಾಗುವುದು. ಈ ಹಿಂದೆ ಇಲ್ಲಿ ಸೇತುವೆ ಆಗಬೇಕು ಎಂದು ನಾನು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಲ್ಲಿ ಮನವಿ ಮಾಡಿದ ಮೇರೆಗೆ ರೂ.45 ಲಕ್ಷ ವೆಚ್ಚದಲ್ಲಿ ತೂಗು ಸೇತುವೆ ನಿರ್ಮಾಣಗೊಂಡಿತು. ಆದರೆ ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಯಿಂದ ನದಿಗಳು ಅಪಾಯಮಟ್ಟ ಮೀರಿ ಹರಿದ ಪರಿಣಾಮ ಸೇತುವೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.

ಈ ಸೇತುವೆ ದುರಸ್ತಿಗೊಳಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಪ್ರಕೃತಿ ವಿಕೋಪದ ಅನುದಾನದಲ್ಲಿಯೇ ಈ ಸೇತುವೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭ ದೇವಸ್ಥಾನ ಸಮಿತಿ ಸದಸ್ಯರು, ಗ್ರಾಮಸ್ಥರು ಇದ್ದರು.

Translate »