ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಲು ಕಾರ್ಯಕರ್ತರಿಗೆ ಕರೆ
ಕೊಡಗು

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಶ್ರಮಿಸಲು ಕಾರ್ಯಕರ್ತರಿಗೆ ಕರೆ

October 2, 2018

ಗೋಣಿಕೊಪ್ಪಲು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಬಹುಮತದಿಂದ ಗೆಲ್ಲಲು ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ವಿರಾಜಪೇಟೆ ಕ್ಷೇತ್ರ ಬಿಜೆಪಿ ವತಿಯಿಂದ ಆಯೋಜಿಸಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.

ನರೇಂದ್ರಮೋದಿ ಅವರ ಅಧಿಕಾರ ಅವಧಿಯಲ್ಲಿ ಮಾಡಿದ ಸಾಧನೆಯನ್ನು ಪ್ರತಿ ಮನೆಗಳಿಗೆ ಮುಟ್ಟಿಸುವ ಕೆಲಸ ಕಾರ್ಯಕರ್ತರುಗಳಿಂದ ಆಗಬೇಕಿದೆ. ಮೋದಿ ಅವರ ಯೋಜನೆಗಳು ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕಾದರೆ ಬಿಜೆಪಿ ಪರ ಮತಗಳ ರೂಪದಲ್ಲಿ ಪರಿವರ್ತನೆಗೊಳ್ಳುವಂತೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದರು. ಇದಕ್ಕೆ ಕಾರ್ಯಕರ್ತರುಗಳ ಶ್ರಮ ಹೆಚ್ಚಿನದಾಗಿದೆ. ಒಗ್ಗಟ್ಟಿನ ಮೂಲಕ ಫಲಿತಾಂಶ ಹೊರತರಬೇಕಿದೆ ಎಂದರು.

ರಾಜ್ಯದಲ್ಲಿ ಎಲ್ಲಾ ಸಂಸದರಿಗಿಂತ ಹೆಚ್ಚು ಕೆಲಸ ಮಾಡಿರುವ ತೃಪ್ತಿ ನನಗಿದೆ. ಕೇಂದ್ರದ ಸಾಕಷ್ಟು ಯೋಜನೆ ಗಳು ಜನರಿಗೆ ಲಭಿಸಿದೆ. ಎಲ್ಲಾ ಯೋಜನೆಗಳು ಜನರಿಗೆ ಪ್ರಯೋಜನಕ್ಕೆ ಬರುವಂತಾಗಿದೆ ಎಂದರು.

ಭೂಕುಸಿತಕ್ಕೆ ಕೇಂದ್ರದ ಪ್ಯಾಕೇಜ್ ಇರಲಿದೆ. ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ನಡೆದ ಭೂಕುಸಿತವನ್ನು ಪರಿಶೀಲಿಸಿ ವಿಶೇಷ ಪ್ಯಾಕೇಜ್ ಘೋಷಿಸಲಾಗುವುದು. ಈಗಾಗಲೇ ಕೇಂದ್ರದ ತಂಡ ವಿಶೇಷ ಪರಿಶೀಲನೆ ನಡೆಸುತ್ತಿದೆ. ಅವರ ವರದಿ ಯನ್ನಾಧರಿಸಿ ಕೇಂದ್ರದಿಂದ ಪ್ಯಾಕೇಜ್ ಘೋಷಣೆಯಾಗಲಿದೆ ಎಂದರು.

ಶಾಸಕ ಕೆ. ಜಿ. ಬೋಪಯ್ಯ ಮಾತನಾಡಿ, 104 ಕ್ಷೇತ್ರಗಳನ್ನು ವಿಧಾನಸಭೆಯಲ್ಲಿ ಗೆದ್ದಿದ್ದರೂ ಕೂಡ ಪ್ರತಿಪಕ್ಷ ಸ್ಥಾನದಲ್ಲಿ ಕೂರುವಂತಾಗಿದೆ. ಇದರಿಂದಾಗಿ ಯಾರೂ ಕೂಡ ಮೈಮರೆಯಬಾರದು ಎಂಬ ಸ್ಪಷ್ಟ ಸಂದೇಶ ದೊರೆತಂತಾಗಿದೆ. ಇದನ್ನು ಮನಗಂಡು ಎಲ್ಲರೂ ಬಿಜೆಪಿಗೆ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಿಸಿಕೊಡುವಲ್ಲಿ ಶ್ರಮಿಸಬೇಕು ಎಂದರು.

ಈ ಸಂದರ್ಭ ಕೇಂದ್ರ ಸರ್ಕಾರದಿಂದ ಜಾರಿಗೆ ತಂದಿರುವ ಯೋಜನೆ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಅಭಿವೃದ್ಧಿ ಕಾರ್ಯಗಳ ಪಟ್ಟಿ ಬಿಡುಗಡೆಗೊಳಿಸಲಾಯಿತು. ಇದನ್ನು ಜನರಿಗೆ ತಲುಪಿಸಲು ಕಾರ್ಯಕರ್ತ ರಿಗೆ ಸೂಚಿಸಲಾಯಿತು. 4 ವರ್ಷಗಳಲ್ಲಿ ಮೋದಿ, ಮೈಸೂರು-ಕೊಡಗಿಗೆ ಕೊಟ್ಟಿದ್ದೇನು, ಪ್ರತಾಪ್ ಸಿಂಹ ತಂದಿದ್ದೇನು ಎಂಬ ಪಟ್ಟಿ ಬಿಡುಗಡೆ ಮಾಡಲಾಯಿತು.

ಜಿಪಂ ಉಪಾಧ್ಯಕ್ಷೆ ಸ್ಥಾನಕ್ಕೆ ಮನವಿ: ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಸ್ಥಾನವನ್ನು ದಕ್ಷಿಣ ಕೊಡಗಿಗೆ ನೀಡಬೇಕು, ಈ ಸ್ಥಾನವನ್ನು ಬಿಟ್ಟಂಗಾಲ ಕ್ಷೇತ್ರದ ಅಪ್ಪಂಡೇರಂಡ ಭವ್ಯ ಅವರಿಗೆ ನೀಡಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಅಪ್ಪಂಡೇರಂಡ ಭವ್ಯ ಹಾಗೂ ಕಾರ್ಯಕರ್ತರು ಮನವಿ ಮಾಡಿಕೊಂಡರು.

ಈ ಬಾರಿಯ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸ್ಥಾನ ಪಡೆದಿರುವ ಲೋಕೇಶ್ವರಿ ಗೋಪಾಲ್ ಅವರ ಎರಡೂವರೆ ವರ್ಷದ ಅವಧಿ ನಂತರ ಮತ್ತೊಬ್ಬರಿಗೆ ಅವಕಾಶ ನೀಡಲಾಗುವುದು ಎಂಬ ಒಪ್ಪಂದ ಪಕ್ಷ ದಲ್ಲಿದೆ. ಇದರಂತೆ ಸಾಮಾನ್ಯ ಮಹಿಳೆ ಸ್ಥಾನವಾಗಿರುವ ಉಪಾಧ್ಯಕ್ಷ ಸ್ಥಾನವನ್ನು ನೀಡಬೇಕು ಎಂದು ಒತ್ತಾಯಿಸಲಾಯಿತು. ಈ ಸಂದರ್ಭ ಕ್ಷೇತ್ರ ಅಧ್ಯಕ್ಷ ಅರುಣ್ ಭೀಮಯ್ಯ, ಎಂಎಲ್ಸಿ ಸುನಿಲ್ ಸುಬ್ರಮಣಿ, ಕಾಂತಿ ಸತೀಶ್ ಇತರರು ಇದ್ದರು.

Translate »