ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ: ಅತ್ತೆ-ಮಾವ, ನಾದಿನಿ ಬಂಧನ, ಗಂಡ ನಾಪತ್ತೆ
ಮಂಡ್ಯ

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ: ಅತ್ತೆ-ಮಾವ, ನಾದಿನಿ ಬಂಧನ, ಗಂಡ ನಾಪತ್ತೆ

October 2, 2018

ಕೆ.ಆರ್.ಪೇಟೆ:  ವರದಕ್ಷಿಣೆ ಕಿರುಕುಳ ನೀಡಿ ಗೃಹಿಣಿಯನ್ನು ನೇಣು ಬಿಗಿದು ಹತ್ಯೆ ಮಾಡಿರುವ ಘಟನೆ ತಾಲೂಕಿನ ಬೂಕನಕೆರೆ ಗ್ರಾಮ ದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಅಶೋಕ್ ಪತ್ನಿ ಗಾನಶ್ರೀ ಅಲಿಯಾಸ್ ಶೃತಿ(28) ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಗೃಹಿಣಿ. ಪ್ರಕರಣ ಸಂಬಂಧ ಮೃತ ಗಾನಶ್ರೀ ಅವರ ಮಾವ ಬೂಕನಕೆರೆಯ ನಂಜೇಗೌಡ, ಅತ್ತೆ ಜಯಮ್ಮ, ನಾದಿನಿ ಆಶಾ ಅವರನ್ನು ಕೊಲೆ ಆರೋಪದಡಿ ಬಂಧಿಸಲಾಗಿದ್ದು, ಪತಿ ಅಶೋಕ ನಾಪತ್ತೆಯಾಗಿದ್ದಾನೆ.

ಘಟನೆ ವಿವರ: ಕಳೆದ 8 ವರ್ಷಗಳ ಹಿಂದೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ಎ.ಎಸ್.ಪರಶಿವಮೂರ್ತಿ ಅವರ ಪುತ್ರಿ ಗಾನಶ್ರೀ(ಶೃತಿ) ಅವರನ್ನು ಬೂಕನಕೆರೆ ಗ್ರಾಮದ ನಂಜೇಗೌಡರ ಮಗ ಅಶೋಕನಿಗೆ ಸಾಕಷ್ಟು ವರೋಪಚಾರ ನೀಡಿ ವಿವಾಹ ಮಾಡಿಕೊಡಲಾಗಿತ್ತು. ವಿವಾಹವಾದ 3 ವರ್ಷಗಳವರೆಗೆ ದಂಪತಿಗಳು ಅನ್ಯೋನ್ಯವಾಗಿ ದ್ದರು. ಆದರೆ ಮೃತಳ ಪತಿ ಅಶೋಕ ಕುಡಿತ ಮತ್ತಿತರ ಚಟಗಳ ದಾಸನಾಗಿ ಪತ್ನಿ ಗಾನಶ್ರೀಗೆ ತನ್ನ ತವರು ಮನೆಯಿಂದ ಇನ್ನಷ್ಟು ವರದಕ್ಷಿಣೆ ತರುವಂತೆ ಒತ್ತಾಯಿಸಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದನು. ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದ ಅತ್ತೆ ಜಯಮ್ಮ, ಮಾವ ನಂಜೇಗೌಡ, ನಾದಿನಿ ಆಶಾ ಕೂಡಾ ಗಾನಶ್ರೀಗೆ ಚಿತ್ರಹಿಂಸೆ ನೀಡುತ್ತಾ ಸದಾ ಮನೆಯಲ್ಲಿ ಜಗಳವಾಡುವುದು. ಗಂಡ ಹೆಂಡತಿಯನ್ನು ಅನ್ಯೋನ್ಯವಾಗಿರಲು ಬಿಡದೇ ಬೇರೆ ಮಾಡಲು ಪ್ರಯತ್ನಿಸುತ್ತಾ ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು.

ಈ ಬಗ್ಗೆ ಹಲವು ಬಾರಿ ಗಾನಶ್ರೀ ಪೋಷಕರು ನ್ಯಾಯ ಪಂಚಾಯಿತಿ ಮಾಡಿದ್ದರೂ, ಅಶೋಕ್ ಸೇರಿದಂತೆ ಆತನ ಪೋಷಕರು ಗಾನಶ್ರೀಗೆ ಕಿರುಕುಳ ನೀಡುವುದನ್ನು ಬಿಟ್ಟಿರಲಿಲ್ಲ. ಈ ನಡುವೆ ಸೆ.30ರಂದು ಬೆಳಿಗ್ಗೆ ನನ್ನ ಮಗಳು ಗಾನಶ್ರೀ ಮೇಲೆ ಆಕೆಯ ಗಂಡ, ಅತ್ತೆ, ಮಾವ ಹಾಗೂ ನಾದಿನಿ ಸೇರಿಕೊಂಡು ದೈಹಿಕ ಹಲ್ಲೆ ನಡೆಸಿ ನೇಣು ಬಿಗಿದು ಹತ್ಯೆ ಮಾಡಿದ್ದಾರೆ. ನಂತರ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಮಗೆ ಕರೆ ಮಾಡಿದ್ದರು. ತಕ್ಷಣ ನನ್ನ ಮಗಳ ಗಂಡನ ಮನೆಗೆ ಹೋಗುವಷ್ಟರಲ್ಲಿ ಅವರೆಲ್ಲಾ ಮನೆಯಿಂದ ನಾಪತ್ತೆಯಾಗಿದ್ದರು ಎಂದು ಮೃತಳ ತಂದೆ ಎ.ಎಸ್.ಪರಶಿವಮೂರ್ತಿ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಮೃತ ಗಾನಶ್ರೀ ಅವರಿಗೆ ಪುತ್ರಿ ಅಹಲ್ಯ(6) ಮತ್ತು ಪುತ್ರ ಮೌನಿತ್(8) ಎಂಬ ಇಬ್ಬರು ಮಕ್ಕಳಿದ್ದಾರೆ.

ದೂರು ಸ್ವೀಕರಿಸಿರುವ ಸಿಪಿಐ ಹೆಚ್.ಬಿ.ವೆಂಕಟೇಶಯ್ಯ, ಎಸ್‍ಐ ಆನಂದ್‍ಗೌಡ ಗ್ರಾಮದಲ್ಲಿ ತಲೆ ಮರೆಸಿಕೊಂಡಿದ್ದ ಮೃತ ಗೃಹಿಣಿಯ ಅತ್ತೆ ಜಯಮ್ಮ, ಮಾವ ನಂಜೇಗೌಡ, ನಾದಿನಿ ಆಶಾ ಅವರನ್ನು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಗಂಡ ಅಶೋಕನಿಗಾಗಿ ತೀವ್ರ ಶೋಧ ಕೈಗೊಂಡಿದ್ದಾರೆ.

Translate »