ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಸೇರಿದ ಅರಮನೆ ಮೈದಾನ ಒತ್ತುವರಿ ತೆರವು ಶಾಸಕ ಬಿ.ಹರ್ಷವರ್ಧನ್ ಪರಿಶೀಲನೆ
ಮೈಸೂರು ಗ್ರಾಮಾಂತರ

ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಸೇರಿದ ಅರಮನೆ ಮೈದಾನ ಒತ್ತುವರಿ ತೆರವು ಶಾಸಕ ಬಿ.ಹರ್ಷವರ್ಧನ್ ಪರಿಶೀಲನೆ

October 22, 2020

ನಂಜನಗೂಡು,ಅ.21(ರವಿ)-ನಗರದ ರಾಷ್ಟ್ರಪತಿ ರಸ್ತೆಯಲ್ಲಿ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಸೇರಿದ ಅರಮನೆ ಮೈದಾನವನ್ನು ಅತಿಕ್ರಮಿಸಿಕೊಂಡು ಅನಧಿಕೃತವಾಗಿ ನಿರ್ಮಿಸಿದ್ದ ಖಾಸಗಿ ಅಂಗಡಿ ಮುಂಗಟ್ಟುಗಳನ್ನು ಬುಧವಾರ ತೆರವುಗೊಳಿಸಾಯಿತು.

ಜೆಎಸ್‍ಎಸ್ ಬಾಲಕಿಯರ ಫ್ರೌಡಶಾಲೆ ಮುಂಭಾಗದ ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನಕ್ಕೆ ಸೇರಿದ 148×116 ಅಡಿ ವಿಸ್ತೀರ್ಣದ ನಿವೇಶನವು ಬೇನಾಮಿ ವ್ಯಕ್ತಿಗಳ ವ್ಯಾಪಾರ-ವ್ಯವಹಾರಕ್ಕೆ ಒಳಪಟ್ಟಿತ್ತು. ಶಾಸಕ ಬಿ.ಹರ್ಷವರ್ಧನ್ ಸೂಚನೆಯಂತೆ ImಆU ತಹಸೀಲ್ದಾರ್ ಕೆ.ಎಂ.ಮಹೇಶ್‍ಕುಮಾರ್ ನೇತೃತ್ವz ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಅನಧೀಕೃತ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ಖಾಸಗಿ ವ್ಯಕ್ತಿಗಳ ಅನುಭೋಗದಲ್ಲಿದ್ದ ನಿವೇಶನವನ್ನು ಸರ್ಕಾರದ ವಶಕ್ಕೆ ಪಡೆಯಲಾಯಿತು.

ಅರಮನೆ ಮೈದಾನದ ಒತ್ತುವರಿ ತೆರವು ಪ್ರದೇಶಕ್ಕೆ ಶಾಸಕ ಬಿ.ಹರ್ಷವರ್ಧನ್ ಭೇಟಿ ನೀಡಿ ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. ದೇವಾಲಯಕ್ಕೆ ಸೇರಿದ ಸರ್ಕಾರಿ ಜಾಗ ಮತ್ತೆ ಅತಿಕ್ರಮಣಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಲು ದೇವಾಲಯದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿರುವವರ ಬಗ್ಗೆ ದೂರುಗಳು ಕೇಳಿ ಬಂದಲ್ಲಿ ದಾಖಲಾತಿಗಳನ್ನು ಪರಿಶೀಲಿಸಿ ಮುಲಾಜಿಲ್ಲದೆ, ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಹಂತ-ಹಂತವಾಗಿ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಸೇರಿದ ಆಸ್ತಿ ಒತ್ತುವರಿ ತೆರವುಗೊಳಿಸಿ ದೇವಾಲಯದ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ತಹಸೀಲ್ದಾರ್ ಕೆ.ಎಂ.ಮಹೇಶ್‍ಕುಮಾರ್ ಮಾತನಾಡಿ, ಅರಮನೆ ಮೈದಾನ ಪ್ರದೇಶದ ಒತ್ತುವರಿ ತೆರವು ಮಾಡಿ ತಂತಿಬೇಲಿ ಅಳವಡಿಸಲಾಗುತ್ತಿದೆ. ಮತ್ತೆ ಖಾಸಗಿ ವ್ಯಕ್ತಿಗಳು ನೀವೇಶನ ಅತಿಕ್ರಮಣಕ್ಕೆ ಮುಂದಾದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಸಿದರು.

ಈ ಸಂದರ್ಭ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಇಂಧನ್‍ಬಾಬು, ಸದಸ್ಯರಾದ ಎನ್.ಟಿ.ಗಿರೀಶ್, ಶ್ರೀಧರ್, ಶಶಿರೇಖಾ, ಮಂಜುಳಾ ಮಧು, ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಸಿ.ಚಿಕ್ಕರಂಗನಾಯಕ, ನಗರಸಭೆ ಪೌರಾಯುಕ್ತ ಕರಿಬಸವಯ್ಯ, ಎಇಇ ಶ್ರೀನಿವಾಸ್, ಪರಿಸರ ಅಭಿಯಂತರಾದ ಅರ್ಚನಾ ಆರಾಧ್ಯ, ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಇಓ ವೆಂಕಟೇಶ್‍ಪ್ರಸಾದ್, ಕಾಂಗ್ರೆಸ್ ಮುಖಂಡರಾದ ಕೆಂಪಣ್ಣ, ಜಿಪಂ ಮಾಜಿ ಸದಸ್ಯ ಕೆ.ಬಿ.ಸ್ವಾಮಿ, ಕಂದಾಯ ಇಲಾಖೆ ಆರ್‍ಐ ಪ್ರಕಾಶ್ ಇದ್ದರು.

ಸಾರ್ವಜನಿಕರಿಂದ ಮೆಚ್ಚುಗೆ: ಹಲವು ದಶಕಗಳಿಂದ ಅರಮನೆ ನಿವೇಶನದಲ್ಲಿ ಬೇನಾಮಿ ವ್ಯಕ್ತಿಗಳು ಸೌಧೆ ಡಿಪೋ ವ್ಯಾಪಾರ ನಡೆಸುತ್ತಿದ್ದರು. ಆನಂತರ ಹತ್ತು ಹಲವು ಪಾಸ್ಟ್‍ವುಡ್‍ಗಳು ತಲೆ ಎತ್ತಲಾರಂಭಿಸಿದವು. ಒಮ್ಮೆಯಂತೂ ಪ್ರಭಾವಿ ವ್ಯಕ್ತಿಯೊಬ್ಬರು ಮಾಂಸಹಾರಿ ಪಾಸ್ಟ್‍ವುಡ್ ತೆರೆಯಲು ಪ್ರಯತ್ನಿಸುತ್ತಿದಾಗ ಸುತ್ತಾಮುತ್ತಲ ನಿವಾಸಿಗಳು ಪ್ರತಿಭಟಿಸಿ, ತಡೆಯೊಡ್ಡಿದರು. ಈ ನಿವೇಶನದಲ್ಲಿ ಅರಮನೆ ಮೈದಾನ ಎಂದೇ ಹೆಸರು ಪಡೆದಿದ್ದು, ಈ ಜಾಗದಲ್ಲಿ ಪ್ರತಿ ವರ್ಷ ಕಡೆ ಕಾರ್ತಿಕ ಸೋಮವಾರ ನಯನ ಕ್ಷತ್ರೀಯ ಮಂಡಳಿಯಿಂದ ಆಕರ್ಷಕ ಬಾಣ ಬಿರುಸು ಪ್ರದರ್ಶನ ನಡೆಯುತ್ತಿತ್ತು. ಇದನ್ನು ಸಾವಿರಾರು ಮಂದಿ ವೀಕ್ಷಿಸಿ, ಸಂಭ್ರಮಿಸುತ್ತಿದ್ದರು. ಅರಮನೆ ನಿವೇಶನವನ್ನು ಸರ್ಕಾರ ವಶಪಡೆಯುವ ನಿಟ್ಟಿನಲ್ಲಿ ಶಾಸಕ ಬಿ.ಹರ್ಷವರ್ಧನ್, ತಾಲೂಕು ಆಡಳಿತದ ನಿರ್ಧಾರಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.

 

 

Translate »