ಸಮಗ್ರ ತನಿಖೆಗೆ ಶಾಸಕ ಸಾ.ರಾ.ಮಹೇಶ್ ಆಗ್ರಹ
ಮೈಸೂರು

ಸಮಗ್ರ ತನಿಖೆಗೆ ಶಾಸಕ ಸಾ.ರಾ.ಮಹೇಶ್ ಆಗ್ರಹ

May 5, 2021

ಮೈಸೂರು, ಮೇ 4(ಆರ್‍ಕೆಬಿ)- ಚಾಮರಾಜ ನಗರದಲ್ಲಿ ಆಕ್ಸಿಜನ್ ಇಲ್ಲದೆ 24 ಮಂದಿ ಸಾವನ್ನಪ್ಪಿದ ದುರಂತಕ್ಕೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಡಳಿತದ ನಡುವೆ ಸಮನ್ವಯತೆಯ ಕೊರತೆಯೇ ಕಾರಣ. ಸರ್ಕಾರ (ಜಿಲ್ಲಾಡಳಿತ) ದೊಂದಿಗೆ ಆಕ್ಸಿಜನ್ ಕಂಪನಿ ಅಗ್ರಿಮೆಂಟ್ ಮಾಡಿ ಕೊಂಡಿರುವ ವಾರ್ಷಿಕ ಅಗ್ರಿಮೆಂಟ್ ಪ್ರಕಾರ ಪ್ರತಿನಿತ್ಯ 300ರಿಂದ 350 ಸಿಲಿಂಡರ್ ಪೂರೈಕೆ ಯಾಗಬೇಕು. ಆದರೆ ಕಡಿಮೆ ಸಂಖ್ಯೆಯಲ್ಲಿ ಆಕ್ಸಿಜನ್ ಪೂರೈಕೆಗೆ ಕಾರಣವೇನು? ಇದರ ಹಿಂದೆ ಏನು ನಡೆದಿದೆ ಎಂಬುದರ ಬಗ್ಗೆ ಹಿರಿಯ ಅಧಿಕಾರಿ ಯಿಂದ ತನಿಖೆಯಾಗಬೇಕು. ಕೂಡಲೇ ಡ್ರಗ್ ಕಂಟ್ರೋಲರ್ ಅನ್ನು ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ, ಶಾಸಕ ಸಾ.ರಾ.ಮಹೇಶ್ ಇಂದಿಲ್ಲಿ ಆಗ್ರಹಿಸಿದರು.
ಮೈಸೂರಿನ ರಮಾವಿಲಾಸ ರಸ್ತೆಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಗ್ರಿಮೆಂಟ್ ಪ್ರಕಾರ ಚಾಮರಾಜನಗರಕ್ಕೆ ಪ್ರತಿದಿನ 300-350 ಸಿಲಿಂಡರ್ ಪೂರೈಕೆಯಾಗಬೇಕು ಆದರೆ ಕಳೆದ 6 ದಿನಗಳಲ್ಲಿ 691 ಸಿಲಿಂಡರ್ ಮಾತ್ರ ಪೂರೈಕೆಯಾಗಿದೆ. ಇನ್ನುಳಿದ ಸಿಲಿಂಡರ್‍ಗಳು ಎಲ್ಲಿ ಹೋದವು ಎಂದು ಪ್ರಶ್ನಿಸಿದರು.

ಮೈಸೂರು ಜಿಲ್ಲಾಡಳಿತ ಸಭೆಯೊಂದನ್ನು ನಡೆಸಿ, ಚಾಮರಾಜನಗರಕ್ಕೆ 150, ಮಂಡ್ಯಕ್ಕೆ 100 ಸಿಲಿಂಡರ್ ಮಾತ್ರ ಕೊಡುವಂತೆ ಸೂಚಿಸಿದ್ದಾರೆಂಬ ಮಾಹಿತಿ ಇದೆ. ಚಾಮರಾಜನಗರದ ವಾಹನ ಬಂದು ನಿಂತಿದ್ದರೂ 100 ಸಿಲಿಂಡರ್‍ಗಳನ್ನು ಮಾತ್ರ ಬಿಡಿ ಬಿಡಿಯಾಗಿ ನೀಡಲಾಗಿದೆ. ಇದೆಲ್ಲವನ್ನು ಡ್ರಗ್ ಕಂಟ್ರೋಲರ್ ಸರ್ಕಾರಕ್ಕೆ ಮಾಹಿತಿ ನೀಡಲಿಲ್ಲವೇಕೆ? ಎಂದು ಪ್ರಶ್ನಿಸಿದರು. ಈ ನಡುವೆ ಮೈಸೂರು ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿ, ಮೈಸೂರಿನಿಂದ 250 ಸಿಲಿಂಡರ್ ಹೋಗಿದೆ ಎಂದಿದೆ. ಚಾಮರಾಜ ನಗರ ಜಿಲ್ಲಾಧಿಕಾರಿ ಬಂದಿರುವುದು ಕೇವಲ 50 ಸಿಲಿಂಡರ್ ಎನ್ನುತ್ತಾರೆ. ಇದೆಲ್ಲವನ್ನು ನೋಡಿದರೆ ಇದರಲ್ಲಿ ಹಸ್ತಕ್ಷೇಪ ನಡೆದಿರುವುದು ಗೋಚರವಾಗು ತ್ತದೆ. ಇದೆಲ್ಲವು ಗೊತ್ತಿದ್ದೂ ಡ್ರಗ್ ಕಂಟ್ರೋಲರ್ ಏನು ಮಾಡುತ್ತಿದ್ದರು? ಒತ್ತಡ ಬಂದ ಮೇಲೆ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಿಲ್ಲವೇಕೆ? ಇವರ ನಿರ್ಲಕ್ಷ್ಯತನದಿಂದ ಚಾಮರಾಜನಗರಲ್ಲಿ 24 ಅಮೂಲ್ಯ ಜೀವಗಳು ಬಲಿಯಾಗಿವೆ. ಹೀಗಾಗಿ ಇದರ ಸಮಗ್ರ ತನಿಖೆ ನಡೆದು ಸತ್ಯಾಂಶ ಹೊರಬರಬೇಕು. ಜನರ ಜೀವದ ಜೊತೆಗೆ ಚೆಲ್ಲಾಟ ಆಡಬೇಡಿ ಎಂದು ಆಗ್ರಹಿಸಿದರು.

ಕಳೆದ ಆ.10, 2020ರಲ್ಲಿ ಮೈಸೂರಿನ ಅಂಗಡಿ ಯೊಂದರಲ್ಲಿ ಲಾಕ್‍ಡೌನ್ ಅವಧಿಗೆಂದು ಕೋವಿಡ್ ಶಂಕಿತರ ಹೋಮ್ ಕ್ವಾರಂಟೈನ್ ಮಾಡಿರುವವರಿಗೆ 3,75,000 ರೂ. ಸಾಮಗ್ರಿ ಖರೀದಿಸಿದ ಬಿಲ್ ಮಾಡಲಾಗಿದೆ. ಇಂತಹ ಅನೇಕ ಬಿಲ್‍ಗಳನ್ನು ಮಾಡಲಾಗಿದೆ ಎಂದು ಆರೋಪಿಸಿದರು. ಖರೀದಿಸಿದ ವಸ್ತುಗಳನ್ನು ಯಾರಿಗೆ ಕೊಟ್ಟಿದ್ದಾರೆ? ಎಂಬುದನ್ನು ಬಹಿರಂಗಪಡಿಸಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದ ಅವರು, ಕೋವಿಡ್ ಹೆಸರಿನಲ್ಲಿ ಹಣ ಲೂಟಿಯಾಗುತ್ತಿದೆ ಎಂಬ ಅನುಮಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಜಿಪಂ ಮಾಜಿ ಹಂಗಾಮಿ ಅಧ್ಯಕ್ಷ ದ್ವಾರಕೀಶ್, ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಮಾಜಿ ಉಪ ಮೇಯರ್ ಶೈಲೇಂದ್ರ, ವರುಣಾ ಕ್ಷೇತ್ರದ ಅಭಿಷೇಕ್, ಪಕ್ಷದ ಮುಖಂಡರಾದ ಸಂತೋಷ್, ಪ್ರಶಾಂತ್, ರಾಮು, ಸೋಮಣ್ಣ ಇನ್ನಿತರರು ಉಪಸ್ಥಿತರಿದ್ದರು.

Translate »