5 ದಿನಗಳಿಂದ ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಶವವಾಗಿ ಪತ್ತೆ!
News

5 ದಿನಗಳಿಂದ ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಶವವಾಗಿ ಪತ್ತೆ!

November 4, 2022

ದಾವಣಗೆರೆ, ನ.3- ಕಳೆದ ಐದು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರ ಶೇಖರ್(24) ಶವ ಕಾರಿನ ಸಮೇತ ತುಂಗಭದ್ರಾ ಮೇಲ್ದಂಡೆ ನಾಲೆಯಲ್ಲಿ ಗುರುವಾರ ಪತ್ತೆಯಾಗಿದೆ.

ನ್ಯಾಮತಿ ಮತ್ತು ಹೊನ್ನಾಳಿ ನಡುವೆ ರೇಣುಕಾಚಾರ್ಯ ಅವರ ಮನೆ ಇರುವ ಹೊನ್ನಾಳಿಗೆ ಕೇವಲ 5 ಕಿ.ಮೀ. ಅಂತರದಲ್ಲಿ ಅವರ ಶವ ಪತ್ತೆಯಾಗಿದ್ದು, ಕಾರಿನ ಹಿಂಬದಿ ಸೀಟಿನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ರೇಣುಕಾಚಾರ್ಯ ಅವರ ಸಹೋದರ ಎಂ.ಪಿ.ರಮೇಶ್ ಪುತ್ರ ಚಂದ್ರಶೇಖರ್ ಅ.30ರಂದು ರಾತ್ರಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಕ್ಕೂ ಮುನ್ನ ಅಂದು ಸಂಜೆ ಅವರು ಚಿಕ್ಕಮಗ ಳೂರು ಜಿಲ್ಲೆಯ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದು ರಾತ್ರಿ ವಾಪಸ್ಸಾಗುವ ವೇಳೆ 11 ಗಂಟೆ ಸುಮಾರಿನಲ್ಲಿ ದೆಹಲಿ ಸ್ನೇಹಿತರ ಜೊತೆ ಕೊನೆಯದಾಗಿ ಮಾತನಾಡಿದ್ದರು. 11.36ರಲ್ಲಿ ಹೊನ್ನಾಳಿ ಪಟ್ಟಣದ ಸರ್ಕಲ್‍ನಲ್ಲಿರುವ ಟವರ್ ನಲ್ಲಿ ಅವರ ಕೊನೆಯ ಮೊಬೈಲ್ ಲೊಕೇಷನ್ ಪತ್ತೆಯಾಗಿದ್ದು, ನಂತರ ಸ್ವಿಚ್ ಆಫ್ ಆಗಿದೆ. ಇಂದು ಚಂದ್ರ ಶೇಖರ್ ಶವ ದೊರೆತ ಪ್ರದೇಶದ ಮೊಬೈಲ್‍ಗಳು ಕೂಡ ಹೊನ್ನಾಳಿ ಸರ್ಕಲ್ ಟವರ್‍ನಲ್ಲೇ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ಅವರು ಭಾನುವಾರ ರಾತ್ರಿ 11.36ರಲ್ಲಿ ಕಾರಿನ ಸಮೇತ ನಾಲೆಗೆ ಬಿದ್ದು ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.

ಕಾರಿನ ಮುಂಭಾಗದ ಗಾಜುಗಳು ಒಡೆದಿದ್ದು, ಹಿಂಭಾಗವೂ ಜಖಂಗೊಂಡಿದೆ. ಈ ಕಾರಿನಲ್ಲಿ ಚಂದ್ರಶೇಖರ್ ಹೊರತು ಪಡಿಸಿ ಬೇರೆ ಯಾರೂ ಪ್ರಯಾಣಿಸಿದಂತೆ ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ. ಅವರೇ ಕಾರು ಚಾಲನೆ ಮಾಡಿಕೊಂಡು ಬಂದು ನಿಯಂತ್ರಣ ತಪ್ಪಿ ನಾಲೆಗೆ ಬಿದ್ದಿದ್ದರೆ ಶವ ಚಾಲಕನ ಸೀಟ್‍ನಲ್ಲಿ ಇರಬೇಕಾಗಿತ್ತು. ಆದರೆ ಹಿಂಬದಿಯ ಸೀಟ್‍ನಲ್ಲಿ ಶವ ದೊರೆತಿರುವುದರಿಂದ ಅವರನ್ನು ಹತ್ಯೆ ಮಾಡಿದ ನಂತರ ಕಾರಿನಲ್ಲಿ ಶವವಿಟ್ಟು ಕಾರನ್ನು
ನಾಲೆಗೆ ತಳ್ಳಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ತಮ್ಮ ಸಹೋದರನ ಮಗ ನಾಪತ್ತೆಯಾಗಿದ್ದರಿಂದ ತೀವ್ರ ದುಃಖಿತರಾಗಿದ್ದ ಶಾಸಕ ರೇಣುಕಾಚಾರ್ಯ ಚಂದ್ರಶೇಖರ್‍ನನ್ನು ಯಾರೋ ಅಪಹರಣ ಮಾಡಿದ್ದಾರೆ ಎಂಬ ಸಂಶಯ ವ್ಯಕ್ತಪಡಿಸಿ ದ್ದರು. ಇದೊಂದು ಪೂರ್ವ ನಿಯೋಜಿತ ಸಂಚು ಎಂದಿದ್ದ ಅವರು, ಅಪಹರಣ ಕಾರರು ಏನಾದರೂ ಡಿಮಾಂಡ್ ಮಾಡಿದರೆ, ಬೇಷರತ್ತಾಗಿ ಅವರ ಬೇಡಿಕೆಯನ್ನು ಈಡೇರಿಸಲು ಸಿದ್ಧನಿದ್ದೇನೆ. ಪೊಲೀಸರಿಗೂ ದೂರು ಕೊಡಲ್ಲ. ಚಂದ್ರುವನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ಕೊಡುತ್ತೇನೆ ಎಂದು ಘೋಷಿಸಿದ್ದರು. ಆದರೆ ಇಂದು ಚಂದ್ರಶೇಖರ್‍ನ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ನನ್ನ ಮೇಲಿನ ದ್ವೇಷದಿಂದ ಚಂದ್ರಶೇಖರ್‍ನನ್ನು ಬಲಿ ಪಡೆದಿದ್ದಾರೆ. ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ ರೇಣುಕಾಚಾರ್ಯ ಅವರಿಗೆ ದ್ವೇಷ ಇದ್ದಿದ್ದರೆ ನನ್ನನ್ನು ಬಲಿ ಪಡೆಯಬೇಕಾಗಿತ್ತು. ಮಗನನ್ನು ಕೊಲೆ ಮಾಡಿದ್ದು ತುಂಬಾ ನೋವನ್ನುಂಟು ಮಾಡಿದೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಈ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ಇಂದು ಮಧ್ಯಾಹ್ನ ತುಂಗಭದ್ರಾ ಕಾಲುವೆಯಲ್ಲಿ ಕಾರೊಂದು ಬಿದ್ದಿದೆ ಎಂಬ ಮಾಹಿತಿ ಮೇರೆಗೆ ಹೊನ್ನಾಳಿ ತಾಲೂಕಿನ ಕಡಲಕಟ್ಟೆ ಗ್ರಾಮದ ಬಳಿ ಇರುವ ತುಂಗಾ ಕಾಲುವೆಯಲ್ಲಿ ಬಿದ್ದಿದ್ದ ಕೆಎ 17 ಎಂಎ 2534 ನೇ ನಂಬರ್‍ನ ಬಿಳಿ ಬಣ್ಣದ ಕ್ರೇಟಾ ಕಾರನ್ನು ಅಗ್ನಿಶಾಮಕ ದಳದ ಸಹಕಾರದೊಂದಿಗೆ ಪೊಲೀಸರು ಮೇಲೆತ್ತಿದಾಗ ಅದರಲ್ಲಿ ರೇಣುಕಾಚಾರ್ಯ ಸಹೋದರನ ಪುತ್ರನ ಶವ ದೊರೆತ್ತಿತ್ತು.

ಇದೊಂದು ವ್ಯವಸ್ಥಿತ ಕೊಲೆ ಎಂದು ಚಂದ್ರಶೇಖರ್‍ನ ದೊಡ್ಡಪ್ಪ ಎಂ.ಪಿ.ವಿಶ್ವಾರಾಧ್ಯ ಆರೋಪಿಸಿದ್ದಾರೆ. ನಮಗೆ ಆರಂಭದಿಂದಲೂ ಅನುಮಾನವಿತ್ತು. ರೇಣುಕಾಚಾರ್ಯರ ಮೇಲಿನ ರಾಜಕೀಯ ದ್ವೇಷದಿಂದ ಚಂದ್ರಶೇಖರ್‍ನನ್ನು ಕೊಲೆ ಮಾಡಲಾಗಿದೆ. ಈ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ ಎಂದು ಅವರು ಒತ್ತಾಯಿಸಿದರು.

ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಪುತ್ರನ ಸಾವಿನ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಸಾವು ಹೇಗೆ ಸಂಭವಿಸಿದೆ ಎಂಬುದು ತನಿಖೆಯಿಂದ ಹೊರ ಬರಬೇಕಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

Translate »