ಶಾಲಾ-ಕಾಲೇಜಲ್ಲಿ ಮೊಬೈಲ್ ಬಳಕೆ ನಿಷೇಧ
ಮೈಸೂರು

ಶಾಲಾ-ಕಾಲೇಜಲ್ಲಿ ಮೊಬೈಲ್ ಬಳಕೆ ನಿಷೇಧ

November 24, 2018

ಬೆಂಗಳೂರು: ವಿದ್ಯಾರ್ಥಿಗಳು ಇನ್ನು ಮುಂದೆ, ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಸುವಂತಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಯಾರಾದರೂ ತರಗತಿಗಳಲ್ಲಿ ಮೊಬೈಲ್ ಬಳಸಿದರೆ ಅಂಥವರಿಗೆ ಕಠಿಣ ಶಿಕ್ಷೆ ಹಾಗೂ ಮೊಬೈಲ್ ಜಪ್ತಿ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಇಂಥದ್ದೊಂದು ಕಠಿಣವಾದ ನಿಯಮ ಜಾರಿ ಮಾಡಿದೆ.

ಪದವಿ ಪೂರ್ವ ಶಿಕ್ಷಣ ಮಂಡಳಿ ಹೊರಡಿಸಿರುವ ನೂತನ ಅಧಿಸೂಚನೆಯಂತೆ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಸೂಚನೆಯಂತೆ ಪದವಿಪೂರ್ವ ಶಿಕ್ಷಣ ಮಂಡಳಿಯು ಈ ಅಧಿ ಸೂಚನೆ ಹೊರಡಿಸಿದೆ.

ಮಕ್ಕಳ ಏಕಾಗ್ರತೆ, ವಿದ್ಯಾರ್ಥಿಗಳ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಮೊಬೈಲ್, ಲ್ಯಾಪ್‍ಟಾಪ್ ಬಳಕೆ ಮಾಡುವುದಕ್ಕೆ ನಿರ್ಬಂಧ ಹಾಕಲಾಗಿದೆ. ಇತ್ತೀಚಿನ ದಿನಗಳಲ್ಲಿ ತರಗತಿ ವೇಳೆಯೇ ವಿದ್ಯಾರ್ಥಿಗಳು ಮೊಬೈಲ್ ಮೂಲಕ ವಾಟ್ಸಾಪ್, ಫೇಸ್‍ಬುಕ್, ಶೇರ್ಚಾಟ್‍ನಲ್ಲಿ ಕಾಲಹರಣ ಮಾಡುತ್ತಿದ್ದು, ಪರಿಣಾಮ ಕಲಿಕಾ ಸಾಮಥ್ರ್ಯ ಕುಂಠಿತವಾಗಿ ಏಕಾಗ್ರತೆಯೂ ಇಲ್ಲದಂತಾಗಿತ್ತು. ಹೀಗಾಗಿ ಸರ್ಕಾರ ತರಗತಿಗಳಲ್ಲಿ ಮೊಬೈಲ್ ಮತ್ತು ಲಾಪ್‍ಟಾಪ್ ಬಳಕೆ ಮಾಡುವುದಕ್ಕೆ ನಿರ್ಬಂಧ ಹಾಕಿದೆ. ಮೊಬೈಲ್, ಲ್ಯಾಪ್‍ಟಾಪ್‍ಗಳನ್ನು ಸದುಪಯೋಗಕ್ಕೆ ಬದಲು ಇತ್ತೀಚಿನ ದಿನಗಳಲ್ಲಿ ಅವುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದೆ.

Translate »