ಪರಿಸರ-ಮಾನವ ನಂಟಿನ ಸಂಕೇತ ‘ಪುತ್ತರಿ’
ಅಂಕಣಗಳು, ಪ್ರಸ್ತುತಿ

ಪರಿಸರ-ಮಾನವ ನಂಟಿನ ಸಂಕೇತ ‘ಪುತ್ತರಿ’

November 24, 2018

ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಭಿಮ್ಮನೆ ಬಂದಳೋ
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆಹೊಳೆ ಹೊಳೆವಳೋ
ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆಕಳೆ ಕಳೆವಳೋ
ಅಲ್ಲೆ ಆ ಕಡೆ ನೋಡಲಾ
ಅಲ್ಲೆ ಕೊಡಗರ ನಾಡೆಲಾ
ಅಲ್ಲೆ ಕೊಡಗರ ಬೀಡೆಲಾ

ಮಂಗಳೂರು ಮೂಲದ ಮಡಿಕೇರಿಯಲ್ಲಿ ಕಾಲೇಜು ಉಪನ್ಯಾಸಕ ರಾಗಿದ್ದ ಕವಿ ಪಂಜೆ ಮಂಗೇಶರಾಯರು ಕೊಡಗನ್ನು ಹಾಡಿದ್ದು ಹೀಗೆ. ಕೆಲವೇ ಕೆಲವು ಪ್ಯಾರಾಗಳಲ್ಲಿ ಅವರು ಕೊಡಗಿನ ಚಿತ್ರವನ್ನು ಕಟ್ಟಿಕೊಟ್ಟ ಈ ಕವನ ‘ಹುತ್ತರಿ ಹಾಡು’ ಎಂದೇ ಜನ ಜನಿತ. ಕೊಡಗಿನ ಪಾಲಿಗೆ ಈ ಹಾಡು ಇಂದಿಗೂ ಜನರ ಹೆಮ್ಮೆ. ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠ ಕವನಗಳ ಸಾಲಲ್ಲಿ ಪಂಜೆಯವರ ಈ ಕವನ ಮುಂಚೂಣಿಯಲ್ಲಿ ನಿಲ್ಲುತ್ತದೆ. ಕವಿ ಅಲ್ಲಿ ಹುತ್ತರಿಯ ಬಗ್ಗೆ ಹೆಚ್ಚೇನೂ ಹೇಳದಿದ್ದರೂ ಆವರು ಅ ಕವನಕ್ಕೆ ‘ಹುತ್ತರಿ ಹಾಡು’ ಎಂದೇ ಹೆಸರಿಟ್ಟರು. ಕೊಡಗಿನ ಮಹಿಮೆಯನ್ನು, ಹಿರಿ ಮೆಯನ್ನು, ಸೌಂದರ್ಯವನ್ನು ಹೊಗ ಳುತ್ತಾ ಹೊಗಳುತ್ತಾ ಕವಿಗೆ ಹುತ್ತರಿಯೇ ನೆನಪಾಯಿತು. ಹುತ್ತರಿ ಕವಿಯ ಭಾವ ವನ್ನೂ ಮೀಟಿತ್ತು. ಕಾಡಿದ ಹುತ್ತರಿ ಕಾವ್ಯಕ್ಕೆ ಸ್ಫೂರ್ತಿಯಾಯಿತು.

ಹುತ್ತರಿ ಮತ್ತೆ ಬಂದಿದೆ. ವರ್ಷದಲ್ಲಿ ಹಬ್ಬಗಳೆಷ್ಟೇ ಬರಲಿ ಕೊಡಗಿಗೆ ಸಂಭ್ರ ಮವನ್ನು ಹೊತ್ತು ತರುವುದು ಅವರ ‘ಪುತ್ತರಿ’ (ಹುತ್ತರಿ) ಮಾತ್ರ. ಕೆಲ ತಿಂಗಳ ಹಿಂದೆ ಇಡೀ ರಾಜ್ಯ ದೀಪಾವಳಿಯ ಸಂಭ್ರಮದಲ್ಲಿ ತೇಲಾಡುತ್ತಿದ್ದಾಗಲೂ ಕೊಡಗು ಆ ಹೊತ್ತಲ್ಲಿ ಪುತ್ತರಿಯನ್ನು ನೆನಪು ಮಾಡಿಕೊಳ್ಳುತ್ತಿತ್ತು. ಅದಕ್ಕೆ ಸಿದ್ಧವಾಗುತ್ತಿತ್ತು. ಕೊಡಗಲ್ಲಿ ಯಾವ ಹಬ್ಬಗಳೇ ಬರಲಿ ಅದು ಪ್ರತಿ ಹಬ್ಬ ದಲ್ಲೂ ಪುತ್ತರಿಯನ್ನು ಕಾಯುತ್ತದೆ. ತಮ್ಮ ಹಳೆಯ ನೆನಪುಗಳೆಲ್ಲವೂ ಪುತ್ತ ರಿಯ ದಿನಾಂಕದ ಸುತ್ತಮುತ್ತಲೇ ತಿರುಗುತ್ತಿರುತ್ತವೆ. ಹಾಗಾಗಿ ಪ್ರತೀ ಪುತ್ತರಿ ಕೊಡಗಿನವನ ಬಾಳಲ್ಲಿ ನೆನಪಿನ ಹಾಯಿದೋಣಿ.

ಕೊಡಗಿನ ಆರಾಧ್ಯ ದೇವರು ಇಗ್ಗು ತ್ತಪ್ಪ ದೇವರ ಸನ್ನಿಧಿಯಲ್ಲಿ ಹುತ್ತರಿ ಆಚರಣೆಯ ದಿನಾಂಕ ನಿಗದಿಯಾಗು ತ್ತಲೇ ಪುತ್ತರಿಯ ಸಿದ್ಧತೆಗಳು ಜಿಲ್ಲೆಯಲ್ಲಿ ಶುರುವಾಗುತ್ತವೆ ಎನ್ನಬಹುದು. ಕೃಷಿ ಪ್ರಧಾನ ಸಮಾಜ ವ್ಯವಸ್ಥೆಯ ಕೊಡಗು ತನ್ನ ಬೆಳೆಯನ್ನು ಮನೆ ತುಂಬಿಸಿಕೊಳ್ಳುವ ಶುಭ ಮುಹೂರ್ತ ಈ ಪುತ್ತರಿ. ತನ್ನ ವರ್ಷದ ದುಡಿಮೆಯನ್ನು ಜತನದಿಂದ ಕಾಪಾಡಿಕೊಳ್ಳುತ್ತಾ ಪ್ರಕೃತಿಯೊಡನೆ ಸೆಣ ಸುತ್ತಾ, ಅರಸ ಕರೆದಾಗ ದಂಡಿನಲ್ಲಿ ಪ್ರಾಣದ ಹಂಗು ತೊರೆದು ಸೆಣಸುತ್ತ್ತಾ ಬದುಕಿದ ಕೊಡಗಿನ ರೈತ ಪುತ್ತರಿ ಯಂದು ತನ್ನ ಬೆಳೆಯನ್ನು ತಂದು ಪೈರಿಗೆ ಪೂಜೆ ಸಲ್ಲಿಸಿ ಊರವರೊಂದಿಗೆ ಪುತ್ತರಿ ಯಂದು ಸಂಭ್ರಮಿಸುತ್ತಾನೆ.

ಕೊಡಗಿನಲ್ಲಿ ಕೃಷಿ ಸಂಸ್ಕೃತಿ ಯಾವಾಗ ಆರಂಭವಾ ಯಿತೋ ಅಂದಿನಿಂದಲೇ ಪುತ್ತರಿ ಎಂಬ ಸಂಭ್ರಮ ಶುರುವಾಯಿತು ಎನ್ನುತ್ತಾರೆ ಜನಪದ ವಿದ್ವಾಂಸರು. ಕೊಡವ ಕಾಲೆಂ ಡರಿನ ‘ಬಿಚ್ರ್ಯಾರ್’ ಎಂಬ ಎಂಟನೆ ತಿಂಗಳ ರೋಹಿಣಿ ನಕ್ಷತ್ರದಂದು ತಾನು ಬೆಳೆದ ಭತ್ತವನ್ನು ಮನೆಗೆ ಕೊಡಗಿನ ರೈತ ಮನೆ ತುಂಬಿಸಿಕೊಳ್ಳುತ್ತಾನೆ. ತನ್ನ ವರ್ಷದ ಶ್ರಮವನ್ನು ಸಾರ್ಥಕ ಪಡಿಸಿ ಕೊಳ್ಳುತ್ತಾನೆ.

ಕೊಡಗಿನ ಪ್ರತೀ ಆಚರಣೆ ಗಳೂ ಪರಿಸರಕ್ಕೆ ಹತ್ತಿರದ ಸಂಬಂಧವನ್ನು ಹೊಂದಿರುವುದು ವಿಶೇಷ. ಎಲ್ಲಾ ಭಾರತೀಯ ಹಬ್ಬಗಳೂ ಕೃಷಿ ಮತ್ತು ಪರಿಸರದ ಸುತ್ತ ತಿರುಗಿದರೆ ಕೊಡಗಿನ ಎಲ್ಲಾ ಹಬ್ಬಗಳೂ ಕೃಷಿ ಮತ್ತು ಪರಿಸರದ ಸುತ್ತ ತಿರುಗುತ್ತವೆÉ. ಪರಿಸರದ ನಂಟನ್ನು ಹೊಂದಿರುತ್ತವೆ. ಆಕಾಶವೇ ಬಾಯಿ ಬಿಟ್ಟಂತೆ ಸುರಿಯುವ ಮಳೆಯ ನಡುವೆ ಕೊಡಗಿನ ರೈತ ಭತ್ತ ವನ್ನು ನಾಟಿ ಮಡುವ ಸಾಹಸ ಒಬ್ಬ ಯೋಧನ ಸಾಹಸವನ್ನು ನೆನಪಿಗೆ ತರು ತ್ತವೆ. ನಂತರ ಆದನ್ನು ಕಾಡು ಪ್ರಾಣಿಗ ಳಿಂದ ರಕ್ಷಿಸಲು ಆಚರಿಸುವ ಬೇಟೆಯ ಹಬ್ಬ ಅಥವಾ ಆಯುಧ ಪೂಜೆ ‘ಕೈಲು ಮೂಹೂರ್ತ’, ಬೆಳೆ ಬೆಳೆಯುತ್ತಾ ಅದರ ಪೋಷಣೆಯ ‘ತುಲಾ ಸಂಕ್ರಮಣ’ ಕಳೆದು ತನ್ನ ಬೆಳೆ ಎದೆ ಎತ್ತರಕ್ಕೆ ಬೆಳೆದು ಕಟಾವಿನ ಸಮಯವನ್ನು ಆಚರಿಸುವ ಹೊತ್ತು ಈ ಸಂಭ್ರಮದ ಪುತ್ತರಿ.

ಕೊಡಗು ಪುತ್ತರಿಗೆ ಸಿದ್ಧವಾಗುವ ವಿಧಾನವೇ ಒಂದು ದೃಶ್ಯ ಕಾವ್ಯ. ವಾರಕ್ಕೆ ಮುಂಚೆಯೇ ಆತ ಪುತ್ತ ರಿಗೆ ಸರಿಯಾಗಿ ಬಾಳೆಯನ್ನು ಹಣ್ಣು ಮಾಡುವ ತುರಾತುರಿಯಲ್ಲಿರುತ್ತಾನೆ. ಪುತ್ತರಿಗೆಂದು ಕೊಡಗಲ್ಲಿ ವಿಶೇಷ ಸಂತೆ ಗಳು ನಡೆಯುತ್ತವೆ. ಭತ್ತವನ್ನು ಬೇಯಿ ಸುವ ಕೆಲಸ ನಡೆಯುತ್ತವೆÉ. ಬೇಯಿಸಿದ ಭತ್ತವನ್ನು ಒಣಗಿಸಿ ಕುಟ್ಟಿ ಕಲ್ಲಲ್ಲಿ ರುಬ್ಬಿ ಹುಡಿ ಮಾಡಿ ಪುತ್ತರಿಯಂದು ಮಾತ್ರ ತಯಾರಿಸಲಾಗುವ ರುಚಿಕರ ‘ತಂಬುಟ್ಟು’ ಹುಡಿಯನ್ನು ತಯಾರಿಸುವ ಗಡಿಬಿಡಿ ಯಲ್ಲಿ ಕೊಡಗಿನ ಮಹಿಳೆಯರಿರುತ್ತಾರೆ.

ಮನೆಗೆ ಸುಣ್ಣಬಣ್ಣವನ್ನು ಬಳಿದು ಸಿಂಗರಿ ಸಲಾಗುತ್ತದೆ. ಪೈರು ತೆಗೆಯುವ ಗದ್ದೆಗೆ ಚಪ್ಪರ ಹಾಕುವ, ಗದ್ದೆಗೆ ತೋರಣ ಕಟ್ಟುವ ಸಂಭ್ರಮಕ್ಕೆ ಮಕ್ಕಳು ತೊಡಗು ತ್ತಾರೆ. ಪೇಟೆಯಲ್ಲಿ ಪಟಾಕಿ ಮಳಿಗೆಗಳೇಳು ತ್ತವೆ. ಪೈರು ತೆಗೆಯುವ ಶುಭ ಮುಹೂ ರ್ತಕ್ಕೆ ಈಡು ಹೊಡೆಯಲು ಮನೆಯ ಹಿರಿಯರು ಕೋವಿಗಳನ್ನು ಶುಚಿಗೊಳಿ ಸುವ ಕೆಲಸದಲ್ಲಿ ತೊಡಗಿರುತ್ತಾರೆ. ಪುತ್ತರಿ ಹತ್ತಿರ ಬಂದಂತೆಲ್ಲಾ ಕೊಡಗಿನ ಜನರು ಎಲ್ಲವನ್ನೂ ಮರೆತೇಬಿಟ್ಟಿದ್ದಾರೇನೋ ಎಂಬಂತೆ ಪುತ್ತರಿಯ ಮಾತಲ್ಲೇ ಮುಳುಗಿ ಹೋಗಿರುತ್ತಾರೆ. ಆ ಹೊತ್ತಲ್ಲಿ ಎಲ್ಲವೂ ಪುತ್ತರಿಮಯ ಆಗಿಹೋಗಿರುತ್ತದೆ. ಗದ್ದೆ ಯಿಂದ ತಂದ ಪೈರನ್ನು ಮನೆಯ ಬಾಗಿ ಲಿಗೆ ತೋರಣ ಕಟ್ಟಿ, ಆಯುಧ, ಆಭರಣ ಗಳಿಗೂ ಕಟ್ಟಲು ಒಂದು ಬಗೆಯ ಕಾಡು ಗಿಡದ ನಾರನ್ನು ಬಳಸಲಾಗುತ್ತದೆ. ಬೇರೆ ಹೊತ್ತಲ್ಲಿ ಕೇವಲ ಕಾಡು ಗಿಡವಾದ ಅದಕ್ಕೂ ಪುತ್ತರಿ ಹೊತ್ತಲ್ಲಿ ‘ಪುತ್ತರಿ ನಾರು’ ಎಂಬ ಪಟ್ಟ. ಪುತ್ತರಿಗೆ ಮಾತ್ರ ತಿನ್ನುವ ಒಂದು ಬಗೆಯ ಕಾಡುಗೆಣಸಿನ ಹೆಸರೂ ‘ಪುತ್ತರಿ ಗೆಣಸು’. ಪುತ್ತರಿಗೆ ಮಾಡುವ ಕೆಲಸವೆಲ್ಲವೂ ‘ಪುತ್ತರಿ ಕೆಲಸ’. ಪುತ್ತರಿಗೆ ಮಾಡುವ ಮಧ್ಯ-ಮಾಂಸಗಳಿಲ್ಲದ ಅಡಿಗೆ ‘ಪುತ್ತರಿ ಗದ್ದಾಳ’ (ಪುತ್ತರಿ ಭಕ್ಷ್ಯ) ಹೀಗೆ ಸಕಲವನ್ನೂ ಪುತ್ತರಿ ಆವರಿಸಿಕೊಳ್ಳುತ್ತದೆ. ಊರಿಗೆ ಊರೇ ಸಂಭ್ರಮ-ಸಡಗರ, ಮಿಲಿ ಟರಿಯವರ ರಜೆ ಮೀಸಲಾಗುವುದು ಪುತ್ತರಿಗೆಂದೆ. ಹೊರ ಊರಲ್ಲಿರುವ ಮಕ್ಕಳು ಮನೆಗೆ ಬರುವ ಹೊತ್ತೂ ಪುತ್ತರಿ. ಪ್ರಕೃತಿ ಮತ್ತು ಮನುಷ್ಯ ಸಂಬಂಧಗಳಿಗೆ ಉದಾ ಹರಣೆಯಂತಿರುವುದು ಈ ಪುತ್ತರಿ.

ಉತ್ತರ ಕೊಡಗಿನ ನಾಪೋಕ್ಲು ಸಮೀ ಪದ ಪಾಡಿ ಇಗ್ಗುತ್ತಪ್ಪ ದೇವರ ಸನ್ನಿಧಿ ಯಲ್ಲಿ ದೇವರ ಗದ್ದೆಯಲ್ಲಿ ಪೈರು ತೆಗೆ ಯುವವರೆಗೆ ಸಮಸ್ತ ಕೊಡಗು ಕಾಯು ತ್ತದೆ. ತನ್ನ ಶ್ರಮವನ್ನು ದೇವರಿಗೆ ಅರ್ಪಿ ಸಿದ ನಂತರ ಪ್ರತೀ ಕುಟುಂಬಗಳೂ ಒಗ್ಗೂಡಿ ಒಡ್ಡೋಲಗದೊಂದಿಗೆ ಸಾಂಪ್ರದಾಯಿಕ ಉಡುಪನ್ನು ಧರಿಸಿ ಗದ್ದೆಗೆ ತೆರಳಿ ಈಡು ಹೊಡೆದು ಹೊಸ ಪೈರನ್ನು ಮನೆ ತುಂಬಿಸಿ ಕೊಳ್ಳುತ್ತ್ತಾರೆ. ಹಬ್ಬ ದೂಟದ ನಂತರ ಊರವರೆಲ್ಲರೂ ಸೇರಿ ‘ಮಂದ್’ ಎಂಬಲ್ಲಿ ಸೇರಿ ಕೋಲಾಟ ವಾಡುವ ಸಂಪ್ರದಾಯ ಇಂದಿಗೂ ಕೊಡಗ ಲ್ಲಿದೆ. ಹಬ್ಬವನ್ನು ಯಾವೆಲ್ಲಾ ರೀತಿ ಯಲ್ಲಿ ಸಂಭ್ರಮಿಸಬಹುದೋ ಅದ್ಯಾ ವುದನ್ನೂ ಪುತ್ತರಿ ಕಳೆದುಕೊಳ್ಳ್ಳು ವುದಿಲ್ಲ. ಪುತ್ತರಿ ಕಳೆದ ಮೇಲೆ ಕೊಡಗು ಒಂದು ವಿಧದ ಸಪ್ಪೆಯನ್ನು ಅನುಭವಿಸುತ್ತದೆ. ಮತ್ತೆ ಪುತ್ತರಿಗೆ ಕಾಯುತ್ತದೆ.

ಸಂಭ್ರಮದಿಂದ ಬಂದ ಪುತ್ತರಿ ಹೇಳದೇ ಕೇಳದೇ ಹೊರಟು ಹೋಯಿತು ಎಂಬ ಕೊಡವ ಭಾಷೆಯ ಗಾದೆ ಅನ್ವರ್ಥವಾದಂತೆನಿ ಸುತ್ತದೆ. ಕೊಡವ ಭಾಷೆಯ ಸಾಹಿತ್ಯ ರತ್ನಗ ಳಾದ ಖ್ಯಾತ ಸಂಶೋಧಕ ಡಾ.ಐ. ಮಾ ಮುತ್ತಣ್ಣನವರ ‘ಕೊಡಗಿನ ನೆನಪುಗಳು’, ನಡಿಕೇರಿಯಂಡ ಚಿಣ್ಣ ಪ್ಪನವರ ಜನಪದ ಸಾಹಿತ್ಯಗುಚ್ಛ ‘ಪಟ್ಟೋಲೆ ಪಳಮೆ’, ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಗಳ ನಾಟಕಗಳ ಹಾಡುಗಳಲ್ಲಿ ಕಾಣುವ ಪುತ್ತರಿ ಇಂದಿಗೂ ಬದಲಾಗಿಲ್ಲ. ಕೃಷಿ ಸಂಸ್ಕೃತಿ, ಶ್ರಮ ಸಂಸ್ಕೃತಿ, ಯೋಧ ತನ, ಕೊಡಗಿನ ಜನರ ಪರಿಸರ ಪ್ರೇಮ ಇರುವವರೆಗೂ ಪುತ್ತರಿ ಬದ ಲಾಗುವುದೂ ಇಲ್ಲ. ನಾನಾ ವರದಿ ಗಳು ಕೊಡಗಿನ ಪರಿಸರ ರಕ್ಷಣೆಯ ಹೆಸರಲ್ಲಿ ಬರುತ್ತಿದ್ದರೂ ಕೊಡಗಿನ ಆಚರಣೆಗಳ ಮುಂದೆ ಅವೆಲ್ಲವೂ ಕುಬ್ಜ ವಾದಂತೆನಿಸುತ್ತವೆ. ಪರಿಸರ ರಕ್ಷಣೆಯ ಸುತ್ತಲೂ ತಿರುಗುವ ಕೊಡಗಿನ ಆಚರಣ ಗಳೆಲ್ಲವೂ ಪರಿಸರ ರಕ್ಷಣೆಗೆ ವರದಿಗಳ ಹಂಗಿಲ್ಲ ಎಂದೇ ಸಾರುತ್ತವೆ.

ನೈಜ ಕೊಡಗು ಅರ್ಥವಾಗಬೇಕೆಂ ದರೆ ಪುತ್ತರಿಗೆ ಕೊಡಗಿಗೆ ಬರಬೇಕು. ಕೊಡಗಿನ ಆತಿಥ್ಯ ಸವಿಯಬೇಕೆಂದರೆ ಪುತ್ತರಿಯಲ್ಲಿ ಭಾಗಿಯಾಗಬೇಕು. ಕೆಲವು ತಿಂಗಳ ಹಿಂದೆಯಷ್ಟೆ ಕೊಡಗಿ ನಲ್ಲಿ ಪ್ರಕೃತಿ ಮುನಿದಿದ್ದಳು, ಈಗ ಮೈಕೊ ಡವಿ ಎದ್ದು ನಿಂತಳೋ ಎನ್ನು ವಂತೆ ಆಕೆ ಪುತ್ತರಿಗೆ ಸಿದ್ಧವಾಗು ತ್ತಿದ್ದಾಳೆ. ನೋವು ಮರೆಯುತ್ತಿದೆ, ಸಂಭ್ರಮ ಮುಂದೆ ಇದೆ. ಕೊಡಗಿನ ಸಮಸ್ತ ಜನ ತೆಗೆ ಪುತ್ತರಿಯ ಶುಭಾಶಯಗಳು.

– ಪ್ರತಾಪ್ ಸಿಂಹ, ಸಂಸದ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ

Translate »