ಪುರಭವನ ಆವರಣ ವಾಹನ ಮಾಲೀಕರ ಸುಲಿಗೆಗೆ ಬ್ರೇಕ್
ಮೈಸೂರು

ಪುರಭವನ ಆವರಣ ವಾಹನ ಮಾಲೀಕರ ಸುಲಿಗೆಗೆ ಬ್ರೇಕ್

November 24, 2018

ಮೈಸೂರು: ವಾಹನ ಸವಾರರಿಂದ ಸುಲಿಗೆ ಮಾಡುತ್ತಿದ್ದ ಪುರಭವನದ ಆವರಣದಲ್ಲಿ ಪಾರ್ಕಿಂಗ್ ಗುತ್ತಿಗೆಯನ್ನು ಮೈಸೂರು ನಗರ ಪಾಲಿಕೆ ಶುಕ್ರವಾರ ರದ್ದು ಮಾಡಿದ್ದು, ಮುಂದಿನ ದಿನಗಳಲ್ಲಿ ಪಾಲಿಕೆಯ ವತಿಯಿಂದಲೇ ಪಾರ್ಕಿಂಗ್ ವ್ಯವಸ್ಥೆ ಮುಂದುವರೆಸುವ ಆಲೋಚನೆ ಮಾಡುತ್ತಿದೆ.

ನಾಡಹಬ್ಬ ದಸರಾ ಮಹೋತ್ಸವದ ವೇಳೆ ಮೈಸೂರಿಗೆ ಬರುವ ಪ್ರವಾಸಿಗರ ವಾಹನ ನಿಲುಗಡೆಗೆ ಸಮಸ್ಯೆ ಉಂಟಾಗು ವುದನ್ನು ತಡೆಗಟ್ಟಲು ಪುರಭವನದಲ್ಲಿ ನಗರ ಪಾಲಿಕೆ ಮಾಡಿದ್ದ ತಾತ್ಕಾಲಿಕ ವಾಹನ ನಿಲುಗಡೆಯ ವ್ಯವಸ್ಥೆಯನ್ನು ನಿರ್ವಹಿಸಲು ಗುತ್ತಿಗೆ ಪಡೆದಿದ್ದ ಗುತ್ತಿಗೆ ದಾರರು ಪಾಲಿಕೆ ನಿಗದಿಪಡಿಸಿದ್ದ ಶುಲ್ಕ ಕ್ಕಿಂತ ಹೆಚ್ಚುವರಿ 10 ರೂ. ಸಂಗ್ರಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನ.22ರಂದು `ಮೈಸೂರು ಮಿತ್ರ’ ಪತ್ರಿಕೆಯಲ್ಲಿ ವಿಸೃತ ವಾದ ವರದಿ ಪ್ರಕಟವಾಗಿತ್ತು. ಪತ್ರಿಕೆಯಲ್ಲಿ ಬಂದ ವರದಿ ಆಧರಿಸಿ ಪಾಲಿಕೆಯ ಅಧಿಕಾರಿ ಗಳು ಪರಿಶೀಲನೆ ಮಾಡಿ 20 ರೂ. ಬದಲಾಗಿ 30 ರೂ. ಸಂಗ್ರಹಿಸುತ್ತಿದ್ದದ್ದನ್ನು ಮನಗಂಡು ಗುತ್ತಿಗೆಯನ್ನು ರದ್ದು ಮಾಡಿ, ತಾತ್ಕಾಲಿಕ ವಾಗಿ ಪುರಭವನದಲ್ಲಿ ಪಾರ್ಕಿಂಗ್ ಮಾಡುವುದನ್ನು ನಿರ್ಬಂಧಿಸಿದ್ದಾರೆ.

ಪಾಲಿಕೆ ವತಿಯಿಂದ ನಿರ್ವಹಣೆ ಚಿಂತನೆ: ಪುರಭವನದಲ್ಲಿ ಪಾರ್ಕಿಂಗ್ ವ್ಯವಸ್ಥೆಯ ಗುತ್ತಿಗೆ ರದ್ದು ಮಾಡಿರುವುದಕ್ಕೆ ಸಂಬಂಧಿ ಸಿದಂತೆ `ಮೈಸೂರು ಮಿತ್ರ’ನೊಂದಿಗೆ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷದ ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ವಿವಿಧೆಡೆಗಳಿಂದ ಮೈಸೂರಿಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಪುರಭವನದ ಆವರಣದಲ್ಲಿರುವ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಎರಡು ಹಾಗೂ ನಾಲ್ಕು ಚಕ್ರಗಳ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ವಾಹನ ನಿಲುಗಡೆಯ ನಿರ್ವಹಣೆ ಮಾಡಲು ಗುತ್ತಿಗೆ ನೀಡಲಾಗಿತ್ತು. ದ್ವಿಚಕ್ರ ವಾಹನಕ್ಕೆ 10 ರೂ ಹಾಗೂ ನಾಲ್ಕು ಚಕ್ರ ವಾಹನಗಳಿಗೆ 20 ರೂ. ನಿಗದಿ ಮಾಡಲಾಗಿತ್ತು. ಆದರೆ ನಾಲ್ಕು ಚಕ್ರ ವಾಹನಗಳ ಮಾಲೀಕರಿಂದ ಹೆಚ್ಚು ಹಣ ಸಂಗ್ರಹಿಸಿ ಪಾಲಿಕೆ ನಿಯಮವನ್ನು ಗಾಳಿಗೆ ತೂರಿದ್ದಾರೆ. ಈ ಹಿನ್ನೆಲೆಯಲ್ಲಿ ಟೆಂಡರ್ ರದ್ದು ಮಾಡಲಾಗಿದೆ. ಎರಡು ತಿಂಗಳಿಗೆ ಮಾತ್ರ ಟೆಂಡರ್ ನೀಡಲಾಗಿತ್ತು ಎಂದು ಅವರು ಹೇಳಿದರು.

ಪುರಭವನದಲ್ಲಿ ಇದೀಗ ವಾಹನ ನಿಲುಗಡೆಗೆ ಅವಕಾಶ ನೀಡುತ್ತಿಲ್ಲ. ಅರ ಮನೆ ವೀಕ್ಷಿಸಲು ಬರುವ ಪ್ರವಾಸಿಗರು ಅರಮನೆಯ ಉತ್ತರ ದ್ವಾರದ ಬಳಿ ನಿಲುಗಡೆ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗುವುದನ್ನು ತಪ್ಪಿಸಲು ಮುಂದಿನ ದಿನಗಳಲ್ಲಿ ಪುರಭವನದ ಆವರಣದಲ್ಲಿರುವ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ವಾಹನಗಳ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆ ವತಿಯಿಂದ ನಿರ್ವಹಣೆ ಮಾಡ ಬೇಕೋ ಅಥವಾ ಉಚಿತವಾಗಿ ನಿಲುಗಡೆಗೆ ಅವಕಾಶ ನೀಡಬೇಕೋ ಎನ್ನುವುದನ್ನು ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

Translate »