ಕೇಂದ್ರ ಬಜೆಟ್‍ನಲ್ಲಿ ತೆರಿಗೆ ವ್ಯವಸ್ಥೆಗೆ ಆಧುನಿಕ ಸ್ಪರ್ಶ
ಮೈಸೂರು

ಕೇಂದ್ರ ಬಜೆಟ್‍ನಲ್ಲಿ ತೆರಿಗೆ ವ್ಯವಸ್ಥೆಗೆ ಆಧುನಿಕ ಸ್ಪರ್ಶ

February 13, 2020

ಮೈಸೂರು: ಕೇಂದ್ರ ಸರ್ಕಾರ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಆಧುನೀಕರಣದ ಸ್ಪರ್ಶ ನೀಡಲಾಗಿದೆ ಎಂದು ಎಫ್‍ಕೆಸಿ ಸಿಐ ನಿಕಟಪೂರ್ವ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ವಿಶ್ಲೇಷಿಸಿದ್ದಾರೆ.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಒಅಅI), ಪೂಜಾ ಭಾಗವತ ಮೆಮೋರಿಯಲ್ ಮಹಾಜನ ಎಜುಕೇಷನ್ ಸೆಂಟರ್ ಹಾಗೂ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಸಂಯುಕ್ತಾಶ್ರಯದಲ್ಲಿ ಕೆಆರ್‍ಎಸ್ ರಸ್ತೆಯ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಕೇಂದ್ರ ಬಜೆಟ್-2020’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಹಣಕಾಸು ಮತ್ತು ಬ್ಯಾಂಕಿಂಗ್ ವಲಯದ ಸುಧಾರಣೆಗೆ ಹಲವು ಕ್ರಮ ಕೈಗೊಳ್ಳಲಾಗಿದ್ದು, ತೆರಿಗೆ ವ್ಯವಸ್ಥೆಗೆ ತಂತ್ರಜ್ಞಾನ ಬಳಸಿ ಆಧುನಿಕ ಸ್ಪರ್ಶ ನೀಡಿರುವುದರಿಂದ ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ ಎಂದು ನಿರೀಕ್ಷಿಸಬಹುದು ಎಂದ ಅವರು, ಪ್ರಸಕ್ತ ವರ್ಷಾಂತ್ಯಕ್ಕೆ ಭಾರತದ ಆರ್ಥಿಕತೆಯನ್ನು 3 ಟ್ರಿಲಿಯನ್ ಡಾಲರ್‍ಗೆ ಹೆಚ್ಚಿಸುವ ಗುರಿ ಹೊಂದಿರುವುದು ಬಜೆಟ್ ದೂರದರ್ಶಿತ್ವಕ್ಕೆ ನಿದರ್ಶನ ಎಂದರು.

ಎಫ್‍ಕೆಸಿಸಿಐ ಮಹಿಳಾ ಉದ್ಯಮಿಗಳ ಸಮಿತಿ ಸಹ ಅಧ್ಯಕ್ಷೆ ಅನ್ನಪೂರ್ಣ ಶ್ರೀಕಾಂತ್ ಅವರು ಮಾತನಾಡಿ, ಜಿಎಸ್‍ಟಿ ದೃಷ್ಟಿಯಿಂದ ಬಜೆಟ್‍ನಲ್ಲಿ ಉತ್ತಮ ಪ್ರಸ್ತಾವನೆಗಳಿವೆ, ವಸ್ತುಗಳ ಖರೀದಿಯಲ್ಲಿ ಆನ್‍ಲೈನ್‍ನಲ್ಲಿ ಹಣ ಪಾವತಿಸಿ ಇನ್‍ವಾಯ್ಸ್ ತೆಗೆದುಕೊಂಡಲ್ಲಿ ನಗದು ಪಾಯಿಂಟ್ಸ್ ನೀಡುವ ವಿನೂತನ ಯೋಜನೆ, ‘ಸುಗಮ್’, ‘ಸಹಜ್’ ಯೋಜನೆಗಳು ನಿರೀಕ್ಷೆ ಮೂಡಿಸಿವೆ ಎಂದರು. ಮಹಾಜನ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಸಿ.ಕೆ. ರೇಣುಕಾರ್ಯ ಅವರು ಮಾತನಾಡಿ, ಕುಸಿಯುತ್ತಿರುವ ದೇಶದ ಅರ್ಥ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಬಗ್ಗೆ ಬಜೆಟ್‍ನಲ್ಲಿ ಯಾವುದೇ ಕಾರ್ಯಕ್ರಮ ಗಳಿಲ್ಲ. ಜನರ ಆದಾಯ ಹೆಚ್ಚಿಸುವುದೇಗೆ ಎಂಬುದಕ್ಕೂ ಉತ್ತರವಿಲ್ಲ ಎಂದರು.

ಕಾರ್ಪೊರೇಷನ್ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಸಿ.ವಿ. ಮಂಜುನಾಥ, ಸಿಐಐ ಮುಖ್ಯಸ್ಥ ಭಾಸ್ಕರ್ ಕಳಲೆ, ಎಂಸಿಸಿಐ ಅಧ್ಯಕ್ಷ ಎ.ಎಸ್.ಸತೀಶ್ ಮಹಾಜನ ಎಜುಕೇ ಷನ್ ಸೊಸೈಟಿ ಅಧ್ಯಕ್ಷ ಮುರಳೀಧರ ಭಾಗವತ್, ಪ್ರಜಾವಾಣಿ ಪ್ರಧಾನ ವ್ಯವಸ್ಥಾಪಕ ಒಲಿವರ್, ಐಸಿಎಸ್‍ಐ ಮುಖ್ಯಸ್ಥೆ ಪಾರ್ವತಿ ಹಾಗೂ ಇತರರು ಪಾಲ್ಗೊಂಡಿದ್ದರು.

Translate »