ಮೈಸೂರು: ಬಸವಣ್ಣ ನವರು 12ನೇ ಶತಮಾನದಲ್ಲಿ ಆಯೋಜಿ ಸಿದ್ದ `ಪ್ರಮಥರ ಗಣಮೇಳ’ ಮಾದರಿ ಯಲ್ಲಿ ಎಲ್ಲಾ ಜಾತಿ-ಜನಾಂಗದ `ಅಸಂಖ್ಯ ಪ್ರಮಥ ಗಣಮೇಳ’ ಹಾಗೂ `ಸರ್ವ ಶರಣರ ಸಮ್ಮೇಳನ’ವನ್ನು ಫೆ.16ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗದ ಮುರುಘ ರಾಜೇಂದ್ರ ಬೃಹನ್ಮಠದ ಡಾ.ಶ್ರೀಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಬೆಂಗಳೂರಿನ ನಂದಿ ಗ್ರೌಂಡ್ಸ್‍ನಲ್ಲಿ ಕಾರ್ಯಕ್ರಮ ನಡೆಯಲಿದೆ. ಬಸವ ಕೇಂದ್ರಗಳು, ಬಸವ ಸಂಘಟನೆ ಗಳು, ವಿವಿಧ ಧಾರ್ಮಿಕ ಕೇಂದ್ರಗಳು ಮತ್ತು ಸರ್ವಜನಾಂಗದ ಮಠಾಧೀಶರ ಸಂಯು ಕ್ತಾಶ್ರಯದಲ್ಲಿ ನಡೆಯುವ ಸಮಾವೇಶದಲ್ಲಿ 30 ಸಾವಿರಕ್ಕೂ ಅಧಿಕ ದಲಿತರು ಭಾಗ ವಹಿಸುವ ನಿರೀಕ್ಷೆ ಇದೆ ಎಂದರು.
ಪಿಟಿಸಿಎಲ್ ಕಾಯ್ದೆ ತಿದ್ದುಪಡಿಗೆ ಆಗ್ರಹ: ರಾಜ್ಯದಲ್ಲಿ ಜಾರಿಯಲ್ಲಿರುವ `ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್)’ ಲೋಪಗಳನ್ನು ನೆಪ ಮಾಡಿಕೊಂಡು ಸರ್ಕಾರದಿಂದ ದಲಿತ ರಿಗೆ ನೀಡಿದ ಜಮೀನುಗಳನ್ನು ದಲಿತೇತರಿಗೆ ಮಾರಾಟ ಮಾಡಿರುವ ಪ್ರಕರಣಗಳಿವೆ. ಹೀಗಾಗಿ ಕಾಯ್ದೆಯಲ್ಲಿನ ಲೋಪಗಳನ್ನು ಸರಿಪಡಿಸಲು ಸಮಗ್ರ ತಿದ್ದುಪಡಿಯ ಅಗತ್ಯ ವಿದೆ. ತಿದ್ದುಪಡಿ ಅಗತ್ಯವಿರುವ ಅಂಶಗಳನ್ನು ನಮ್ಮ ಒಕ್ಕೂಟದಿಂದಲೂ ಸಿದ್ಧಪಡಿಸಿದ್ದು, ಫೆ.14ರಂದು ಸರ್ಕಾರಕ್ಕೆ ಸಲ್ಲಿಸಲಿದ್ದೇವೆ ಎಂದರು. ಒಕ್ಕೂಟದ ಪದಾಧಿಕಾರಿಗಳಾದ ವಿ.ಗಣೇಶ್, ಕೊಮ್ಮೇರಳ್ಳಿ ಕೃಷ್ಣಮೂರ್ತಿ, ಶಿವಮಾದು, ಎಂ.ಮುರಳಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.