ವೈದಿಕ ಧರ್ಮ ವಿರೋಧಿಸಿದ್ದರಿಂದ ಬಸವಣ್ಣ, ವಿವೇಕಾನಂದರ ಹತ್ಯೆ ಮಾಡಲಾಗಿದೆ
ಮೈಸೂರು

ವೈದಿಕ ಧರ್ಮ ವಿರೋಧಿಸಿದ್ದರಿಂದ ಬಸವಣ್ಣ, ವಿವೇಕಾನಂದರ ಹತ್ಯೆ ಮಾಡಲಾಗಿದೆ

August 7, 2018
  • ಸಾಹಿತಿ ಹಾಗೂ ಪ್ರಗತಿಪರ ಚಿಂತಕ ಪ್ರೊ. ಕೆ.ಎಸ್. ಭಗವಾನ್ ಸ್ಫೋಟಕ ಹೇಳಿಕೆ
  • ಸಂಶೋಧನೆಯಿಂದ ಸತ್ಯಾಸತ್ಯತೆ ಬಯಲು ಮಾಡಬಹುದು

ಮೈಸೂರು:  ವೈದಿಕ ಧರ್ಮ ವಿರೋಧಿಸಿದ ಕಾರಣಕ್ಕೆ ಬಸವಣ್ಣ ಹಾಗೂ ಸ್ವಾಮಿ ವಿವೇಕಾನಂದರನ್ನು ಹತ್ಯೆ ಮಾಡಲಾಗಿದ್ದು, ಸಂಶೋಧನೆಗಳ ಮೂಲಕ ಇದರ ಸತ್ಯಾಸತ್ಯತೆ ಬಯಲು ಮಾಡುವ ಅಗತ್ಯವಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಪ್ರತಿಪಾದಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಹಿಷಾ ದಸರಾ ಪ್ರತಿಷ್ಠಾನ ಸಮಿತಿ ವತಿಯಿಂದ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರು ಐಕ್ಯವಾದರು ಎಂಬುದು ಕೇವಲ ಕಟ್ಟುಕಥೆ. ಬಸವಣ್ಣನವರ ಸಮಾಜ ಸುಧಾರಣೆಯ ಕ್ರಾಂತಿಯನ್ನು ಸಹಿಸದೇ ಕಲ್ಯಾಣದಲ್ಲೇ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದರು ತಮ್ಮ 9 ಸಂಪುಟಗಳಲ್ಲಿ ಬೌದ್ಧ ಧರ್ಮದ ಬಗ್ಗೆ ವಿಸ್ತಾರವಾಗಿ ಮಾತನಾಡಿದ್ದಾರೆ. ಚಿಕಾಗೋದಲ್ಲಿ ಭಾಷಣ ಮಾಡುವಾಗ `ನೀವು ನನ್ನನ್ನು ಬೌದ್ಧನಲ್ಲ ಎಂದುಕೊಂಡಿದ್ದೀರಿ. ಆದರೆ ನಾನೊಬ್ಬ ಬೌದ್ಧ’ ಎಂದು ಭಾಷಣ ಶುರುಮಾಡುತ್ತಾರೆ. ಅವರಿಗೆ ಬೌದ್ಧ ಧರ್ಮದ ಬಗ್ಗೆ ಅಪಾರ ಒಲವು ಇತ್ತು. ಇದೇ ಕಾರಣಕ್ಕೆ ಅವರನ್ನು ಕೊಲೆ ಮಾಡಿರುವ ಬಗ್ಗೆ ನನಗೆ ಬಲವಾದ ಶಂಕೆ ಇದ್ದು, ಸಂಶೋಧನೆಗಳ ಮೂಲಕ ಇದಕ್ಕೆ ಉತ್ತರ ಕಂಡುಕೊಳ್ಳುವ ಅಗತ್ಯವಿದೆ. ಯಾವುದೇ ಅನಾರೋಗ್ಯವಿಲ್ಲದೆ, ಗಟ್ಟಿಮುಟ್ಟಾಗಿದ್ದ ವಿವೇಕಾನಂದರು ಇದ್ದಕ್ಕಿದ್ದಂತೆ ಸಾವನ್ನಪ್ಪಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಮಹಿಷಾ ದಸರಾ ಆಚರಣೆಗೆ ಸರ್ಕಾರ ಮುಂದಾಗಲಿ: ಬೌದ್ಧನಾದ ಮಹಿಷಾಸುರ ಜನಪರ ರಾಜನಾಗಿದ್ದ ಎಂಬುದು ಐತಿಹಾಸಿಕ ಸತ್ಯವಾಗಿದ್ದು, ಇಂತಹ ಮಹಾಪುರುಷನ ಹೆಸರಿನಲ್ಲಿ ಸರ್ಕಾರವೇ ಮಹಿಷಾ ದಸರಾ ಆಚರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರೊ.ಕೆ.ಎಸ್.ಭಗವಾನ್ ಒತ್ತಾಯಿಸಿದರು. ಮಹಿಷಾ ಒಬ್ಬ ಜನಪರ ರಾಜನಾಗಿದ್ದ ಕಾರಣದಿಂದಲೇ ಕೃತಜ್ಞತೆ ಸಲ್ಲಿಸಲು ಜನತೆ ತಮ್ಮ ಊರಿಗೆ ಅವನ ಹೆಸರನ್ನೇ ನಾಮಕರಣ ಮಾಡಿದ್ದಾರೆ. ಕೆಲವರು ಹೇಳುವಂತೆ ಮಹಿಷಾ ಒಬ್ಬ ರಾಕ್ಷಸನೇ ಆಗಿದ್ದರೆ ಮೈಸೂರಿಗೆ `ಮೈಸೂರು’ ಎಂಬ ಹೆಸರು ಏಕೆ ಬರುತ್ತಿತ್ತು ಎಂದು ಪ್ರಶ್ನಿಸಿದರು.

ಬೌದ್ಧ ಧರ್ಮ ರಾಷ್ಟ್ರೀಯ ಧರ್ಮ ಆಗಿತ್ತು: ಅಶೋಕ ಚಕ್ರವರ್ತಿ ತನ್ನ ಆಡಳಿತಾವಧಿಯಲ್ಲಿ ಬೌದ್ಧ ಧರ್ಮವನ್ನು ರಾಷ್ಟ್ರೀಯ ಧರ್ಮವಾಗಿ ಜಾರಿಗೊಳಿಸಿದ್ದ. ಈ ಹಿನ್ನೆಲೆಯಲ್ಲಿ ಸುಮಾರು 1300 ವರ್ಷಗಳ ಕಾಲ ಬೌದ್ಧ ಧರ್ಮ ಅಂದಿನ ಭಾರತದ ರಾಷ್ಟ್ರೀಯ ಧರ್ಮವಾಗಿತ್ತು. ಆದರೆ ಇತಿಹಾಸ ಇಂತಹ ಸತ್ಯ ಸಂಗತಿಗಳನ್ನು ಮರೆ ಮಾಚಿದ್ದು, ನಮ್ಮ ಶಾಲಾ-ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ಭಾರತದ ಇತಿಹಾಸ ಶೇ.50ರಷ್ಟು ಸುಳ್ಳಿನಿಂದ ಕೂಡಿದೆ. ಹೀಗಾಗಿ ದೇಶದ ನೈಜ ಇತಿಹಾಸ ಬೆಳಕಿಗೆ ಬರಬೇಕಿದೆ ಎಂದು ನುಡಿದರು.

ಬುದ್ಧ-ಅಶೋಕನ ಇತಿಹಾಸ ಮರೆ ಮಾಚಿದ್ದರು: ಬುದ್ಧ ಹಾಗೂ ಅಶೋಕ ಚಕ್ರವರ್ತಿಯ ಇತಿಹಾಸವನ್ನು ಒಂದು ಸಾವಿರ ವರ್ಷಗಳು ಮರೆ ಮಾಚಿದ್ದರು. ಇವರ ಇತಿಹಾಸವನ್ನು ಪಾಶ್ಚಿಮಾತ್ಯ ಇತಿಹಾಸ ತಜ್ಞರು ಬೆಳಕಿಗೆ ತಂದರು. ಈ ಅಂಶವನ್ನು ಮೈಸೂರು ವಿವಿ ಕುಲಪತಿಯಾಗಿದ್ದ ಪ್ರೊ.ಕೆ.ಎಂ.ಫಣಿಕರ್ ತಮ್ಮ ಪುಸ್ತಕದಲ್ಲಿ ಅನಾವರಣಗೊಳಿಸಿದ್ದಾರೆ ಎಂದು ಪ್ರೊ.ಭಗವಾನ್ ವಿವರಿಸಿದರು. ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ, ಮಹಿಷ ದಸರಾ ಪ್ರತಿಷ್ಠಾನ ಸಮಿತಿ ಅಧ್ಯಕ್ಷ ಶಾಂತರಾಜು, ಸಾಹಿತಿ ಬನ್ನೂರು ಕೆ.ರಾಜು, ಮಾಜಿ ಮೇಯರ್ ಪುರುಷೋತ್ತಮ್, ಲೇಖಕ ಸಿದ್ದಸ್ವಾಮಿ ಗೋಷ್ಠಿಯಲ್ಲಿದ್ದರು.

ಸರ್ಕಾರದಿಂದಲೇ ಮಹಿಷಾ ದಸರಾ ಆಚರಿಸಲಿ…

ಮೈಸೂರು:  ಈ ಬಾರಿಯ ದಸರಾ ಮಹೋತ್ಸವದ ಸಂದರ್ಭದಲ್ಲಿ ಅ.7ರಂದು ರಾಜ್ಯ ಸರ್ಕಾರದ ವತಿಯಿಂದಲೇ ಮಹಿಷಾ ದಸರಾ ಆಚರಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರೊ.ಭಗವಾನ್ ಮನವಿ ಮಾಡಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಮಹಿಷಾ ದಸರಾ ಪ್ರತಿಷ್ಠಾನ ಸಮಿತಿ ರಚಿಸಿಕೊಂಡು ಸ್ವಂತ ಖರ್ಚಿನಲ್ಲಿ ಮಹಿಷಾ ದಸರಾ ಆಚರಿಸಿಕೊಂಡು ಬರಲಾಗುತ್ತಿದೆ. ಮಹಿಷಾಸುರನ ನೈಜ ಇತಿಹಾಸ ಜನತೆಗೆ ತಿಳಿಯಬೇಕಾದರೆ, ಮಹಿಷಾ ದಸರಾವನ್ನು ರಾಜ್ಯ ಸರ್ಕಾರವೇ ಆಚರಿಸಬೇಕು. ಚಾಮುಂಡಿಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮದೊಂದಿಗೆ ಜಂಬೂ ಸವಾರಿ ಮಾದರಿಯಲ್ಲಿ ಆನೆ ಮೇಲೆ ಮಹಿಷಾಸುರನ ಪ್ರತಿಮೆ ಮೆರವಣಿಗೆ ಮಾಡಬೇಕೆಂದು ಕೋರಿದರು.

Translate »