ಹಾರಂಗಿ ನಾಲೆಗೆ ಮಾರುತಿ ವ್ಯಾನ್ ಉರುಳಿ ಒಂದೇ ಕುಟುಂಬದ ನಾಲ್ವರ ಜಲಸಮಾದಿ ಪಿರಿಯಾಪಟ್ಟಣದ ಬಳಿ ದುರಂತ
ಮೈಸೂರು

ಹಾರಂಗಿ ನಾಲೆಗೆ ಮಾರುತಿ ವ್ಯಾನ್ ಉರುಳಿ ಒಂದೇ ಕುಟುಂಬದ ನಾಲ್ವರ ಜಲಸಮಾದಿ ಪಿರಿಯಾಪಟ್ಟಣದ ಬಳಿ ದುರಂತ

August 7, 2018

ಪಿರಿಯಾಪಟ್ಟಣ: ತುಂಬಿ ಹರಿಯುತ್ತಿದ್ದ ನಾಲೆಗೆ ಮಾರುತಿ ವ್ಯಾನ್ ಉರುಳಿ ಬಿದ್ದು, ಒಂದೇ ಕುಟುಂಬದ ನಾಲ್ವರು ಜಲಸಮಾಧಿಯಾದ ದುರ್ಘಟನೆ ಇಂದು ಬೆಳಿಗ್ಗೆ ಪಿರಿಯಾಪಟ್ಟಣ ತಾಲೂಕು ದೊಡ್ಡಕಮರಹಳ್ಳಿ ಬಳಿ ಹಾರಂಗಿ ನಾಲೆಯಲ್ಲಿ ಸಂಭವಿಸಿದೆ.

ಈ ದುರಂತದಲ್ಲಿ ಕೊಡಗು ಜಿಲ್ಲೆ ನಾಪೋಕ್ಲು ಗ್ರಾಮದ ಪಳನಿಸ್ವಾಮಿ(50), ಪತ್ನಿ ಸಂಜು(40) ಪುತ್ರ ನಿಖಿತ್(12) ಹಾಗೂ ಪುತ್ರಿ ಪೂರ್ಣಿಮಾ(14) ಅಸುನೀಗಿದ್ದಾರೆ. ಈ ಕುಟುಂಬ ಪಿರಿಯಾಪಟ್ಟಣ ತಾಲೂಕು ಲಕ್ಷ್ಮೀಪುರ ಬಳಿ ಕೃಷಿ ಭೂಮಿ ಖರೀದಿಸಿ, ಬೇಸಾಯದಲ್ಲಿ ತೊಡಗಿತ್ತು ಎಂದು ಹೇಳಲಾಗಿದೆ.

ಇಂದು ಬೆಳಿಗ್ಗೆ 10.45ರ ಸಂದರ್ಭ ಅಂಗವಿಕಲ ತಮ್ಮ ಮಕ್ಕಳ ಮಾಸಾಶನವನ್ನು ಪಡೆಯುವ ಸಲುವಾಗಿ ದೊಡ್ಡಕಮರಹಳ್ಳಿ ಅಂಚೆ ಕಚೇರಿಗೆ ತೆರಳುತ್ತಿದ್ದರು ಎಂದು ಹೇಳಲಾಗಿದ್ದು, ಹಾರಂಗಿ ನಾಲೆ ಬದಿ ರಸ್ತೆಯಲ್ಲಿ ಮಾರುತಿ ವ್ಯಾನ್‍ನಲ್ಲಿ ಹೋಗುವಾಗ ಅದು ಚಾಲಕನ ನಿಯಂತ್ರಣ ಕಳೆದುಕೊಂಡು ನಾಲೆಗೆ ಉರುಳಿ ಬಿದ್ದಿದೆ. ಮೊದಲೇ ತುಂಬಿ ಹರಿಯುತ್ತಿದ್ದ ನಾಲೆ ನೀರಲ್ಲಿ ವ್ಯಾನ್ ಕ್ಷಣಾರ್ಧದಲ್ಲಿ ಮುಳುಗಿದೆ.

ಅಲ್ಲೇ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು, ಕಣ್ಣಾರೆ ದುರಂತ ಕಂಡು ಕೂಡಲೇ ಗ್ರಾಮಸ್ಥರಿಗೆ ತಿಳಿಸಿದ್ದಾರೆ. ನಂತರ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ವ್ಯಾನ್ ಮೇಲೆತ್ತಿದ್ದಾರೆ. ಈ ವೇಳೆ ನಾಲ್ಕು ದೇಹಗಳು ವ್ಯಾನ್‍ನಲ್ಲಿಯೇ ಇದ್ದವು ಎಂದು ಹೇಳಲಾಗಿದೆ.

ಮತ್ತೊಂದು ಮೂಲದ ಪ್ರಕಾರ ಕುಟುಂಬ ಆರ್ಥಿಕ ಸಂಕಷ್ಟದಿಂದ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸಮೀಪದ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ನಾಲ್ಕು ದೇಹಗಳನ್ನು ಸಾಗಿಸಿ, ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Translate »