ನಾಗಾಪುರ ಹಾಡಿಯಿಂದ ಆ.23ಕ್ಕೆ ದಸರಾ ಗಜಪಯಣ
ಮೈಸೂರು

ನಾಗಾಪುರ ಹಾಡಿಯಿಂದ ಆ.23ಕ್ಕೆ ದಸರಾ ಗಜಪಯಣ

August 7, 2018
  • ಮೊದಲ ತಂಡದಲ್ಲಿ ಅರ್ಜುನ ಸೇರಿ ಆರು ಆನೆ
  • ಜಿಲ್ಲಾಡಳಿತದಿಂದ ಆನೆಗಳಿಗೆ ಪೂಜೆಗೆ ಸಿದ್ಧತೆ

ಮೈಸೂರು:  ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ 12 ಆನೆಗಳಲ್ಲಿ ಗಜಪಡೆಯ ನಾಯಕ ಅರ್ಜುನ ಸೇರಿದಂತೆ ಆರು ಆನೆಗಳ ಮೊದಲ ತಂಡ ಆ.23ರಂದು ಹುಣಸೂರು ತಾಲೂಕಿನ ನಾಗಾಪುರ ಹಾಡಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿನತ್ತ ಪಯಣ ಆರಂಭಿಸಲಿವೆ.

ಪ್ರತಿ ವರ್ಷದಂತೆ ಈ ಬಾರಿಯೂ ನಾಗರಹೊಳೆ ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ನಾಗಾಪುರ ಹಾಡಿ ಬಳಿಯ ಗಿರಿಜನ ಆಶ್ರಮ ಶಾಲೆಯ ಆವರಣದಲ್ಲಿ ಆ.23ರಂದು ಬೆಳಿಗ್ಗೆ 11ಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು, ಗಜಪಡೆ ಮೊದಲ ತಂಡಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಗಜಪಯಣಕ್ಕೆ ಚಾಲನೆ ನೀಡಲಿದ್ದಾರೆ.

ಆನೆಗಳು ಜಂಬೂಸವಾರಿಗೆ ಮೆರಗು ನೀಡುವುದರಿಂದ ಗಜಪಡೆಗೆ ಎಲ್ಲಿಲ್ಲದ ಮಹತ್ವ ನೀಡಲಾಗುತ್ತದೆ. ಈ ಬಾರಿಯ ನವರಾತ್ರಿ ಅಕ್ಟೋಬರ್ 10ರಿಂದ 19ರವರೆಗೆ ನಡೆಯಲಿದೆ. ಅ.19ರಂದು ನಡೆಯುವ ಜಂಬೂಸವಾರಿ ಮೆರವಣಿಯಲ್ಲಿ ಚಿನ್ನದ ಅಂಬಾರಿಯನ್ನು ಅರ್ಜುನ ಹೊತ್ತು ಸಾಗಲಿದ್ದು, ಉಳಿದ ಆನೆಗಳು ಹೆಜ್ಜೆ ಹಾಕಲಿವೆ. ಈ ಹಿನ್ನೆಲೆಯಲ್ಲಿ ದಸರಾ ಆನೆಗಳಿಗೆ ಪೌಷ್ಟಿಕ ಆಹಾರ ನೀಡಿ, ತಯಾರು ಮಾಡುವುದಕ್ಕಾಗಿ ಆ.23ರಂದು ಆರು ಆನೆಗಳನ್ನು ಕರೆ ತರಲಾಗುತ್ತಿದೆ.

ಗಜಪಯಣದ ಉತ್ಸವ: ನಾಗರಹೊಳೆ ಅಭಯಾರಣ್ಯದ ವೀರನಹೊಸಳ್ಳಿ ಸಮೀಪದ ನಾಗಾಪುರ ಹಾಡಿ ಬಳಿ ಆ.23ರಂದು ನಡೆಯಲಿರುವ ಗಜಪಯಣಕ್ಕೆ ಉತ್ಸವದ ಮೆರಗು ನೀಡಲು ನಿರ್ಧರಿಸಲಾಗಿದೆ. ಗಜಪಯಣಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರನ್ನು ಆಹ್ವಾನಿಸಿ ವರ್ಣರಂಜಿತ ಕಾರ್ಯಕ್ರಮ ಏರ್ಪಡಿಸುತ್ತಾ ಬರಲಾಗುತ್ತಿದೆ. ಈ ಬಾರಿಯೂ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡಲು ನಿರ್ಧರಿಸಿದ್ದು, ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ. ಅಲ್ಲದೆ ಆದಿವಾಸಿ ಮಕ್ಕಳು ಹಾಗೂ ಟಿಬೆಟಿಯನ್ನರ ಸಾಂಪ್ರದಾಯಿಕ ನೃತ್ಯವನ್ನು ಆಯೋಜಿಸುವ ಮೂಲಕ ಗಜಪಯಣಕ್ಕೆ ಮೆರಗು ನೀಡಲು ನಿರ್ಧರಿಸಲಾಗಿದೆ.

ಯಾವ ಯಾವ ಆನೆ: ಕಾಡಿನಿಂದ ನಾಡಿಗೆ ಬರುವ ಮೊದಲ ತಂಡದಲ್ಲಿ ಗಜಪಡೆಯ ನಾಯಕ ಅರ್ಜುನ, ಬಲರಾಮ, ಅಭಿಮನ್ಯು, ಕಾವೇರಿ, ಚೈತ್ರ ಹಾಗೂ ಗೋಪಿ ಅಥವಾ ವಿಕ್ರಮ ಆಗಮಿಸುವುದು ಖಚಿತವಾಗಿದೆ. ದಸರಾ ಮಹೋತ್ಸವದಲ್ಲಿ ಈ ಆರು ಆನೆಗಳಿಗೆ ಪ್ರಮುಖ ಜವಾಬ್ದಾರಿ ಇರುವುದರಿಂದ ಮೊದಲ ತಂಡದಲ್ಲಿ ಮಣೆ ಹಾಕಲಾಗಿದೆ. ಬಂಡೀಪುರದ ಶಿಬಿರದಲ್ಲಿರುವ ಚೈತ್ರ ಆನೆ ನೇರವಾಗಿ ಮೈಸೂರಿಗೆ ಆಗಮಿಸಲಿದೆ. ಉಳಿದ ಐದು ಆನೆಗಳು ನಾಗಾಪುರ ಹಾಡಿಯಿಂದ ಮೈಸೂರಿನತ್ತ ಪಯಣ ಬೆಳೆಸಲಿವೆ.

ಒಟ್ಟು 15 ಆನೆಗಳ ಪಟ್ಟಿ ಸಿದ್ಧಗೊಳಿಸಿ, ಅವುಗಳಲ್ಲಿ 12 ಆನೆಗಳ ಆಯ್ಕೆಗಾಗಿ ಪಿಸಿಸಿಎಫ್ ಕಚೇರಿಗೆ ಕಳುಹಿಸಲಾಗಿದೆ. ನಾಡಹಬ್ಬ ದಸರಾ ಮಹೋತ್ಸವದಲ್ಲಿ ಹೆಚ್ಚಿನ ಜವಾಬ್ದಾರಿ ಹೊರುವ ಆರು ಆನೆಗಳನ್ನು ಮೊದಲ ತಂಡದಲ್ಲಿ ಆ.23ರಂದು ಮೈಸೂರಿಗೆ ಕರೆತರಲು ಉದ್ದೇಶಿಸಲಾಗಿದೆ. ಅಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಗಜಪಡೆಗೆ ಚಾಲನೆ ನೀಡಲಿದ್ದಾರೆ. ನಂತರ ಮೈಸೂರಿಗೆ ಬರುವ ಮೊದಲ ತಂಡದ ಆನೆಗಳಿಗೆ ಪೌಷ್ಟಿಕ ಆಹಾರ ನೀಡಿ, ಜಂಬೂಸವಾರಿ ತೆರಳುವ ಮಾರ್ಗದಲ್ಲಿ ತಾಲೀಮು ನಡೆಸಲಾಗುವುದು. – ಸಿದ್ರಾಮಪ್ಪ ಚಳ್ಕಾಪುರೆ, ಡಿಸಿಎಫ್

Translate »