ಬಸವ ಜಯಂತಿ ಪ್ರಚಾರ ರಥಕ್ಕೆ ಚಾಲನೆ, ಪೋಸ್ಟರ್ ಬಿಡುಗಡೆ
ಮೈಸೂರು

ಬಸವ ಜಯಂತಿ ಪ್ರಚಾರ ರಥಕ್ಕೆ ಚಾಲನೆ, ಪೋಸ್ಟರ್ ಬಿಡುಗಡೆ

July 30, 2018

ಮೈಸೂರು:  ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಆ.4 ಮತ್ತು 5ರಂದು ನಡೆಯಲಿರುವ ಬಸವೇಶ್ವರ ಜಯಂತಿ ಕಾರ್ಯಕ್ರಮದ ಪ್ರಚಾರ ರಥಕ್ಕೆ ಜೆಎಸ್‍ಎಸ್ ಮಹಾವಿದ್ಯಾಪೀಠದ ಗೌರವ ಕಾರ್ಯದರ್ಶಿ ಎಸ್.ಪಿ.ಮಂಜುನಾಥಸ್ವಾಮಿ ಭಾನುವಾರ ಮೈಸೂರಿನ ಕೆ.ಆರ್.ಮೊಹಲ್ಲಾದ ಮಾಧವಾಚಾರ್ ರಸ್ತೆಯ ಮಹದೇಶ್ವರ ದೇವಸ್ಥಾನ ವೃತ್ತದಲ್ಲಿ ಚಾಲನೆ ನೀಡಿದರು.

ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯಿತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟದ ಆಶ್ರಯದಲ್ಲಿ ಸಮಾರಂಭ ನಡೆಯಿತು. ಪ್ರಚಾರ ರಥಕ್ಕೆ ಚಾಲನೆ ನೀಡಿದ ಬಳಿಕ ಎಸ್.ಪಿ.ಮಂಜುನಾಥಸ್ವಾಮಿ ಅವರು ಮಾತನಾಡಿ, 12ನೇ ಶತಮಾನದಲ್ಲಿಯೇ ಅನುಭವ ಮಂಟಪ ಸ್ಥಾಪಿಸಿ, ಮಹಿಳೆಯರಿಗೆ ಹಾಗೂ ಎಲ್ಲಾ ವರ್ಗದವರಿಗೆ ಅವಕಾಶ ನೀಡಿ, ಕಾಯಕವೇ ಕೈಲಾಸ ಎಂಬ ಸಂದೇಶವನ್ನು ಸಾರಿದ ಬಸವಣ್ಣನವರ ವಚನ ಕ್ರಾಂತಿ ಇಂದಿಗೂ ಪ್ರಸ್ತುತವಾಗಿದೆ ಎಂದರು.
ಇಂದಿನ ಯುವ ಪೀಳಿಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದಿಕೊಂಡು ಕೀಳು ಮನೋಭಾವಗಳನ್ನು ತೊಡೆದುಹಾಕಿ ನಾವೆಲ್ಲರೂ ಸಮಾನತೆಯಿಂದ ಹೋಗಲು ಬಸವಣ್ಣನವರು ಸ್ಫೂರ್ತಿಯಾಗಿದ್ದಾರೆ. ಅವರ ಆದರ್ಶವನ್ನು ನಾವು , ಅದರಲ್ಲೂ ಯುವಜನತೆ ಹೆಚ್ಚಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ಸಂಸದ ಪ್ರತಾಪ್‍ಸಿಂಹ ಮಾತನಾಡಿ, ಬಸವಣ್ಣನವರು ಅನುಭವ ಮಂಟಪದ ಮೂಲಕ ಆಡಳಿತ ಹೇಗೆ ನಡೆಸಬೇಕು. ಅನ್ಯಾಯಗಳನ್ನು ಸರಿಪಡಿಸುವುದು ಹೇಗೆ? ಎಂಬುದನ್ನು ಆ ಕಾಲದಲ್ಲಿಯೇ ಪ್ರಜಾತಂತ್ರ ವ್ಯವಸ್ಥೆ ಹೇಗಿರಬೇಕು? ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ದೇಶಕ್ಕೆ ಪ್ರಜಾತಂತ್ರ ವ್ಯವಸ್ಥೆ ತಂದುಕೊಟ್ಟ ಕೀರ್ತಿ ಬಸವಣ್ಣನವರಿಗೆ ಸಲ್ಲಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಅವರ ಆದರ್ಶಗಳನ್ನು ಪಾಲಿಸಬೇಕು. ಜಾತಿ, ಮತ, ಧರ್ಮ ಎಂಬ ಸಂಕುಚಿತ ಮನೋಭಾವ ತೊರೆದು ಪ್ರೀತಿಯಿಂದ ಬದುಕು ನಡೆಸಬೇಕು. ಬಸವಣ್ಣನವರ ತತ್ವ ಅನುಸರಿಸಿ ಆಳುವ ಸರ್ಕಾರಕ್ಕೆ ಸವಾಲು ಎಸೆಯುವ ರೀತಿಯಲ್ಲಿ ವಿದ್ಯೆ ಕಲಿಸುತ್ತಿರುವ ಸುತ್ತೂರು ಸಂಸ್ಥಾನದ ಬಗ್ಗೆ ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದರು.

ಬಸವ ಜಯಂತಿ ಕಾರ್ಯಕ್ರಮದ ಪೋಸ್ಟರ್‍ಗಳನ್ನು ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ ಬಿಡುಗಡೆ ಮಾಡಿದರು. ಶಾಸಕ ಎಲ್.ನಾಗೇಂದ್ರ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಎಂಎಲ್‍ಸಿ ತೋಂಟದಾರ್ಯ, ಮೇಯರ್ ಬಿ.ಭಾಗ್ಯವತಿ, ಬಿಜೆಪಿ ಮುಖಂಡರಾದ ಕೆ.ಎನ್.ಪುಟ್ಟಬುದ್ಧಿ, ಹೆಚ್.ವಿ.ರಾಜೀವ್, ಕಾ.ಪು.ಸಿದ್ದಲಿಂಗಸ್ವಾಮಿ, ನಗರಪಾಲಿಕೆ ಸದಸ್ಯರಾದ ಶಿವಕುಮಾರ್, ಸುನೀಲ್, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ದೂರ ಕೆ.ಶಿವಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾದ ಮೈಸೂರು ನಗರ ಘಟಕದ ಅಧ್ಯಕ್ಷ ಟಿ.ಲಿಂಗರಾಜು, ನಗರ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಎಸ್.ಜಯಶಂಕರ್, ತಾಲೂಕು ಅಧ್ಯಕ್ಷ ನಂಜುಂಡಸ್ವಾಮಿ ಶಿವಪ್ಪ, ಲೋಕೇಶ್, ಮಾರ್ಬಳ್ಳಿ ಚಂದ್ರಶೇಖರ್, ಮಹದೇವಸ್ವಾಮಿ, ಡಿ.ಪಿ.ಸುರೇಶ್, ಮಧುಕರ್, ಮುತ್ತಣ್ಣ, ಕೀರ್ತಿ, ಶಿವಪ್ರಕಾಶ್ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »