ಹಲವು ರಾಜಕಾರಣಿಗಳು ಮೌಢ್ಯಾಚರಣೆಯಲ್ಲಿ ಮುಳುಗಿದ್ದಾರೆ: ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ವಿಷಾದ
ಮೈಸೂರು

ಹಲವು ರಾಜಕಾರಣಿಗಳು ಮೌಢ್ಯಾಚರಣೆಯಲ್ಲಿ ಮುಳುಗಿದ್ದಾರೆ: ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ವಿಷಾದ

July 30, 2018

ಮೈಸೂರು:  ದೇಶದ ಹಲವು ರಾಜಕಾರಣಿಗಳು ಮೌಢ್ಯಾಚಾರಣೆಯಲ್ಲಿ ಮುಳಗಿದ್ದು, ಇಂದಿನ ಮುಖ್ಯಮಂತ್ರಿಗಳು, ಅವರ ಪಿತೃಗಳು ಹಾಗೂ ಅವರ ಅಗ್ರಜನೂ ಮಾತ್ರವಲ್ಲದೆ, ಉಪಮುಖ್ಯಮಂತ್ರಿ ಡಾ.ಪರಮೇಶ್ವರ್ ಸಹ ಇದರಿಂದ ಹೊರತಾಗಿಲ್ಲ ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ವಿಷಾದಿಸಿದರು.

ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಸಮೈಕ್ಯ ಪಬ್ಲಿಕೇಷನ್ಸ್ ಜಂಟಿ ಆಶ್ರಯದಲ್ಲಿ ಮೈಸೂರು ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಾ.ದಿವಾಕರ ಅವರ ಹತ್ತು ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದೇಶದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ 200 ಮಂದಿ ಬ್ರಾಹ್ಮಣರ ಪಾದ ಭೂಜೆ ಮಾಡಿದ್ದರು. ಇದನ್ನು ಅಂದು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಲೋಹಿಯಾ ಕಟುವಾಗಿ ಟೀಕಿಸಿದ್ದರು. ಇಂದಿಗೂ ರಾಜಕಾರಣಿಗಳು ಇಂತಹ ಮೌಢ್ಯಾಚರಣೆಯಿಂದ ಹೊರತಾಗಿಲ್ಲ. ಮೌಢ್ಯಾಚರಣೆ ಕೆಂಗಲ್ ಹನುಮಂತಯ್ಯ ಅವರಲ್ಲೂ ಇತ್ತು. ಇಂದಿನ ಮುಖ್ಯಮಂತ್ರಿ, ಅವರ ಪಿತೃ ಹಾಗೂ ಅಗ್ರಜನಿಗೂ (ಅಣ್ಣ) ಇದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಒಳಗೊಂಡು ಅನೇಕ ರಾಜಕಾರಣಿಗಳು ಮೌಢ್ಯಾಚರಣೆಯಲ್ಲಿ ನಂಬಿಕೆ ಇರಿಸಿದ್ದಾರೆ. ಇವರ ನಂಬಿಕೆ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಬೇಕಿದ್ದರೆ ಖಾಸಗಿಯಾಗಿ ಮಾಡಿಕೊಳ್ಳಲಿ. ಆದರೆ ಸಾರ್ವಜನಿಕವಾಗಿ ತಮ್ಮ ಮೂಢನಂಬಿಕೆಗಳನ್ನು ಪ್ರದರ್ಶಿಸುವುದು ಸರಿಯಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಇಂದಿಗೂ ಮಹಿಳೆಯರಿಗೆ ಹಲವು ದೇವಾಲಯಗಳಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ವಿಧವೆ ಎಂಬ ಕಾರಣಕ್ಕೆ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರನ್ನೇ ಎಷ್ಟೊ ದೇವಾಲಯಗಳಲ್ಲಿ ಪ್ರವೇಶ ನೀಡಲಿಲ್ಲ. ರಾಜೀವ್ ಗಾಂಧಿ ಅವರಿನ್ನೂ ಇದೇ ರೀತಿ ನಡೆಸಿಕೊಳ್ಳಲಾಗಿತ್ತು. ಅಂದರೆ ಉನ್ನತ ಅಧಿಕಾರವಿದ್ದರೂ ಒಣಕಟ್ಟುಪಾಡುಗಳಿಗೆ ಆದ್ಯತೆ ನೀಡುವ ಪುರೋಹಿತ ವರ್ಗದ ಪ್ರಾಬಲ್ಯವೇ ಮೇಲುಗೈ ಸಾಧಿಸಿದೆ. ದೇಶದಲ್ಲಿ ಇಂದಿಗೂ ಕೂಡ ಮೂಲಭೂತವಾದಿ ಸಿದ್ಧಾಂತಗಳು ವಿಜೃಂಭಿಸುತ್ತಿವೆ. ಅಸ್ಪøಶ್ಯತೆ ದೊಡ್ಡ ಪ್ರಮಾಣದಲ್ಲಿ ಸಮಾಜವನ್ನು ಬಾಧಿಸುತ್ತಿದ್ದರೂ ಆಳುವ ವರ್ಗ ಮಾತ್ರ ಕಣ್ಮುಚ್ಚಿ ಕುಳಿತಿದೆ. ಇಂತಹ ಸನ್ನಿವೇಶದಲ್ಲಿ ನಾವು ನಿರಾಸವಾದಿಗಳಾಗದೇ ಸಾಮೂಹಿಕ ಹೊಣೆಗಾರಿಕೆಯೊಂದಿಗೆ ಪ್ರಾಮಾಣಿಕ ಪ್ರಯತ್ನ ನಡೆಸಿದರೆ ಹೊಸ ಭಾರತ ಕಟ್ಟಲು ಸಾಧ್ಯವಿದೆ ಎಂದು ಪ್ರತಿಪಾದಿಸಿದರು.

ಚಿಕ್ಕ ವಯಸ್ಸಿನಲ್ಲಿ ವೈಚಾರಿಕ ಚಿಂತನೆ ಹಾಗೂ ಪ್ರಗತಿಪರ ಸಿದ್ಧಾಂತಕ್ಕೆ ಒಳಗಾದರೆ ಅಂತಹವರು ಜೀವನಪರ್ಯಂತ ಆ ಸಿದ್ಧಾಂತಗಳೊಂದಿಗೆ ಬದುಕುತ್ತಾರೆ. ಅಂತವರ ಸಾಲಿನಲ್ಲಿ ನಾ.ದಿವಾಕರ ಸಹ ಇದ್ದಾರೆ. ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ, ಜಾತಿಯತೆ, ಮೌಢ್ಯ ತಾಂಡವವಾಡುವ ಜಿಲ್ಲೆಗಳ ಸಾಲಿನಲ್ಲಿ ಮಂಡ್ಯ ಕೂಡ ಸೇರಿದ್ದು, ಇಂತಹ ಜಿಲ್ಲೆಯ ಹಿಂದುಳಿದ ಪ್ರದೇಶವಾದ ನಾಗಮಂಗಲದಿಂದ ಬಂದ ನಾ.ದಿವಾಕರ ಅವರು ಪ್ರಗತಿಪರ ಚಿಂತನೆಯೊಂದಿಗೆ ಅಪಾರ ಸಾಹಿತ್ಯ ಕೃಷಿ ಮಾಡಿದ್ದಾರೆ. ಬ್ಯಾಂಕ್ ಅಧಿಕಾರಿಯಾಗಿ ಒಬ್ಬ ಸಾಹಿತ್ಯ ಓದಿದ ಪ್ರಾಧ್ಯಾಪಕ ಮಾದಷ್ಟು ದೊಡ್ಡ ಪ್ರಮಾಣದಲ್ಲಿ ಸಾಹಿತ್ಯ ಸೇವೆ ಮಾಡಿದ್ದಾರೆ. ಇಂದು ಬಿಡುಗಡೆಗೊಂಡ ಅವರ 10 ಕೃತಿಗಳು ವಿಶೇಷತೆಯಿಂದ ಕೂಡಿವೆ ಎಂದು ಶ್ಲಾಘಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಆರ್.ಮಹದೇವಪ್ಪ, ಅಖಿಲ ಭಾರತ ಪ್ರಜಾ ವೇದಿಕೆ ಅಧ್ಯಕ್ಷ ಡಾ.ವಿ.ಲಕ್ಷ್ಮೀನಾರಾಯಣ, ಮಾಕ್ರ್ಸ್‍ವಾದಿ ಚಿಂತಕರಾದ ಪ್ರೊ.ಕೆ.ಪಿ.ವಾಸುದೇವನ್, ಡಾ.ಬಿ.ಆರ್.ಮಂಜುನಾಥ್, ವಕೀಲ ಜೀರಹಳ್ಳಿ ರಮೇಶ್‍ಗೌಡ, ಕೃತಿಗಳ ಕರ್ತೃ ನಾ.ದಿವಾಕರ ಮತ್ತಿತರರು ಹಾಜರಿದ್ದರು.

ಬಿಡುಗಡೆಗೊಂಡ ಕೃತಿಗಳು
ಇಂದು ಬಿಡುಗಡೆಗೊಂಡ ನಾ.ದಿವಾಕರ ಅವರ 10 ಕೃತಿಗಳಲ್ಲಿ ಹಲವು ಅನುವಾದಿತ ಕೃತಿಗಳಾಗಿವೆ. `ದೈವ ಸಂಹಾರಕ ಡಾ.ಬಿ.ಆರ್.ಅಂಬೇಡ್ಕರ್’, `ತತ್ವಶಾಸ್ತ್ರದ ಬಡತನ’, `ಗಾಂಧಿ ಮತ್ತು ಅಸ್ಪøಶ್ಯರ ವಿಮೋಚನೆ’, `ಜಾತಿ ಮತ್ತು ಪ್ರಜಾತಂತ್ರ’, `ದಮನಿತ ಹಿಂದೂಗಳು’, `ಜಾಗತೀಕರಣ ಸಂದರ್ಭದಲ್ಲಿ ಅಭಿವೃದ್ಧಿ ಮತ್ತು ಅಧಿಕಾರ ರಾಜಕಾರಣ’, `ವೈಜ್ಞಾನಿಕ ಸಮಾಜವಾದ ಮತ್ತು ಕಾಲ್ಪನಿಕ ಸಮಾಜವಾದ’, `ಭಗತ್‍ಸಿಂಗ್-ವೀರ್ ಸಾವರ್ಕರ್’, `ನೋಟು ರದ್ದತಿ ಮತ್ತು ನವ ಉದಾರವಾದಿ ಆರ್ಥಿಕ ನೀತಿ’, `ಸಮಾಜ ಬದಲಾವಣೆ ಮತ್ತು ಯುವಜನತೆ’ ಎಂಬ ಕೃತಿಗಳು ಬಿಡುಗಡೆಗೊಂಡವು.

Translate »