ಮೋದಿ ಪರಿಪಕ್ವ ಯೋಗ ಪ್ರದರ್ಶನ
ಮೈಸೂರು

ಮೋದಿ ಪರಿಪಕ್ವ ಯೋಗ ಪ್ರದರ್ಶನ

June 22, 2022

ಮೈಸೂರು, ಜೂ.21 (ಎಂಟಿವೈ)- ಮೈಸೂರು ಅರಮನೆ ಆವರಣ ದಲ್ಲಿ ಮಂಗಳವಾರ ನಡೆದ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯ ಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೆಲವು ಕ್ಲಿಷ್ಟಕರ ಆಸನ ಗಳೂ ಸೇರಿದಂತೆ ನುರಿತ ಯೋಗಪಟುಗಳಿಗೆ ಸರಿಸಮಾನವಾಗಿ 45 ನಿಮಿಷ ಯೋಗಾಸನ ಮಾಡಿ, ಎಲ್ಲರ ಗಮನ ಸೆಳೆದರು.

ವೇದಿಕೆ ಕಾರ್ಯಕ್ರಮದಲ್ಲಿ ಭಾಷಣ ಮುಗಿಸಿದ ಬಳಿಕ ನೇರವಾಗಿ ಯೋಗಪಟುಗಳ ಮಧ್ಯೆ ತಮಗೆ ಮೀಸಲಾಗಿದ್ದ ಮ್ಯಾಟ್ ಮೇಲೆ ಆಸೀನರಾಗಿ ಯೋಗ ಪ್ರದರ್ಶನÀಕ್ಕೆ ಸಜ್ಜಾದರು.

71 ವರ್ಷದ ಮೋದಿ ಅವರು ಪ್ರತಿ ಆಸನವನ್ನೂ ಬಹಳ ಸುಲಲಿತವಾಗಿ ಯುವ ಜನರು ನಾಚುವಂತೆ ಮಾಡಿದರು. ನಿಂತು, ಕುಳಿತು ಮತ್ತು ಮಲಗಿ ಹಲವು ಆಸನ ಗಳನ್ನು ಲೀಲಾಜಾಲವಾಗಿ ಪ್ರದರ್ಶಿಸಿದರು. ಪ್ರಾಣಾಯಾಮವನ್ನು ನಿರಾಯಾಸವಾಗಿ ಮಾಡುವ ಮೂಲಕ ಗಮನ ಸೆಳೆದರು. ಅವರ ಯೋಗಾಭ್ಯಾಸವನ್ನು ಸುತ್ತ ನೆರೆದವರು ಮತ್ತು ಮಾಧ್ಯಮದವರು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಮುಗಿಬಿದ್ದರು.

ಬೆಳಗ್ಗೆ 7 ಗಂಟೆಗೆ ಆರಂಭವಾದ ಯೋಗ ಪ್ರದರ್ಶನದಲ್ಲಿ ಯೋಗ ಗುರುಗಳ ಸೂಚನೆಯಂತೆ ಸಮಸ್ಥಿತಿಯಿಂದ ಕುತ್ತಿಗೆ ಮುಂದೆ, ಹಿಂದೆ, ಕುತ್ತಿಗೆ ಬಲ-ಎಡ ಹೀಗೆ 4 ನಿಮಿಷ ಲಘು ವ್ಯಾಯಾಮ ಮಾಡಿ ಮೋದಿ ತಯಾರಾದರು. ಬಳಿಕ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧಚಕ್ರಾಸನ, ತ್ರಿಕೋಣಾಸನ, ಸಮದಂಡಾಸನವನ್ನು ಮಾಡಿದರು. ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ ಹೀಗೆ ವಿವಿಧ ಆಸನಗಳನ್ನು 25 ನಿಮಿಷ ಕಾಲ ಪ್ರದರ್ಶಿಸಿದರು. ಕಪಾಲಭಾತಿ, ನಾಡಿಶೋಧ ಪ್ರಾಣಾಯಾಮ, ಶೀತಲಿ ಪ್ರಾಣಾಮಯ, ಭ್ರಾಮರಿ ಪ್ರಾಣಾಯಾಮ ಬಳಿಕ ಧ್ಯಾನ ಮಾಡಿದರು. ಹೀಗೆ ಎಲ್ಲ ಆಸನಗಳನ್ನು ನಿರರ್ಗಳÀವಾಗಿ ಮಾಡಿದರು.

ದೀರ್ಘ ದಂಡ ನಮಸ್ಕಾರ: ಯೋಗಾಸನದ ಬಳಿಕ ಜನರತ್ತ ತಿರುಗಿದ ಪ್ರಧಾನಿ ಮೋದಿ, ಕೈ ಜೋಡಿಸಿ ಮುಗಿದರು. ಈ ವೇಳೆ ಸಭಿಕರು `ಮೋದಿ ಮೋದಿ’ ಎಂದು ಘೋಷಣೆ ಕೂಗಲಾರಂಭಿಸಿದರು. ಕೊನೆಗೆ ಕೈಬೀಸುತ್ತಲೇ ಜನರ ಬಳಿ ತೆರಳಿದರು. ಈ ವೇಳೆ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಯೋಗಪಟುಗಳು ಮುಗಿಬಿದ್ದರು. ಪೋಷಕರೊಂ ದಿಗೆ ಬಂದಿದ್ದ ಮಗುವಿನ ಕೆನ್ನೆ ಹಿಂಡಿದ ಮೋದಿ, ಅದರೊಂದಿಗೆ ಫೆÇೀಟೋ ತೆಗೆಸಿಕೊಂಡು ಮುನ್ನಡೆಯುತ್ತಿದ್ದಾಗ, ಯೋಗ ಮಾಡುತ್ತಿದ್ದವರೊಬ್ಬರು ಮೋದಿಯವರ ಪಾದಕ್ಕೆ ದೀರ್ಘ ದಂಡ ನಮಸ್ಕಾರ ಮಾಡಿದರು. ಅನಿರೀಕ್ಷಿತ ಈ ಬೆಳವಣಿಗೆಯಿಂದ ಎಚ್ಚೆತ್ತ ಭದ್ರತಾ ಸಿಬ್ಬಂದಿ ಮೋದಿ ಅವರ ಪಾದದ ಬಳಿ ಮಲಗಿದ್ದ ಯುವಕನನ್ನು ಮೇಲೆತ್ತಿ, ಒಂದೆಡೆ ಸರಿಸಿದರು. ಬಳಿಕ ಎಸ್ಪಿಜಿ ಬೆಂಗಾವಲಿನಲ್ಲಿ ಮೋದಿ ಅರಮನೆ ಆವರಣದಿಂದ ನಿರ್ಗಮಿಸಿದರು.

Translate »