ಮುಂಗಾರು ಕೈಕೊಡುವ ಸಾಧ್ಯತೆ: ರೈತರಲ್ಲಿ ಆತಂಕ
ಮೈಸೂರು

ಮುಂಗಾರು ಕೈಕೊಡುವ ಸಾಧ್ಯತೆ: ರೈತರಲ್ಲಿ ಆತಂಕ

June 30, 2021

ಮೈಸೂರು,ಜೂ.29(ಎಸ್‍ಬಿಡಿ)-ಮೈಸೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ಹಿನ್ನಡೆಯಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ಪ್ರಸಕ್ತ ವರ್ಷದ ಈ 6 ತಿಂಗಳಲ್ಲಿ(ಜನವರಿ-ಜೂನ್) 296.4 ಮಿ.ಮೀ. ವಾಡಿಕೆ ಮಳೆ ನಿರೀಕ್ಷಿಸಲಾಗಿತ್ತು. ಆದರೆ ಆರಂಭದ 2 ತಿಂಗಳು ಉತ್ತಮ ಮಳೆಯಾಗಿತ್ತಾ ದರೂ ನಂತರದ 4 ತಿಂಗಳಲ್ಲಿ ಮಳೆ ಕೊರತೆ ಎದು ರಾಗಿದೆ. ಜನವರಿಯಲ್ಲಿ 32.6 ಮಿ.ಮೀ., ಫೆಬ್ರವರಿಯಲ್ಲಿ 14.78, ಮಾರ್ಚ್‍ನಲ್ಲಿ 2.7, ಏಪ್ರಿಲ್‍ನಲ್ಲಿ 35.9, ಮೇ ತಿಂಗಳಲ್ಲಿ 72.5 ಹಾಗೂ ಜೂನ್‍ನಲ್ಲಿ 63.2 ಮಿ.ಮೀ (ಈ ದಿನದವರೆಗೆ) ಸೇರಿದಂತೆ ಒಟ್ಟು 234 ಮಿ.ಮೀ ಮಳೆಯಾಗಿದೆ. ಅಂದರೆ ಶೇ.21ರಷ್ಟು ಮಳೆ ಕೊರತೆಯಾಗಿದೆ. ಕಳೆದ ವರ್ಷ ಆರಂಭದ 2 ತಿಂಗಳು ಮಳೆ ಕೊರತೆ ಯಾಗಿತ್ತಾದರೂ ನಂತರದಲ್ಲಿ ಬಿರುಸುಗೊಂಡು ಈ ದಿನದವರೆಗೆ 323.5 ಮಿ.ಮೀ. ಮಳೆಯಾಗಿತ್ತು.

ತಾಲೂಕುವಾರು ಮಳೆ: ಹೆಚ್.ಡಿ.ಕೋಟೆ ತಾಲೂಕಿ ನಲ್ಲಿ 260.2, ಹುಣಸೂರು 233.5, ಕೆ.ಆರ್.ನಗರ 197.4, ಮೈಸೂರು 225.6, ನಂಜನಗೂಡು 203.9, ಪಿರಿಯಾ ಪಟ್ಟಣ 274.7, ತಿ.ನರಸೀಪುರ 223.3, ಸರಗೂರು ತಾಲೂಕಿನಲ್ಲಿ 242.6 ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ 234 ಮಿ.ಮೀ ಮಳೆಯಾಗಿದೆ. ತಾಲೂಕುವಾರು ಮಳೆ ಪ್ರಮಾಣ ಆಧರಿಸಿದರೆ ಸರಗೂರಿನಲ್ಲಿ ಅತೀ ಹೆಚ್ಚು ಶೇ.34ರಷ್ಟು ಮಳೆ ಕೊರತೆಯಾಗಿದೆ.
ಬಿತ್ತನೆ ಹಿನ್ನಡೆ: ಜಿಲ್ಲೆಯಲ್ಲಿ 2,81,674 ಹೆಕ್ಟೇರ್‍ನಷ್ಟು ಮಳೆ ಆಶ್ರಿತ ಹಾಗೂ 1,14,100 ಹೆಕ್ಟೇರ್‍ನಷ್ಟು ನೀರಾವರಿ ಪ್ರದೇಶ ಸೇರಿ ಒಟ್ಟು 3,95,774 ಹೆಕ್ಟೇರ್ ಭೂಮಿಯಲ್ಲಿ ಮುಂಗಾರು ಬಿತ್ತನೆಯಾಗುವ ಗುರಿ ಹೊಂದಲಾಗಿದೆ. ಆದರೆ ಸದ್ಯ 1,96,446 ಹೆಕ್ಟೇರ್ ಮಳೆ ಆಶ್ರಿತ, 4,643 ಹೆಕ್ಟೇರ್ ನೀರಾವರಿ ಪ್ರದೇಶ ಸೇರಿ ಒಟ್ಟು 2,01,089 ಹೆಕ್ಟೇರ್‍ನಲ್ಲಿ ಬಿತ್ತನೆ ಕಾರ್ಯವಾಗಿದೆ. ಅಂದರೆ ಮುಂಗಾರು ಅವಧಿಯ ಬಿತ್ತನೆ ಕ್ಷೇತ್ರ ಗುರಿಯಲ್ಲಿ ಶೇ.51ರಷ್ಟು ಸಾಧನೆಯಾಗಿದೆ.

ಯಾವ ಬೆಳೆ: 1 ಲಕ್ಷ ಹೆಕ್ಟೇರ್‍ಗೂ ಹೆಚ್ಚು ಪ್ರದೇಶದಲ್ಲಿ ಬತ್ತ ಬಿತ್ತನೆ ಗುರಿ ಕ್ಷೇತ್ರವಿದ್ದು, ಸದ್ಯ 55 ಹೆಕ್ಟೇರ್‍ನಲ್ಲಿ ಮಾತ್ರ ಬಿತ್ತನೆಯಾಗಿದೆ. ಹೈಬ್ರಿಡ್ ಜೋಳ 1,395 ಹೆಕ್ಟೇರ್ (ಶೇ.35), ರಾಗಿ 2,934(ಶೇ.7), ಮುಸುಕಿನ ಜೋಳ 43,260(ಶೇ.101), ತೊಗರಿ 1,357(ಶೇ.39), ಅಲಸಂದೆ 26,777(ಶೇ.103), ಉದ್ದು 8,999(ಶೇ.98), ಹೆಸರು 6,703(ಶೇ.110), ಅವರೆ 1,469(ಶೇ.9), ನೆಲಗಡಲೆ 1,077 (ಶೇ.78), ಎಳ್ಳು 1,602(ಶೇ.25), ಹತ್ತಿ 31,453 (ಶೇ.67), ಹೊಗೆಸೊಪ್ಪು 62,899(ಶೇ.99), ಕಬ್ಬು (ಹೊಸನಾಟಿ) 1,729(ಶೇ.15), ಸೂರ್ಯಕಾಂತಿ 2,246 (ಶೇ.245), ಹರಳು 452(ಶೇ.21) ಹಾಗೂ ಹುಚ್ಚೆಳ್ಳು 20 ಹೆಕ್ಟೇರ್(ಶೇ.8)ನಲ್ಲಿ ಬಿತ್ತನೆಯಾಗಿದೆ. ಗುರಿ ಕ್ಷೇತ್ರ ಹೊಂದಿರದ ಸ್ಥಳೀಯ ಜೋಳವನ್ನು 4,110 ಹೆಕ್ಟೇರ್‍ನಲ್ಲಿ ಬಿತ್ತನೆ ಮಾಡಲಾಗಿದೆ. ಕಬ್ಬಿನ ಕೂಳೆ 2,552 ಹೆಕ್ಟೇರ್ ನಲ್ಲಿದೆ. 11 ಸಾವಿರ ಹೆಕ್ಟೇರ್ ಗುರಿ ಕ್ಷೇತ್ರವಿರುವ ಹುರುಳಿ ಹಾಗೂ 1,550 ಹೆಕ್ಟೇರ್ ಗುರಿ ಕ್ಷೇತ್ರವಿರುವ ನವಣೆಯನ್ನು ಈವರೆಗೂ ಬಿತ್ತನೆ ಮಾಡಿಲ್ಲ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಮಳೆ ಕೊರತೆಯಿಂ ದಾಗಿ ಮುಂಗಾರು ಹಂಗಾಮು ಬೆಳೆಗಳ ಬಿತ್ತನೆ ಕಾರ್ಯ ದಲ್ಲಿ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆ ಸಂಬಂಧ ರೈತರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಶೀಘ್ರದಲ್ಲೇ ಜಿಲ್ಲಾ ಪಂಚಾಯ್ತಿ ಸಿಇಓ ಅಧ್ಯಕ್ಷತೆಯಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ

Translate »