ಮೈಸೂರು,ಸೆ.1(ಎಂಕೆ)- ಮೈಸೂರು ನಗರ ಮತ್ತು ಜಿಲ್ಲೆಯ ಹಲವೆಡೆ ಸೋಮವಾರ ತಡರಾತ್ರಿ ಸುರಿದ ಭಾರೀ ಮಳೆಗೆ 18 ವಿದ್ಯುತ್ ಕಂಬಗಳು ನೆಲಕ್ಕುರುಳಿದರೆ, 1 ಟ್ರಾನ್ಸ್‍ಫಾರ್ಮರ್ ಘಟಕ ಸುಟ್ಟು ಹೋಗಿದೆ.
ನಗರದ ವಸಂತ ಮಹಲ್ ರಸ್ತೆಯಲ್ಲಿ ಟ್ರಾನ್ಸ್‍ಫಾರ್ಮರ್ ಘಟಕ ಶಾರ್ಟ್‍ಸಕ್ರ್ಯೂಟ್‍ನಿಂದ ಸುಟ್ಟು ಹೋಗಿದ್ದರೆ, ನಂಜನಗೂಡು ತಾಲೂಕಿನಲ್ಲಿ 18 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಗಾಳಿಯ ವೇಗ ಕಡಿಮೆ ಇದ್ದುದರಿಂದ ಮೈಸೂರು ನಗರ, ನಂಜನಗೂಡು ಹೊರತು ಬೇರೆ ತಾಲೂಕುಗಳಲ್ಲಿ ವಿದ್ಯುತ್ ಕಂಬ, ತಂತಿ, ಟ್ರಾನ್ಸ್ ಫಾರ್ಮರ್‍ಗೆ ಹಾನಿಯಾಗಿಲ್ಲ ಎಂದು ಸೆಸ್ಕ್‍ನ ಮೈಸೂರು ಕಾರ್ಯ ಮತ್ತು ಪಾಲನ ವೃತ್ತ ಅಧೀಕ್ಷಕ ಇಂಜಿನಿಯರ್ ಕೆ.ಎಂ.ಮುನಿ ಗೋಪಾಲರಾಜು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.
41 ಮಿ.ಮೀ ಮಳೆ: ಸೋಮವಾರ ತಡರಾತ್ರಿಯಿಂದ ಮಂಗಳವಾರ ಬೆಳಗ್ಗಿನವರೆಗೆ ಮಳೆ ಸುರಿದಿದೆ. ಜಿಲ್ಲೆಯಾದ್ಯಂತ 41 ಮಿ.ಮೀ ಮಳೆಯಾಗಿದೆ ಎಂದು ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾ ಪಕ ಸಿ.ಗೋವಿಂದರಾಜು ತಿಳಿಸಿದರು. ಕಳೆದ 16 ದಿನಗಳಿಂದ ಮಳೆಯಿಲ್ಲದೆ ಹಲಸಂದೆ, ತೊಗರಿ, ಮೆಕ್ಕೆಜೋಳದ ಗಿಡಗಳಲ್ಲಿ ಕ್ರಿಮಿಕೀಟ ಹೆಚ್ಚಾಗಿದ್ದವು. ಸೋಮವಾರ ತಡರಾತ್ರಿ ಸುರಿದ ಮಳೆಯಿಂದ ಅನುಕೂಲವಾಗಿದೆ. ಅಲ್ಲದೆ ಮುಂದಿನ 3 ದಿನ ಮಳೆಯಾಗುವ ಸಾಧ್ಯತೆಯಿದೆ ಎಂದರು.