ಲೆಕ್ಕ ಪರಿಶೋಧಕರ ಪರಿಶ್ರಮದಿಂದ ಹೆಚ್ಚು ತೆರಿಗೆ ಸಂಗ್ರಹ
ಮೈಸೂರು

ಲೆಕ್ಕ ಪರಿಶೋಧಕರ ಪರಿಶ್ರಮದಿಂದ ಹೆಚ್ಚು ತೆರಿಗೆ ಸಂಗ್ರಹ

July 2, 2018

ಮೈಸೂರು: ಲೆಕ್ಕ ಪರಿಶೋಧಕರ ಪರಿಶ್ರಮದಿಂದ ಸರ್ಕಾರದ ತೆರಿಗೆ ಸಂಗ್ರಹದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ ಎಂದು ದಿ ಇನ್ಸ್‍ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯ (ಐಸಿಎಐ) ದಕ್ಷಿಣ ಭಾರತದ ಪ್ರಾದೇಶಿಕ ಕೌನ್ಸಿಲ್‍ನ ಮಾಜಿ ಅಧ್ಯಕ್ಷರೂ ಆದ ಹಿರಿಯ ಲೆಕ್ಕಪರಿಶೋಧಕ ಕೋತ ಎಸ್.ಶ್ರೀನಿವಾಸ್ ಹೇಳಿದರು.

ಐಸಿಎಐ ದಕ್ಷಿಣ ಭಾರತದ ಪ್ರಾದೇಶಿಕ ಕೌನ್ಸಿಲ್‍ನ ಮೈಸೂರು ಶಾಖೆ ವತಿಯಿಂದ ಮೈಸೂರಿನ ಬೋಗಾದಿಯ ಬ್ಯಾಂಕ್ ಎಂಪ್ಲಾಯೀಸ್ ಕಾಲೋನಿಯಲ್ಲಿರುವ ಐಸಿಎಐ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿಎ (ಚಾರ್ಟರ್ಡ್ ಅಕೌಂಟೆಂಟ್) ದಿನಾಚರಣೆ ಹಾಗೂ ಐಸಿಎಐ ಅಮೃತ ಮಹೋತ್ಸವ ಪ್ರಾರಂಭೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸರ್ಕಾರಕ್ಕೆ ತೆರಿಗೆ ಹೆಚ್ಚು ಹೆಚ್ಚು ಸಂದಾಯವಾಗುತ್ತಿರುವ ಹಿನ್ನೆಲೆಯಲ್ಲಿ ಲೆಕ್ಕ ಪರಿಶೋಧಕರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಮಾರು 2 ಲಕ್ಷದ 8 ಸಾವಿರ ಸಿಎಗಳು ದೇಶದಲ್ಲಿ ಇದ್ದಾರೆ. ಈ ಕ್ಷೇತ್ರದ ವೃತ್ತಿಪರರಿಗೆ ವರ್ಷದಿಂದ ವರ್ಷಕ್ಕೆ ಹೊಸ ಸವಾಲುಗಳು ಎದುರಾಗುತ್ತಲೇ ಇವೆ. ಅದೇ ರೀತಿ ಭವಿಷ್ಯದಲ್ಲಿ ತಂತ್ರಜ್ಞಾನ ಮತ್ತಷ್ಟು ಪ್ರಗತಿಗೊಳ್ಳುವತ್ತ ದಾಪುಗಾಲು ಇರಿಸಲಿದ್ದು, ಲೆಕ್ಕ ಪರಿಶೋಧನೆಗೆ ತಂತ್ರಜ್ಞಾನದ ಪ್ರಭಾವ ಉಂಟಾಗಬಹುದು. ಇಂತಹ ಸನ್ನಿವೇಶದಲ್ಲಿ ಸಿಎಗಳು ವೃತ್ತಿಯನ್ನು ಉಳಿಸಿಕೊಳ್ಳುವಂತ ಸವಾಲು ಸ್ವೀಕರಿಸುವುದು ಅನಿವಾರ್ಯ ಆಗಲಿದೆ. ಹೀಗಾಗಿ ತಂತ್ರಜ್ಞಾನದೊಂದಿಗೆ ಮುನ್ನಡೆಯುವ ಕೌಶಲ್ಯಕ್ಕೂ ಸಿಎಗಳು ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಉದ್ಘಾಟನೆ ನೆರವೇರಿಸಿದ ನೆಕ್ಟರ್ ಫ್ರೆಶ್ ಕಂಪನಿಯ ಯಶಸ್ವಿ ಮಹಿಳಾ ಉದ್ಯಮಿ, ಕೊಡಗು ಮೂಲದ ಛಾಯಾ ನಂಜಪ್ಪ ರಾಜಪ್ಪ ಮಾತನಾಡಿ, ದಶಕದ ಹಿಂದೆ ಜೇನುತುಪ್ಪ ಮಾರಾಟದ ಸ್ವಂತ ಉದ್ದಿಮೆ ಪ್ರಾರಂಭ ಮಾಡಿದೆ. ನೆಕ್ಟರ್ ಫ್ರೆಶ್ ಬ್ಯ್ರಾಂಡ್‍ನಡಿ ನಮ್ಮ ಸಂಸ್ಥೆಯ ಜೇನುತುಪ್ಪ ಹಂತ ಹಂತವಾಗಿ ಜನಪ್ರಿಯವಾಯಿತು. ಬಳಿಕ ಪಂಚತಾರ ಹೋಟೆಲ್‍ಗಳಿಗೂ ಪೂರೈಸಲು ಬೇಡಿಕೆ ಬಂದಿತು ಎಂದು ಸಂತಸ ವ್ಯಕ್ತಪಡಿಸಿದರು.

ಪ್ರತಿಷ್ಠಿತ ಹೋಟೆಲ್‍ಗಳಿಗೆ ಜೇನುತುಪ್ಪ ಉತ್ಪನ್ನಗಳನ್ನು ಯಶಸ್ವಿಯಾಗಿ ಪೂರೈಕೆ ಮಾಡಲಾಯಿತು. ಈ ನಡುವೆ ಬಹುರಾಷ್ಟ್ರೀಯ ಆಹಾರೋತ್ಪನ್ನ ಕಂಪನಿಗಳ ಜೇನುತುಪ್ಪಕ್ಕೆ ಪಂಚತಾರಾ ಹೋಟೆಲ್‍ಗಳಲ್ಲಿ ಬೇಡಿಕೆ ಕುಗ್ಗಿತ್ತಲ್ಲದೆ, ನಮ್ಮ ಜೇನುತುಪ್ಪಕ್ಕೆ ಬೇಡಿಕೆ ಹೆಚ್ಚಾಯಿತು. ಇದರಿಂದ ಅಸಮಾಧಾನಗೊಂಡ ಬಹುರಾಷ್ಟ್ರೀಯ ಕಂಪನಿಗಳು ನೆಕ್ಟರ್ ಫ್ರೆಶ್ ಕೇವಲ ಜೇನುತುಪ್ಪ ಮಾತ್ರ ನೀಡುತ್ತದೆ. ಆದರೆ ನಾವು ಜಾಮ್ ಸೇರಿದಂತೆ ಹಲವು ಬಗೆಯ ಆಹಾರೋತ್ಪನ್ನಗಳನ್ನು ಪೂರೈಕೆ ಮಾಡುತ್ತಿದ್ದೇವೆ. ಇವುಗಳನ್ನು ನಿಲ್ಲಿಸುತ್ತೇವೆಂದು ಬೆದರಿಕೆ ಹಾಕಿದವು. ಇದರಿಂದ ಇನ್ನಿತರ ಆಹಾರ ಪದಾರ್ಥಗಳನ್ನು ನಮ್ಮ ಕಂಪನಿ ಕೈಗೆತ್ತುಕೊಂಡು ಯಶಸ್ವಿಯಾಗಿ ಪೂರೈಕೆ ಮಾಡುತ್ತಿದೆ ಎಂದರು.

ಬುಡಕಟ್ಟು ಸಮುದಾಯಗಳಿಂದ ಅತಿದೊಡ್ಡ ಪ್ರಮಾಣದಲ್ಲಿ ಜೇನು ಖರೀದಿಸುವ ಸಂಸ್ಥೆ ನಮ್ಮದಾಗಿದ್ದು, ಆ ಮೂಲಕ ಅವರ ಜೀವನಾಧಾರಕ್ಕೂ ಸಂಸ್ಥೆ ನೆರವಾಗಿದೆ ಎಂಬ ತೃಪ್ತಿಯ ಭಾವವಿದೆ ಎಂದು ನುಡಿದರು. ಐಸಿಎಐ ದಕ್ಷಿಣ ಭಾರತದ ಪ್ರಾದೇಶಿಕ ಕೌನ್ಸಿಲ್‍ನ ಮೈಸೂರು ಶಾಖೆ ಅಧ್ಯಕ್ಷ ಬಿ.ಎನ್.ಚಂದ್ರಶೇಖರ್, ನಿಕಟಪೂರ್ವ ಅಧ್ಯಕ್ಷ ಎಸ್.ಕೆ.ಸಂಜಯ್, ಉಪಾಧ್ಯಕ್ಷ ಎ.ವಿಶ್ವನಾಥ್, ಕಾರ್ಯದರ್ಶಿ ಎಸ್.ಎ.ವಾಸುದೇವರಾವ್, ಖಜಾಂಚಿ ಎ.ಯು.ಪ್ರಕಾಶ್ ಮತ್ತಿತರರು ಹಾಜರಿದ್ದರು.

Translate »