ಕೆ.ಆರ್.ಆಸ್ಪತ್ರೆ ಆವರಣದಲ್ಲಿ ವೈದ್ಯರ ದಿನಾಚರಣೆ ವಿಶಿಷ್ಟ ಕಾರ್ಯಕ್ರಮ
ಮೈಸೂರು

ಕೆ.ಆರ್.ಆಸ್ಪತ್ರೆ ಆವರಣದಲ್ಲಿ ವೈದ್ಯರ ದಿನಾಚರಣೆ ವಿಶಿಷ್ಟ ಕಾರ್ಯಕ್ರಮ

July 2, 2018
  • ಪೊರಕೆ ಹಿಡಿದ ವೈದ್ಯರು, ವೈದ್ಯ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳಿಂದ ಸ್ವಚ್ಛತಾ ಆಂದೋಲನ

ಮೈಸೂರು: ಪ್ರತಿ ದಿನ ರೋಗಿಗಳ ಆರೋಗ್ಯ ನೋಡಿಕೊಳ್ಳುವ ಕೆ.ಆರ್.ಆಸ್ಪತ್ರೆ ವೈದ್ಯರು ಇಂದು ಪೊರಕೆ ಹಿಡಿದು ಆಸ್ಪತ್ರೆಯ ಅವರಣವನ್ನು ಸ್ವಚ್ಛಗೊಳಿಸುವ ಮೂಲಕ ಆಸ್ಪತ್ರೆ ಪರಿಸರದ ಆರೋಗ್ಯವನ್ನು ನೋಡಿಕೊಂಡರು.

ವೈದ್ಯರ ದಿನಾಚರಣೆ ಪ್ರಯುಕ್ತ ಮೈಸೂರಿನ ಕೆ.ಆರ್.ಆಸ್ಪತ್ರೆಯ ಇಡೀ ಆವರಣದಲ್ಲಿ ಭಾನುವಾರ ವಿಶೇಷ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಿತು. ವೈದ್ಯರು, ವೈದ್ಯ ವಿದ್ಯಾರ್ಥಿಗಳು, ಲಯನ್ಸ್ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಸೇರಿದಂತೆ ನೂರಾರು ಮಂದಿ ಪೊರಕೆ ಹಿಡಿದು ಕೆ.ಆರ್.ಆಸ್ಪತ್ರೆ ಆವರಣವನ್ನು ಸ್ವಚ್ಛಗೊಳಿಸಿದರು.

ಆಸ್ಪತ್ರೆಯ ಒಳಗೆ ಹಾಗೂ ಹೊರ ಆವರಣದಲ್ಲಿ ಬೆಳೆದಿದ್ದ ಪಾರ್ಥೇನಿಯಂ ಮತ್ತಿತರ ಗಿಡ ಗಂಟಿಗಳು, ತ್ಯಾಜ್ಯ ವಸ್ತುಗಳು, ಹಳೆಯ ಚಪ್ಪಲಿ, ಎಳನೀರು ಬುರುಡೆ ಸೇರಿದಂತೆ 4 ಲೋಡ್‍ಗಳಷ್ಟು ಕಸ ಸಂಗ್ರಹವಾಯಿತು. ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಕಣ್ಣಿನ ಆಸ್ಪತ್ರೆ ಸೇರಿದಂತೆ ಇಡೀ ಆವರಣ ಇಂದು ಯಾವುದೇ ಕಸವಿಲ್ಲದೆ ಕಂಗೊಳಿಸುವಂತೆ ಮಾಡಿದರು. ಅವರೊಂದಿಗೆ ಕೆಲವು ಸಾರ್ವಜನಿಕರೂ ಸಾಥ್ ನೀಡಿದರು. ಈ ಮೂಲಕ ಆಸ್ಪತ್ರೆಗೆ ಬರುವ ಸಾರ್ವಜನಿಕರು ಆಸ್ಪತ್ರೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಅರಿವು ಮೂಡಿಸಲಾಯಿತು.

ಇದಕ್ಕೂ ಮೊದಲು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಸಿ.ಪಿ.ನಂಜರಾಜ್ ಅವರು ಡಾ.ಬಿ.ಸಿ.ರಾಯ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿದರು. ಕೆ.ಆರ್.ಆಸ್ಪತ್ರೆ ಅಧೀಕ್ಷಕ ಡಾ.ಎಂ.ಶ್ರೀನಿವಾಸ್, ಎಂಎಂಸಿ ಮತ್ತು ಆರ್‍ಐ ಪ್ರಾಂಶುಪಾಲರಾದ ಡಾ.ದಾಕ್ಷಾಯಿಣಿ , ಎಂಎಂಸಿ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಹೆಚ್.ಜಿ.ಮಂಜುನಾಥ್, ಎಂಎಂಸಿ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ಬಿ.ಎಸ್.ಮಂಜುನಾಥ್, ಆರ್‍ಎಂಓ ರಾಜೇಶ್, ಮೈಸೂರು ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು, ಲಯನ್ಸ್ ಸಂಸ್ಥೆಯ 2ನೇ ಉಪ ಜಿಲ್ಲಾ ಗೌರ್ನರ್ ನಾಗರಾಜ ವಿ.ಭೈರಿ, ಲಯನ್ಸ್ ಕ್ಲಬ್ ವಲಯ 2ರ ವಲಯ ಚೇರ್ಮನ್ ಟಿ.ಎಸ್.ರವೀಂದ್ರನಾಥ್ ಇನ್ನಿತರರು ಭಾಗವಹಿಸಿದ್ದರು.

Translate »