ಟೂಲ್ಸ್ ಹಿಡಿದ ಕೈಯಲ್ಲರಳುತ್ತಿದೆ ಸಾಹಿತ್ಯ!
ಮೈಸೂರು

ಟೂಲ್ಸ್ ಹಿಡಿದ ಕೈಯಲ್ಲರಳುತ್ತಿದೆ ಸಾಹಿತ್ಯ!

July 2, 2018

ಮೈಸೂರು:  ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಪ್ರತಿಭೆ ಸುಪ್ತವಾಗಿರುತ್ತದೆ. ಜೊತೆಯಲ್ಲಿದ್ದವರ ಪ್ರೋತ್ಸಾಹ, ಸೂಕ್ತ ವೇದಿಕೆ ದೊರಕಿದರೆ ಪ್ರತಿಭೆ ಅನಾವರಣಗೊಂಡು, ಜೀವನಕ್ಕೊಂದು ವಿಶೇಷತೆ ಪ್ರಾಪ್ತವಾಗುತ್ತದೆ ಎಂಬುದಕ್ಕೆ ಕೆಎಸ್‍ಆರ್‍ಟಿಸಿ ಮೈಸೂರು ವಿಭಾಗೀಯ ಗ್ರಾಮಾಂತರ ವಿಭಾಗದ ಕಾರ್ಯಾಗಾರದ ಮೆಕ್ಯಾನಿಕ್ ಜೆ.ನರಸಿಂಗರಾವ್, ಸಾಕ್ಷಿಯಾಗಿದ್ದಾರೆ.

ಮೈಸೂರಿನ ಶ್ರೀರಾಂಪುರ ನಿವಾಸಿಯಾಗಿರುವ ನರಸಿಂಗರಾವ್ ಅವರು, 26 ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದುರಸ್ತಿಗೆ ಬಂದ ಬಸ್‍ಗಳನ್ನು ರಿಪೇರಿ ಮಾಡುವುದರೊಂದಿಗೆ ಸಾಹಿತ್ಯವನ್ನು ಆರಾಧಿಸುತ್ತಿದ್ದಾರೆ. ಓದುವ ಹವ್ಯಾಸವಿರುವ ಇವರು, ಕೆಲ ವರ್ಷಗಳಿಂದ ತೋಚಿದ್ದನ್ನು ಗೀಚುತ್ತಾ, ಇದೀಗ ನೂರಾರು ಸುಂದರ ಕವಿತೆಗಳನ್ನು ರಚಿಸಿ, ವಾಚಿಸಿ, ಮೆಚ್ಚುಗೆ ಗಳಿಸಿದ್ದಾರೆ.

ಮೆಕ್ಯಾನಿಕ್ ಅಂದ ಮೇಲೆ ಅವರ ಕೆಲಸ ಸುಲಭದ್ದಲ್ಲ. ಬಸ್‍ಗಳು ರಿಪೇರಿಗೆ ಬಂದರೆ ದುರಸ್ತಿ ಮಾಡಲು ಹಲವು ತಾಸುಗಳು ಪರಿಶ್ರಮಿಸಬೇಕು. ತುರ್ತು ಸಂದರ್ಭದಲ್ಲಿ ಕರ್ತವ್ಯದ ಅವಧಿ ಮುಗಿದರೂ ಕೆಲಸ ಮಾಡಲೇಬೇಕು. ಆದರೆ ದೈಹಿಕ ಪರಿಶ್ರಮದ ಆಯಾಸ ನರಸಿಂಗರಾವ್ ಅವರ ಕವಿ ಹೃದಯಕ್ಕೆ ಘಾಸಿ ಮಾಡಿಲ್ಲ. ಬಿಡುವಿಲ್ಲದ ಕೆಲಸದ ನಡುವೆಯೂ ನೂರಾರು ಕವಿತೆಗಳು ಸೃಷ್ಟಿಯಾಗಿವೆ. ಸ್ಪಾನರ್, ಹ್ಯಾಮರ್ ಹಿಡಿದು ವಾಹನ ರಿಪೇರಿ ಮಾಡುವ ಕೈಗಳು, ಪೆನ್ನನ್ನೂ ಹಿಡಿದು ಅರ್ಥಪೂರ್ಣ ಸಾಲುಗಳನ್ನು ಕಟ್ಟಬಲ್ಲವು ಎಂಬುದನ್ನು ನರಸಿಂಗರಾವ್ ತಿಳಿಸಿಕೊಟ್ಟಿದ್ದಾರೆ.

ಪಸರಿಸುತ್ತಿದೆ ಪ್ರತಿಭೆ: ವಲಯ, ತಾಲೂಕು, ಜಿಲ್ಲಾ ಮಟ್ಟದಲ್ಲಿ ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ್ದ ಕವಿಗೋಷ್ಠಿಗಳಲ್ಲಿ ಕವನಗಳನ್ನು ವಾಚಿಸಿ, ಪ್ರಶಸ್ತಿ-ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಇವರ ಕಾವ್ಯ ಪ್ರೇಮಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಇದೀಗ ಮಾಣಿಕ್ಯ ಪ್ರಕಾಶನ ಹಾಗೂ ಸೃಜನಶೀಲ ಸಾಹಿತ್ಯ ಹಾಗೂ ಸಾಂಸ್ಕøತಿಕ ಅಕಾಡೆಮಿ ಸಹಯೋಗದಲ್ಲಿ ಹಾಸನದ ಕನ್ನಡ ಸಾಹಿತ್ಯ ಭವನದಲ್ಲಿ ಇಂದು ನಡೆದ `ರಾಜ್ಯಮಟ್ಟದ ಕವಿ-ಕಾವ್ಯ ಸಂಭ್ರಮ’ ಕಾರ್ಯಕ್ರಮದಲ್ಲಿ ಕಾವ್ಯವಾಚನ ಮಾಡುವ ಅವಕಾಶ ಒದಗಿಬಂದಿದೆ. ಇದರೊಂದಿಗೆ ಮೆಕ್ಯಾನಿಕ್ ಮನಸ್ಸಿನಲ್ಲಿ ಅಡಗಿರುವ ಭಾವನೆಗಳಿಗೆ ಗೌರವ ಸಂದುತ್ತಿದೆ. ನರಸಿಂಗರಾವ್ ಅವರ ಪ್ರತಿಭೆ ಹಂತಹಂತವಾಗಿ ಪಸರಿಸಿ, ಸಾಹಿತ್ಯಾಭಿಮಾನಿಗಳ ಮನತಟ್ಟುತ್ತಿದೆ.

ಸಾಹಿತ್ಯ ಪ್ರಪಂಚದಲ್ಲಿ ಪುಟ್ಟ ಹೆಜ್ಜೆಯನ್ನಿಟ್ಟಿರುವ ಮೆಕ್ಯಾನಿಕ್ ನರಸಿಂಗರಾವ್, ಸಂಸ್ಥೆಯ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸುತ್ತಾರೆ. ನಮ್ಮ ಸಹೋದ್ಯೋಗಿ ಸುಬೇಂದ್ರಕುಮಾರ್ ಉತ್ತಮ ಕವಿಯಾಗಿದ್ದು, ಅವರ ಪುಸ್ತಕಗಳೂ ಬಿಡುಗಡೆಯಾಗಿವೆ. ಇವರ ಸಾಧನೆ, ನನ್ನಲ್ಲಿನ ಕವಿ ಹೃದಯವನ್ನು ಎಚ್ಚರಿಸಿತು. ತೋಚಿದ್ದನ್ನು ಗೀಚಲು ಆರಂಭಿಸಿದೆ. ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಿದ್ದೆ. ನಂತರ ಅನೇಕ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕಾವ್ಯವಾಚನ ಮಾಡಿದೆ. ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರಿಂದ ನನ್ನ ಬರವಣಿಗೆ ಹೆಚ್ಚಾಯಿತು. ಈಗ ಹಾಸನದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕಾವ್ಯಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ. ನೂರಾರು ಕವಿತೆಗಳನ್ನು ಬರೆದಿದ್ದು, ಆಯ್ದ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ಸಾಹಿತ್ಯ ಪ್ರೇಮಿಗಳನ್ನು ಮುಟ್ಟುವ ಅಭಿಲಾಷೆಯಿದೆ. ಆದರೆ ಆರ್ಥಿಕ ಸಮಸ್ಯೆಯಿಂದ ಸದ್ಯಕ್ಕೆ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಸಾಕಾರವಾಗುವ ವಿಶ್ವಾಸ ನನ್ನಲ್ಲಿದೆ ಎಂದಿದ್ದಾರೆ ನರಸಿಂಗರಾವ್.

ರೈತನು ದೇಶಕ್ಕೆ ಬೆನ್ನೆಲುಬು
ಕಾರ್ಮಿಕರು ಜೀವನಾಡಿ
ಗೇಣುದ್ದ ಹೊಟ್ಟೆಗೆ
ಮಾರುದ್ದ ಬಟ್ಟೆಗೆ
ಅನಿವಾರ್ಯದ ಬದುಕಿಗೆ
ಶ್ರಮದ ದುಡಿಮೆಯೇ ದಾರಿ
ಒಂದೊಂದು ಬೆವರ ಹನಿಯ ಹಿಂದಿದೆ
ಬದುಕಿಗೆ ಎದುರಾದ ಸವಾಲಿನ ಕಹಾನಿ
ಅವನ ಬದುಕಿಗೆ ಅವನೇ ದಣಿ , ಗಣಿ
-ನರಸಿಂಗರಾವ್

Translate »