ವೈನ್ ಸ್ಟೋರ್ ತೆರವಿಗೆ ಮುಡಾ ಆಯುಕ್ತರಿಂದ ಡಿಸಿ, ಪಾಲಿಕೆ ಆಯುಕ್ತರಿಗೆ ಪತ್ರ
ಮೈಸೂರು

ವೈನ್ ಸ್ಟೋರ್ ತೆರವಿಗೆ ಮುಡಾ ಆಯುಕ್ತರಿಂದ ಡಿಸಿ, ಪಾಲಿಕೆ ಆಯುಕ್ತರಿಗೆ ಪತ್ರ

July 2, 2018

ಮೈಸೂರು: ಮೈಸೂರಿನ ಸಿದ್ಧಾರ್ಥನಗರದ ಬುದ್ಧ ಮಾರ್ಗದಲ್ಲಿರುವ ವೈನ್ ಸ್ಟೋರ್ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತರು ಪತ್ರದ ಮುಖೇನ ಮನವಿ ಮಾಡಿದ್ದಾರೆ.

ಸದರಿ ವೈನ್ ಸ್ಟೋರ್‍ನಿಂದ ಇಲ್ಲಿನ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿರುವ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಸದರಿ ವೈನ್ ಸ್ಟೋರ್ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ವೈನ್ ಸ್ಟೋರ್ ಸಮೀಪದಲ್ಲೇ ಗೀತಾ ಶಾಲೆ ಇದ್ದು, ಇಲ್ಲಿನ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ವೈನ್ ಸ್ಟೋರ್‍ನಿಂದ ಕಿರಿಕಿರಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ ಎಂದು ಪ್ರತ್ಯೇಕ ಪತ್ರಗಳಲ್ಲಿ ಡಿಸಿ ಹಾಗೂ ಪಾಲಿಕೆ ಆಯುಕ್ತರಿಗೆ ತಿಳಿಸಿದ್ದಾರೆ.

ಸದರಿ ವೈನ್ ಸ್ಟೋರ್ ತೆರವುಗೊಳಿಸುವಂತೆ ಸಾರ್ವಜನಿಕರು ಕೋರಿದ್ದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಈ ಹಿಂದೆಯೇ ಮುಡಾ ಪತ್ರದ ಮುಖೇನ ಪಾಲಿಕೆ ವಲಯ-9ರ ಸಹಾಯಕ ಆಯುಕ್ತರಿಗೆ ಕೋರಿದ್ದರೂ ಪ್ರಯೋಜನವಿಲ್ಲ ಎಂದು ಪಾಲಿಕೆ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಮುಡಾ ಆಯುಕ್ತರು ಆರೋಪಿದ್ದಾರೆ. ಸ್ಥಳೀಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತೆರವಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದು, ಈ ಹಿನ್ನೆಲೆಯಲ್ಲಿ ವೈನ್ ಸ್ಟೋರ್ ರಹದಾರಿ ತಡೆಹಿಡಿಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳನ್ನು ಮುಡಾ ಆಯುಕ್ತರು ಪತ್ರದಲ್ಲಿ ಕೋರಿದ್ದಾರೆ.

Translate »