ಮೈಸೂರು ಅರಮನೆಯಲ್ಲಿ ಕೇರಳ ಸ್ವಾಮೀಜಿ ದರ್ಬಾರ್ ವೈರಲ್ ಆಗಿರುವ ಫೋಟೋ
ಮೈಸೂರು

ಮೈಸೂರು ಅರಮನೆಯಲ್ಲಿ ಕೇರಳ ಸ್ವಾಮೀಜಿ ದರ್ಬಾರ್ ವೈರಲ್ ಆಗಿರುವ ಫೋಟೋ

July 2, 2018

ಮೈಸೂರು: ಮೈಸೂರು ಅರಮನೆಯಲ್ಲಿ ಕೇರಳಾದ ಸ್ವಾಮೀಜಿಯವರು ಭದ್ರತಾ ನಿಯಮವನ್ನು ಉಲ್ಲಂಘಿಸಿ ದರ್ಬಾರ್ ನಡೆಸುತ್ತಿರುವ ಪ್ರಕರಣದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಓರ್ವ ಪೇದೆಯನ್ನು ಅಮಾನತು ಮಾಡಿರುವ ಘಟನೆ ವರದಿಯಾಗಿದೆ.

ಅರಮನೆಯ ಭದ್ರತಾ ಸಿಬ್ಬಂದಿಯಾಗಿದ್ದ ಪೇದೆ ಚಿಕ್ಕಣ್ಣ ಎಂಬುವರೇ ಅಮಾನತಾದ ಪೇದೆಯಾಗಿದ್ದಾರೆ. ಅರಮನೆಯಲ್ಲಿ ಕೇರಳಾದ ಸ್ವಾಮೀಜಿ ಎನ್ನಲಾದ ಸುನೀಲ್ ದಾಸ್ ಎಂಬುವರು ರಾಜಮನೆತನಕ್ಕೆ ಹತ್ತಿರದವರಾಗಿದ್ದು, ನಿಕಟ ಸಂಪರ್ಕವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಆಗಿಂದಾಗ್ಗೆ ಬರುವ ಈ ಸ್ವಾಮೀಜಿ, ಅರಮನೆಯ ಭದ್ರತಾ ವಿಭಾಗದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಜ್ರಖಚಿತ ಸಿಂಹಾಸನವಿರುವ ಸ್ಟ್ರಾಂಗ್ ರೂಂ ಸೇರಿದಂತೆ ವಿವಿಧೆಡೆ ಓಡಾಡುವ ಮೂಲಕ ಭದ್ರತೆಯನ್ನು ಉಲ್ಲಂಘಿಸಿದ್ದಾರೆ.

ಕೇರಳಾದ ಪಾಲಕ್ಕಾಡ್‍ನಲ್ಲಿ ಸ್ನೇಹಂ ಚಾರಿಟಬಲ್ ನಡೆಸುತ್ತಿರುವ ಬಿಳಿ ವಸ್ತ್ರಧಾರಿ ಸ್ವಾಮೀಜಿ ಸುನೀಲ್ ದಾಸ್, ಅರಮನೆಯ ಭದ್ರತಾ ಪಡೆಯ ಎಸಿಪಿ ಶೈಲೇಂದ್ರ ಅವರ ಕೊಠಡಿಯಲ್ಲಿನ ಕುರ್ಚಿಯಲ್ಲಿ ಕುಳಿತು ಇತರರೊಂದಿಗೆ ಸಮಾಲೋಚಿಸುವುದು, ಅರಮನೆಯ ವಿವಿಧೆಡೆ ಫೋಟೋ ತೆಗೆಸಿಕೊಳ್ಳುವುದು ಹಾಗೂ ಮನಸ್ಸೋ ಇಚ್ಛೆ ಓಡಾಡುತ್ತಾ ಕಾಲ ಕಳೆಯುತ್ತಾರೆ. ಈ ವಿಷಯ ಎಸಿಪಿ ಶೈಲೇಂದ್ರ ಅವರಿಗೆ ತಿಳಿದಿದ್ದರೂ, ಭದ್ರತಾ ವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.

ಸ್ವಾಮೀಜಿ ಅರಮನೆಯಲ್ಲಿ ಓಡಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಚಿತ್ರಗಳನ್ನು ಬಹಿರಂಗ ಮಾಡಿರುವುದು ಪೇದೆ ಚಿಕ್ಕಣ್ಣ ಎಂದು ಭಾವಿಸಿ ಅವರನ್ನು ಅಮಾನತು ಮಾಡಲಾಗಿದೆ.

ದಯಾಮರಣಕ್ಕೆ ಅರ್ಜಿ: ಅಮಾನತುಗೊಂಡಿರುವ ಪೇದೆ ಚಿಕ್ಕಣ್ಣ, ಇದೀಗ ದಯಾಮರಣ ನೀಡುವಂತೆ ಆಯುಕ್ತರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ತಾನು ಯಾವುದೇ ತಪ್ಪು ಮಾಡದಿದ್ದರೂ ಅಮಾನತು ಮಾಡುವ ಮೂಲಕ ಕಿರುಕುಳ ನೀಡಲಾಗಿದೆ. ಇದರಿಂದ ತಮಗೆ ದಯಾಮರಣ ನೀಡಬೇಕು ಎಂದು ಕೋರಿರುವುದಾಗಿ ಮಾಹಿತಿ ಲಭ್ಯವಾಗಿದೆ.

Translate »