ಪ್ರಿಯಕರನಿಗಾಗಿ ಗಂಡನನ್ನೇ ತೊರೆದ ನವ ವಿವಾಹಿತೆ
ಮೈಸೂರು

ಪ್ರಿಯಕರನಿಗಾಗಿ ಗಂಡನನ್ನೇ ತೊರೆದ ನವ ವಿವಾಹಿತೆ

July 2, 2018
  •  ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋದ ಜೋಡಿ
  • ಆಭರಣ ಕದ್ದು ಬಂದಿದ್ದಾಳೆಂಬ ಪ್ರತಿದೂರು ನೀಡಿದ ಮಾವನ ಮನೆಯವರು

ಮೈಸೂರು: ಪ್ರಿಯಕರನಿಗಾಗಿ ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಹಿಳೆಯೊಬ್ಬಳು ಗಂಡನ ಮನೆಯಿಂದ ಹಿಂದಿರುಗಿ ಪ್ರಿಯಕರನೊಂದಿಗೆ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

ಮೈಸೂರಿನ ರೈಲ್ವೆ ಕ್ವಾರ್ಟರ್ಸ್ ನಿವಾಸಿಯಾಗಿರುವ ನವ ವಿವಾಹಿತೆ ಇದೀಗ ಪ್ರಿಯಕರನೊಂದಿಗೆ ಬಾಳ್ವೆ ನಡೆಸಲು ಬಯಸಿ ತನ್ನ ಪತಿ ಮನೆಯನ್ನು ತೊರೆದು ಬಂದು ಇದೀಗ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ರೈಲ್ವೆ ಬಡಾವಣೆಯ ನಿವಾಸಿಯಾಗಿದ್ದ ಯುವತಿ ಕಳೆದ 9 ವರ್ಷದಿಂದ ಅಶೋಕಪುರಂ ನಿವಾಸಿ ರಕ್ಷಿತ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದರು. ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದ ವಿಷಯ ಇಬ್ಬರ ಮನೆಯವರಿಗೂ ತಿಳಿದಿತ್ತು. ಆದರೆ ಯುವಕ ಬೇರೆ ಜಾತಿಗೆ ಸೇರಿದ್ದಾನೆ ಎಂಬ ಮಾತ್ರಕ್ಕೆ ಯುವತಿಯನ್ನು ರಕ್ಷಿತ್‍ನೊಂದಿಗೆ ವಿವಾಹ ಮಾಡಿಕೊಡಲು ಆಕೆಯ ಪೋಷಕರು ನಿರಾಕರಿಸಿದ್ದರು ಎನ್ನಲಾಗಿದೆ.

ಅಲ್ಲದೇ ಬೆಂಗಳೂರಿನ ಯುವಕನೊಬ್ಬನೊಂದಿಗೆ ವಿವಾಹ ನಿಶ್ಚಯ ಮಾಡಿ ಏ.24ರಂದು ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ಅದ್ಧೂರಿಯಾಗಿ ವಿವಾಹ ನೆರವೇರಿಸಿದ್ದರು. ಆದರೆ ಪ್ರಿಯಕರನ ಬಿಟ್ಟು ಇರಲಾಗದೇ ಪರಿತಪಿಸುತ್ತಿದ್ದ ಆ ನವ ವಿವಾಹಿತೆ ಕಳೆದ ಮೂರು ದಿನದ ಹಿಂದೆಯೇ ಪತಿಯ ಮನೆಯನ್ನು ತ್ಯಜಿಸಿ ಮೈಸೂರಿಗೆ ಆಗಮಿಸಿದ್ದಾಳೆ. ಅಲ್ಲದೇ ಪ್ರಿಯಕರ ರಕ್ಷಿತ್‍ನೊಂದಿಗೆ ಕಾಣಿಸಿಕೊಂಡು ಅಶೋಕಪುರಂ ಠಾಣೆಗೆ ತೆರಳಿ ಪ್ರೇಮಿಗಳಾಗಿರುವ ನಮ್ಮಿಬ್ಬರಿಗೂ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಈ ನಡುವೆ ಆ ಯುವತಿಯ ಮಾವನ ಮನೆಯವರು ಮೈಸೂರಿನ ಅಶೋಕಪುರಂ ಠಾಣೆಗೆ ಆಗಮಿಸಿ ಪ್ರತಿದೂರು ನೀಡಿ, ತಮ್ಮ ಸೊಸೆ ಮನೆಯಿಂದ ಮೂರು ಕೆ.ಜಿ. ಚಿನ್ನಾಭರಣ ಕಳವು ಮಾಡಿ ಬಂದಿದ್ದಾಳೆ. ಆಕೆಯನ್ನು ನಮ್ಮ ವಶಕ್ಕೆ ನೀಡುವಂತೆ ಕೋರಿದ್ದಾರೆ.

ಮಾವನ ಮನೆಯವರು ನೀಡಿರುವ ಪ್ರತಿದೂರಿಗೆ ಪ್ರತಿಕ್ರಿಯೆ ನೀಡಿರುವ ಆ ನವ ವಿವಾಹಿತೆ, ತಾನು ಮಾವನ ಮನೆಯಿಂದ ತಂದಿರುವ ಆಭರಣ ನನಗೆ ಸೇರಿದ್ದಾಗಿದೆ. ಅವುಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳೂ ನನ್ನ ಬಳಿ ಇವೆ. ನನ್ನ ಮದುವೆ ಸಂದರ್ಭದಲ್ಲಿ ಆ ಆಭರಣಗಳನ್ನು ನನಗೆ ನನ್ನ ತವರು ಮನೆಯವರು ಕೊಡಿಸಿದ್ದರು. ನಾನು ಯಾವುದೇ ಕಾರಣಕ್ಕೂ ಪ್ರಿಯಕರ ರಕ್ಷಿತ್‍ನನ್ನು ಬಿಟ್ಟು ತೆರಳುವುದಿಲ್ಲ. ಬಾಳುವುದಾದರೆ ಪ್ರಿಯಕರನೊಂದಿಗೆ ಬಾಳುತ್ತೇನೆ ಎಂದು ಬಿಗಿ ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಅಶೋಕಪುರಂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Translate »