ರಾಹುಲ್‍ಗೆ ತಾಯಿ ಬಲ ಮಂಡ್ಯ ಜಿಲ್ಲೆಯ ಯಾತ್ರೆಯಲ್ಲಿ ಕೆಲ ದೂರ ಸಾಗಿದ ಸೋನಿಯಾಗಾಂಧಿ
ಮಂಡ್ಯ

ರಾಹುಲ್‍ಗೆ ತಾಯಿ ಬಲ ಮಂಡ್ಯ ಜಿಲ್ಲೆಯ ಯಾತ್ರೆಯಲ್ಲಿ ಕೆಲ ದೂರ ಸಾಗಿದ ಸೋನಿಯಾಗಾಂಧಿ

October 7, 2022

ಪಾಂಡವಪುರ/ನಾಗಮಂಗಲ, ಅ.6-ಆಯುಧ ಪೂಜೆ ಮತ್ತು ವಿಜಯ ದಶಮಿ ಹಿನ್ನೆಲೆಯಲ್ಲಿ ಎರಡು ದಿನಗಳ ವಿರಾಮದ ನಂತರ ಗುರುವಾರ ಪಾಂಡವ ಪುರ ತಾಲೂಕಿನಲ್ಲಿ ಆರಂಭವಾದ ಭಾರತ ಐಕ್ಯತಾ ಯಾತ್ರೆಯಲ್ಲಿ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪುತ್ರ ರಾಹುಲ್ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ಪ್ರಮುಖ ಮುಖಂಡರು, ಅಪಾರ ಕಾರ್ಯಕರ್ತರೊಂದಿಗೆ ಸುಮಾರು 3 ಕಿಲೋಮೀಟರ್ ಹೆಜ್ಜೆ ಹಾಕುವ ಮೂಲಕ ಪುತ್ರನ ಮಹತ್ವದ ಯಾತ್ರೆಗೆ ಶಕ್ತಿ ತುಂಬಿದರು.

ಸೋನಿಯಾ ಗಾಂಧಿಯವರು ಯಾತ್ರೆಯಲ್ಲಿ ಪಾಲ್ಗೊಂಡ ಹಿನ್ನೆಲೆ ಇಂದು ಯಾತ್ರೆಯನ್ನು ಕೇವಲ 10 ಕಿ.ಮೀ.ಗೆ ಸೀಮಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ರಾಹುಲ್ ಗಾಂಧಿಯವರು ಬೆಳ್ಳಾಳೆ ಗೇಟ್‍ನಿಂದ ಐಕ್ಯತಾ ಯಾತ್ರೆ ಆರಂಭಿ ಸಿದರು. ಮೇಲುಕೋಟೆ ದೇವಸ್ಥಾನಕ್ಕೆ ಹೋಗಿದ್ದ ಸೋನಿಯಾ ಗಾಂಧಿ ಮಾಣಿಕ್ಯನ ಹಳ್ಳಿ ಗ್ರಾಮದಲ್ಲಿ ರಾಹುಲ್ ಜೊತೆಗೆ ಪಾದಯಾತ್ರೆಯಲ್ಲಿ ಭಾಗಿಯಾದರು. ಉತ್ಸಾಹದಿಂದಲೇ ಮಗನೊಂದಿಗೆ ಅವರು ಹೆಜ್ಜೆ ಹಾಕಿದರು. ಈ ವೇಳೆ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಭಾಗಿಯಾದರು. ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸೋನಿಯಾ ಅವರಿಗೆ ಪರಿಚಯಿಸಿದರು. ಮಗ ಹಾಗೂ ಮುಖಂಡರೊಂದಿಗೆ ಮಾತನಾಡುತ್ತಾ ಸೋನಿಯಾ ಗಾಂಧಿ ಬಿರುಸಿನ ಹೆಜ್ಜೆ ಹಾಕಿದರು. ಅವರು ಮಾಣಿಕ್ಯನಹಳ್ಳಿಯಿಂದ ಸುಮಾರು ಒಂದು ಕಿಲೋಮೀಟರ್ ಕ್ರಮಿಸಿದಾಗ ಅವರ ಆರೋಗ್ಯ ದೃಷ್ಟಿಯಿಂದ ರಾಹುಲ್ ಗಾಂಧಿ, ಅವರ ಪಾದಯಾತ್ರೆ ಮೊಟಕುಗೊಳಿಸಿ ಕಾರಿನಲ್ಲಿ ಬರುವಂತೆ ತಾಯಿಗೆ ಸೂಚಿಸಿದರು. ಮಗನ ಸೂಚನೆಯಂತೆ ಸೋನಿಯಾ ಕಾರಿನಲ್ಲೇ ಐಕ್ಯತಾ ಯಾತ್ರೆಯನ್ನು ಹಿಂಬಾಲಿಸಿದರು.

ಜಕ್ಕನಹಳ್ಳಿ ಬರುತ್ತಿದ್ದಂತೆ ಮತ್ತೆ ಕಾರಿನಿಂದ ಇಳಿದ ಸೋನಿಯಾಗಾಂಧಿ ಪುತ್ರನೊಂದಿಗೆ ಹೆಜ್ಜೆ ಹಾಕಿದರು. ಅಲ್ಲಿಂದ ಸುಮಾರು ಅರ್ಧ ಕಿಲೋ ಮೀಟರ್ ನಡೆದು ಜಕ್ಕನಹಳ್ಳಿ ಕ್ರಾಸ್‍ನಲ್ಲಿರುವ ಕಾಂಗ್ರೆಸ್ ಮುಖಂಡರೊಬ್ಬರ ಮನೆ ಬಳಿಗೆ ತೆರಳಿದ ಸೋನಿಯಾ, ರಾಹುಲ್, ಸಿದ್ದು, ಡಿಕೆಶಿ, ಸುರ್ಜೇವಾಲಾ, ವೇಣುಗೋಪಾಲ್ ಸೇರಿದಂತೆ ಪ್ರಮುಖ ನಾಯಕರು ಸುಮಾರು 15 ನಿಮಿಷ ವಿಶ್ರಾಂತಿ ಪಡೆದು ಚಹ ಸೇವಿಸಿ ಪಾದಯಾತ್ರೆ ಮುಂದುವರೆಸಿದರು. ಮತ್ತೆ ಕಾರು ಹತ್ತಿದ್ದ ಸೋನಿಯಾಗಾಂಧಿ ನಾಗಮಂಗಲ ತಾಲೂಕಿನ ಖರಡ್ಯ ಗ್ರಾಮ ಬರುತ್ತಿದ್ದಂತೆಯೇ ಮತ್ತೆ ಪಾದಯಾತ್ರೆಯಲ್ಲಿ ಭಾಗವಹಿಸಿದರು. ಖರಡ್ಯ ಗ್ರಾಮದಲ್ಲಿ ಮಧ್ಯಾಹ್ನದ ವಿಶ್ರಾಂತಿಗೆ ಪಾದಯಾತ್ರೆಯನ್ನು ಸ್ಥಗಿತಗೊಳಿಸಲಾಯಿತು. ಸೋನಿಯಾ ಗಾಂಧಿಯವರು ಈ ಗ್ರಾಮದಲ್ಲಿ ಊಟ ಮಾಡಿದ ನಂತರ ಪಾದಯಾತ್ರೆಯಿಂದ ನಿರ್ಗಮಿಸಿದರು. ಅವರು ಅಲ್ಲಿಂದ ಕಾರಿನಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ, ವಿಶೇಷ ವಿಮಾನದ ಮೂಲಕ ದೆಹಲಿಯತ್ತ ಪ್ರಯಾಣ ಬೆಳೆಸಿದರು.

ಸಂಜೆ 4.30ಕ್ಕೆ ಮತ್ತೆ ಶುರುವಾದ ಪಾದಯಾತ್ರೆ ಖರಡ್ಯ ಗ್ರಾಮದಿಂದ ನಾಗಮಂಗಲ ಮಾರ್ಗವಾಗಿ ಸಾಗಿ, ಬ್ರಹ್ಮದೇವರಹಳ್ಳಿ ಗ್ರಾಮ ತಲುಪಿತು. ದಾರಿ ಮಧ್ಯೆ ಸ್ಯಾಮನಹಳ್ಳಿ ಗ್ರಾಮದಲ್ಲಿ ಕುಮಾರ್ ಎಂಬ ಕಾರ್ಯಕರ್ತರ ಮನೆಗೆ ಭೇಟಿ ನೀಡಿದ ರಾಹುಲ್‍ಗಾಂಧಿ, ಕೆಲ ಹೊತ್ತು ವಿಶ್ರಾಂತಿ ಪಡೆದು ಚಹ ಸೇವಿಸಿ ಯಾತ್ರೆ ಮುಂದುವರೆಸಿದರು. ಬ್ರಹ್ಮದೇವರಹಳ್ಳಿ ಗ್ರಾಮವು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ತವರು ಗ್ರಾಮವಾಗಿದ್ದು, ಅಲ್ಲಿ ರಾಹುಲ್‍ಗಾಂಧಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ರಾಹುಲ್ ಗುರುವಾರ ರಾತ್ರಿ ಬ್ರಹ್ಮದೇವರಹಳ್ಳಿ ಗ್ರಾಮದಲ್ಲೇ ವಾಸ್ತವ್ಯ ಹೂಡಿದ್ದು, ಶುಕ್ರವಾರದ ಪಾದಯಾತ್ರೆ ಇದೇ ಗ್ರಾಮದಿಂದ ಆರಂಭವಾಗಿ, ನಾಗಮಂಗಲ ರಸ್ತೆ ಮೂಲಕ ಬೆಳ್ಳೂರು ಕ್ರಾಸ್, ಆದಿಚುಂಚನಗಿರಿ ತಲುಪಲಿದೆ. ಆದಿಚುಂಚನಗಿರಿಯಲ್ಲಿ ರಾಹುಲ್ ಶುಕ್ರವಾರ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

ಇಂದಿನ ಪಾದಯಾತ್ರೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್‍ಸಿಂಗ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಸಭಾ ಸದಸ್ಯ ಜೈರಾಮ್ ರಮೇಶ್, ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವರಾದ ತನ್ವೀರ್ ಸೇಠ್, ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಪ್ರಿಯಾಂಕ್ ಖರ್ಗೆ, ಯು.ಟಿ.ಖಾದರ್, ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧ್ರುವನಾರಾಯಣ್, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಜಿಲ್ಲಾ ಮುಖಂಡರಾದ ದಿನೇಶ್ ಗೂಳಿಗೌಡ, ರಮೇಶ್ ಬಂಡಿಸಿದ್ದೇಗೌಡ, ಬಿ.ಪ್ರಕಾಶ್, ಕೆ.ಬಿ.ಚಂದ್ರಶೇಖರ್, ಸಿ.ಡಿ.ಗಂಗಾಧರ್, ಡಾ.ಕೃಷ್ಣ, ರವೀಂದ್ರ ಸೇರಿದಂತೆ ಅನೇಕರಿದ್ದರು.

ದೃಶ್ಯ ಮಾಧ್ಯಮದವರ ಮೇಲೆ ಪೊಲೀಸರ ಹಲ್ಲೆ: ಪಾದಯಾತ್ರೆ ಸಾಗುವಾಗ ಸೋನಿಯಾಗಾಂಧಿ ಹಾಗೂ ರಾಹುಲ್‍ಗಾಂಧಿ ಜಕ್ಕನಹಳ್ಳಿ ಬಳಿ ಕಾರ್ಯಕರ್ತರೊಬ್ಬರ ಮನೆಗೆ ತೆರಳಿ ಹಿಂತಿರುಗುವಾಗ ನೂಕು-ನುಗ್ಗಲು ಉಂಟಾಯಿತು. ಈ ಸಂದರ್ಭದಲ್ಲಿ ಎಸ್‍ಪಿಜಿ ಭದ್ರತಾ ಪಡೆಗಳು, ಜನರನ್ನು ಚದುರಿಸಲು ಮುಂದಾದರು. ಆಗ ಅಲ್ಲೇ ಇದ್ದ ಪೊಲೀಸರು ದೃಶ್ಯ ಮಾಧ್ಯಮದ ಇಬ್ಬರು ವರದಿಗಾರರು ಹಾಗೂ ಮೂವರು ಕ್ಯಾಮರಾಮನ್‍ಗಳ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಈ ಘಟನೆ ಖಂಡಿಸಿ ದೃಶ್ಯ ಮಾಧ್ಯಮದವರು ಜಕ್ಕನಹಳ್ಳಿಯಿಂದ ಖರಡ್ಯವರೆಗೆ ಚಿತ್ರೀಕರಣವನ್ನು ಸ್ಥಗಿತಗೊಳಿಸಿದರು. ಈ ವೇಳೆ ರಣದೀಪ್ ಸಿಂಗ್ ಸುರ್ಜೇವಾಲಾ, ಜೈರಾಮ್ ರಮೇಶ್, ಪ್ರಿಯಾಂಕ ಖರ್ಗೆ ಅವರ ಮನವೊಲಿಸಿದರೂ ಅದು ಯಶಸ್ವಿಯಾಗಲಿಲ್ಲ. ಪೊಲೀಸರ ವಿರುದ್ಧ ಪತ್ರಕರ್ತರು ಧಿಕ್ಕಾರ ಕೂಗಿದರು. ಬಳಿಕ ಖರಡ್ಯ ಗ್ರಾಮದಲ್ಲಿ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಧ್ಯಮದವರ ಜೊತೆ ಚರ್ಚೆ ನಡೆಸಿ, ಕ್ಷಮೆಯಾಚಿಸಿದರು. ಆದರೆ ಪತ್ರಕರ್ತರು ಹಲ್ಲೆ ನಡೆಸಿದ ಪೊಲೀಸರಿಂದ ಕ್ಷಮೆ ಕೇಳಿಸುವಂತೆ ಒತ್ತಾಯಿಸಿದರು. ಬಳಿಕ ಎಸ್ಪಿ ಯತೀಶ್‍ರನ್ನು ಸ್ಥಳಕ್ಕೆ ಕರೆಸಿದ ಡಿಕೆಶಿ, ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಯನ್ನು ಕರೆಸುವಂತೆ ಎಸ್ಪಿ ಅವರಿಗೆ ಮನವಿ ಮಾಡಿದರು. ಆದರೆ ಆ ಅಧಿಕಾರಿ ಅಲ್ಲಿಂದ ತೆರಳಿದ್ದ ಕಾರಣ ಎಸ್ಪಿ ಯತೀಶ್, ಅವರ ಬದಲಾಗಿ ನಾನು ನಿಮ್ಮಲ್ಲಿ ವಿಷಾದ ವ್ಯಕ್ತಪಡಿಸುವೆ. ಆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ ಬಳಿಕ ಮಾಧ್ಯಮದವರು ಪ್ರತಿಭಟನೆ ಕೈಬಿಟ್ಟರು.

ತಪ್ಪಿತಸ್ಥರ ವಿರುದ್ಧ ಕ್ರಮ: ಮಂಡ್ಯದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಹಲ್ಲೆಗೆ ಸಂಬಂದಿಸಿದಂತೆ ವರದಿ ತರಿಸಿಕೊಂಡು ಯಾರ ತಪ್ಪಿದೆ ಎಂದು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Translate »