`ಮೈಸೂರು ಮಿತ್ರ’ ವರದಿಗೆ ಸಂಸದೆ ಸುಮಲತಾ ಅಂಬರೀಷ್ ಧನ್ಯವಾದ
ಮಂಡ್ಯ

`ಮೈಸೂರು ಮಿತ್ರ’ ವರದಿಗೆ ಸಂಸದೆ ಸುಮಲತಾ ಅಂಬರೀಷ್ ಧನ್ಯವಾದ

May 3, 2021

ಮಂಡ್ಯ, ಮೇ 2(ಮೋಹನ್‍ರಾಜ್)- ಕಳೆದ ಶನಿವಾರ (ಮೇ 1) `ಮೈಸೂರು ಮಿತ್ರ’ ಸಂಚಿಕೆಯ ಮಂಡ್ಯ ಮಿತ್ರ ಪುಟದಲ್ಲಿ ಪ್ರಕಟವಾಗಿದ್ದ ಗಂಡುಮೆಟ್ಟಿದ ನಾಡಲ್ಲಿ ಮಹಿಳೆಯರ ದರ್ಬಾರ್ ಶೀರ್ಷಿಕೆಯ ಸುದ್ದಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಧನ್ಯವಾದ ಅರ್ಪಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಸಂಸದೆ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಅಪರ ಜಿಲ್ಲಾಧಿಕಾರಿ, ಸಿಇಓ, ಎಸಿ, ತಹಸೀಲ್ದಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಜಿಲ್ಲೆಯ ಕೆಲ ತಾಲೂಕು ಪಂಚಾಯ್ತಿ, ನಗರಸಭೆ, ಪುರಸಭೆಗಳಲ್ಲಿ ಹಾಗೂ ವಿವಿಧ ಇಲಾಖೆಯ ಉಪನಿರ್ದೇಶಕರುಗಳು ಸೇರಿದಂತೆ ಬಹುತೇಕ ಮಹಿಳೆಯರೇ ಆಡಳಿತ ನಡೆಸುತ್ತಿರುವುದರಿಂದ ಮೈಸೂರು ಮಿತ್ರ ದಿನಪತ್ರಿಕೆಯಲ್ಲಿ ವಿಶೇಷ ಸುದ್ದಿ ಪ್ರಕಟವಾಗಿತ್ತು.

ಇದನ್ನು ಗಮನಿಸಿದ ಸಂಸದೆ ಸುಮಲತಾ ಅಂಬರೀಷ್ ತಮ್ಮ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಅಕೌಂಟಿನಲ್ಲಿ ಮೈಸೂರು ಮಿತ್ರ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ಕಟಿಂಗ್ಸ್ ಅನ್ನು ಟ್ಯಾಗ್ ಮಾಡಿ, ಧನ್ಯವಾದ ಅರ್ಪಿಸಿದ್ದಾರೆ. `ಸಮಾಜದಲ್ಲಿ ನಾವು ಬಯಸುವ ಸಮಾನತೆ ಮತ್ತು ಗೌರವ ಸ್ವಪ್ರಯತ್ನದಿಂದ ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿರುವ ಎಲ್ಲಾ ಮಹಿಳೆಯರಿಗೂ ಅಭಿನಂದನೆಗಳು. ಅವರಿಗೆ ಬೆಂಬಲವಾಗಿ ನಿಂತ ಅವರ ಕುಟುಂಬಗಳು ಅಭಿನಂದನಾರ್ಹ. ಧನ್ಯವಾದಗಳು ಮೈಸೂರು ಮಿತ್ರ’ ಎಂದು ಸುಮಲತಾ ಅಂಬರೀಷ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Translate »