ಭವಿಷ್ಯದಲ್ಲಿ ಬಂಡೀಪುರದ ಕಾವಲಿಗೆ ಬಂದ ಮುಧೋಳ್ ಹೌಂಡ್ ಜೋಡಿ
ಮೈಸೂರು

ಭವಿಷ್ಯದಲ್ಲಿ ಬಂಡೀಪುರದ ಕಾವಲಿಗೆ ಬಂದ ಮುಧೋಳ್ ಹೌಂಡ್ ಜೋಡಿ

October 30, 2020

ನಿವೃತ್ತಿಯಾಗಿರುವ ರಾಣಾ ಬದಲಿಗೆ ದೇಸಿ ತಳಿ ಶ್ವಾನಕ್ಕೆ ಮನ್ನಣೆ

ಅರಣ್ಯ ಅಪರಾಧ ತಡೆಗೆ ಪತ್ತೆದಾರಿ ಶ್ವಾನದಳ ಬಲಪಡಿಸಲು ಕ್ರಮ

ಮೈಸೂರು, ಅ.29- ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ ಗಾರರು ಹಾಗೂ ಕಾಡುಗಳ್ಳರಿಗೆ ದುಸ್ವಪ್ನ ವಾಗಿ ಕಾಡಿದ್ದ ಪತ್ತೆದಾರಿ ಶ್ವಾನ `ರಾಣಾ’ ನಿವೃತ್ತಿಯಾಗಿದ್ದರಿಂದ ಅರಣ್ಯ ಇಲಾಖೆ ಈಗ ದೇಸಿತಳಿ ಮುಧೋಳ ಶ್ವಾನದ ಮೊರೆ ಹೋಗಿದೆ. ಒಂದು ಜೋಡಿ ಮುಧೋಳ ಶ್ವಾನ ಮರಿಯನ್ನು ತಂದು ತರಬೇತಿಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ದಲ್ಲಿ 2015ರಿಂದ ಪತ್ತೆದಾರಿ ಶ್ವಾನವಾಗಿ ಕರ್ತವ್ಯ ಆರಂಭಿಸಿದ ಜರ್ಮನ್ ಶೆಫರ್ಡ್ ತಳಿಯ `ರಾಣಾ’ ಕಾಡಂಚಿನ ಗ್ರಾಮಗಳ ಮೂಲಕ ಅರಣ್ಯ ಅಪರಾಧಗಳಲ್ಲಿ ತೊಡಗು ತ್ತಿದ್ದವರಿಗೆ ಹಾಗೂ ಬೇಟೆಗಾರರ ನಿದ್ದೆ ಗೆಡಿಸಿತ್ತು. ತನ್ನ ಸೇವಾ ಅವಧಿಯಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳಲ್ಲಿ ತನ್ನ ಕೈಚಳಕ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದ ರಾಣಾ 6 ತಿಂಗಳ ಹಿಂದೆಯೇ ವಯೋ ನಿವೃತ್ತಿ ಹೊಂದಿತ್ತು. ಆದರೂ ಆರೋಗ್ಯಕರ ವಾಗಿರುವುದರಿಂದ ಅದರ ಸೇವೆಯನ್ನು ಗೌರವಯುತವಾಗಿ ಬಳಸಿಕೊಳ್ಳಲಾಗುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ಪತ್ತೆದಾರಿ ಶ್ವಾನ ಪಡೆಯ ಅಗತ್ಯವನ್ನು ಮನಗಂಡು ಇದೀಗ 2 ತಿಂಗಳ ಮುಧೋಳ್ ತಳಿಯ ಮರಿಗಳನ್ನು ತರಲಾಗಿದೆ.

ಆತ್ಮನಿರ್ಭರ್: ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿ ಸಲು ಹೊಸದಾಗಿ ಜಾರಿಗೆ ತಂದಿರುವ `ಆತ್ಮನಿರ್ಭರ್’ ಯೋಜನೆಗೆ ಅನುಗುಣ ವಾಗಿ ಅರಣ್ಯ ಇಲಾಖೆ ಪತ್ತೆದಾರಿ ಶ್ವಾನ ಗಳಿಗೆ ದೇಸಿ ತಳಿಗೆ ಮನ್ನಣೆ ನೀಡಲಾ ಗಿದೆ. ಬಾಗಲಕೋಟೆಯ ಮುಧೋಳದಲ್ಲಿ ರುವ ಮುಧೋಳ ಶ್ವಾನ ಅಭಿವೃದ್ಧಿ ಕೇಂದ್ರ ದಿಂದ 2 ತಿಂಗಳ ಒಂದು ಗಂಡು, ಒಂದು ಹೆಣ್ಣು ಮುಧೋಳ್ ನಾಯಿಮರಿಯನ್ನು ಖರೀದಿಸಿ ಬಂಡೀಪುರಕ್ಕೆ ತರಲಾಗಿದೆ.

ಚಾಕಚಕ್ಯತೆ: ಅಳಿವಿನಂಚಿಗೆ ಸರಿದಿದ್ದ ದೇಸಿ ತಳಿ ಮುಧೋಳ್ ಶ್ವಾನ ಸಂತತಿ ಅಭಿವೃದ್ಧಿಗೆ ಬೀದರ್‍ನಲ್ಲಿರುವ ಕರ್ನಾಟಕ ವೆಟರ್ನರಿ, ಅನಿಮಲ್ ಅಂಡ್ ಫಿಷರೀಸ್ ಸೈನ್ಸ್(ಸಿಆರ್‍ಐಸಿ) ವಿಶ್ವವಿದ್ಯಾನಿಲಯವು ಮುಧೋಳ್‍ನಲ್ಲಿ ಶ್ವಾನ ಅಭಿವೃದ್ಧಿ ಕೇಂದ್ರ ವನ್ನು 2009ರ ಸೆ.24ರಂದು ಸ್ಥಾಪಿಸಿತು. ಅಂದಿನಿಂದ ಮುಧೋಳ್ ತಳಿ ಅಭಿವೃ ದ್ಧಿಗೆ ಈ ಕೇಂದ್ರ ಶ್ರಮಿಸುತ್ತಿದ್ದು, ಮುಧೋಳ್ ಶ್ವಾನವನ್ನು ದೇಶದುದ್ದಕ್ಕೂ ಪಸರಿಸುವಂತೆ ಮಾಡುತ್ತಿದೆ. ಈಗಾಗಲೇ ಭಾರತೀಯ ಸೇನೆ, ಕೇಂದ್ರ ಸರ್ಕಾರದ ಗೃಹ ಇಲಾಖೆ, ಗಡಿ ಭದ್ರತಾ ಪಡೆ ಸೇರಿದಂತೆ ವಿವಿಧ ಸಂಸ್ಥೆ ಗಳಿಗೆ ಮುಧೋಳ್ ನಾಯಿಯನ್ನು ಸರಬ ರಾಜು ಮಾಡಿದೆ. ಇದೀಗ ಅರಣ್ಯ ಇಲಾಖೆಗೂ ಪತ್ತೆದಾರಿ ಶ್ವಾನ ಪಡೆಗೆ ಮುಧೋಳ್ ತಳಿಯ ನಾಯಿ ಮರಿಯನ್ನು ನೀಡುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.

25 ಸಾವಿರ ರೂ: ಮುಧೋಳ್ ಶ್ವಾನ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಡಾ.ಮಹೇಶ್ ಆಕಾಶಿ ತಿಮ್ಮಾಪುರ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿ ಗಳ ಕೋರಿಕೆ ಮೇರೆಗೆ ಎರಡು ಮರಿಗಳನ್ನು ನೀಡಿದ್ದೇವೆ. ಸರ್ಕಾರ ಗಂಡು ಮರಿಗೆ 14 ಸಾವಿರ ರೂ., ಹೆಣ್ಣು ಮರಿಗೆ 13 ಸಾವಿರ ರೂ., ದರ ನಿಗದಿ ಮಾಡಿದೆ. ಒಂದೇ ಬಾರಿ ಒಂದು ಜೋಡಿ ಖರೀದಿಸಿದರೆ 25 ಸಾವಿರ ರೂ. ನಿಗದಿ ಮಾಡಿದೆ. ಬಂಡೀಪುರಕ್ಕೆ 25 ಸಾವಿರ ರೂ.ಗೆ ಒಂದು ಜೋಡಿ ನಾಯಿ ಮರಿ ಮಾರಾಟ ಮಾಡಲಾಗಿದೆ ಎಂದರು.

ಯಶಸ್ಸಿನ ಹಾದಿಯಲ್ಲಿ ಸಾಗಲಿವೆ: ಎಲ್ಲಾ ಶ್ವಾನಗಳಿಗೂ ವಾಸನೆ ಗ್ರಹಿಸುವ ಶಕ್ತಿ ಇದೆ. ಮುಧೋಳ್ ನಾಯಿಗಳು ತನ್ನ ಸಾಮಥ್ರ್ಯದಿಂದ ಈಗಾಗಲೇ ದೇಶದು ದ್ದಗಲಕ್ಕೂ ಹೆಸರು ಗಳಿಸಿವೆ. ಭಾರತೀಯ ಸೇನೆಗೆ 10, ಕೇಂದ್ರ ಸರ್ಕಾರದ ಗೃಹ ಇಲಾಖೆ 4, ಗಡಿ ಭದ್ರತಾ ಪಡೆಗೆ 4 ಮುಧೋಳ್ ಶ್ವಾನದ ಮರಿಗಳನ್ನು ನೀಡ ಲಾಗಿದೆ. ಸೇನೆ ಕೊಂಡೊಯ್ದ ಮರಿಗಳಿಗೆ ಉತ್ತರ ಪ್ರದೇಶದಲ್ಲಿ ಮೀರತ್ ಎಂಬಲ್ಲಿ ರುವ ಶ್ವಾನ ತರಬೇತಿ ಕೇಂದ್ರದಲ್ಲಿ ತರ ಬೇತಿ ಕೊಡಿಸಿ ಶ್ರೀನಗರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅವುಗಳು ಈಗಾ ಗಲೇ ಯೋಧರಂತೆ ಕಾರ್ಯನಿರ್ವ ಹಿಸುತ್ತಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕೊಂಡೊಯ್ಯಲಾಗಿರುವ ಮುಧೋಳ್ ಮರಿಗಳು ಮುಂದಿನ ದಿನ ಗಳಲ್ಲಿ ಸಾಮಥ್ರ್ಯ ಪ್ರದರ್ಶಿಸಿ ಕಾರ್ಯ ನಿರ್ವಹಿಸುತ್ತವೆ. ಅರಣ್ಯ ಇಲಾಖೆಗೆ ಬೆನ್ನೆಲು ಬಾಗಿ ಕೆಲಸ ಮಾಡುತ್ತವೆ ಎಂದು ಡಾ. ಮಹೇಶ್ ಆಕಾಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಂ.ಟಿ.ಯೋಗೇಶ್ ಕುಮಾರ್

 

 

 

 

Translate »