ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದು
ಮೈಸೂರು

ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದು

October 30, 2020

`ದೈಹಿಕ ಶಿಕ್ಷಣ ಬೋಧÀನಾ ವಿಧಾನ’ ಕಾರ್ಯಾಗಾರದ ಸಮಾರೋಪದಲ್ಲಿ ಪ್ರೊ.ಕೆ.ಎಂ.ಮಹದೇವನ್ ಹಿತನುಡಿ
ಮೈಸೂರು, ಅ.29(ವೈಡಿಎಸ್)- ಆರೋಗ್ಯಯುತ, ಶಿಸ್ತುಬದ್ಧ ಬದುಕಿಗೆ ಕ್ರೀಡೆ ಸಹಕಾರಿ. ವಿದ್ಯಾರ್ಥಿಗಳನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸುವ, ವ್ಯಕ್ತಿತ್ವ ರೂಪಿಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಮೈಸೂರು ವಿಶ್ವವಿದ್ಯಾ ನಿಲಯ ಕುಲಸಚಿವ(ಪರೀಕ್ಷಾಂಗ) ಪ್ರೊ.ಕೆ.ಎಂ.ಮಹದೇವನ್ ಹೇಳಿದರು.

ಸ್ಪೋಟ್ರ್ಸ್ ಪೆವಿಲಿಯನ್‍ನಲ್ಲಿ ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗ ಮತ್ತು ಸಂಯೋಜಿತ ಕಾಲೇಜುಗಳ ದೈಹಿಕ ಶಿಕ್ಷಣ ಬೋಧಕರ ಸಂಘದ ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ 2 ದಿನಗಳ `ದೈಹಿಕ ಶಿಕ್ಷಣ ಬೋಧನಾ ವಿಧಾನ’ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದ ಅವರು, ದೈಹಿಕ ಶಿಕ್ಷಣ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ತಾಳ್ಮೆ, ಸಹನೆ, ಆತ್ಮ ವಿಶ್ವಾಸ ತುಂಬಬೇಕು ಎಂದು ಸಲಹೆ ನೀಡಿದರು.

ಸೋಲು-ಗೆಲುವಿಗಿಂತ ಪ್ರಯತ್ನ ಬಹಳ ಮುಖ್ಯ. ವಿದ್ಯಾರ್ಥಿಗಳ ಬದುಕು ಬದಲಾಯಿಸಲು ದೈಹಿಕ ಶಿಕ್ಷಣ ಶಿಕ್ಷಕರಿಂದ ಸಾಧ್ಯವಿದೆ. ಅನೇಕರು ಉನ್ನತ ಶಿಕ್ಷಣ ಪಡೆದು ಉದ್ಯೋಗ ಪಡೆದುಕೊಂಡಿ ದ್ದರೂ ಜೀವನ ಹೇಗೆ ಮಾಡಬೇಕು ಎಂಬುದೇ ಅವರಿಗೆ ಗೊತ್ತಿಲ್ಲ. ಹಾಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮೈವಿವಿ ದೈಹಿಕ ಶಿಕ್ಷಣ ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಚಂದ್ರಕುಮಾರ್ ಮಾತನಾಡಿ, ಎಲ್ಲರಿಗೂ ಉಪಾಧ್ಯಾಯ ವೃತ್ತಿ ಮಾಡಲು ಆಗುವುದಿಲ್ಲ. ನಮಗೆ ಸಿಕ್ಕಿರುವ ಅವಕಾಶದಲ್ಲಿ ಉಪಾಧ್ಯಾಯ ವೃತ್ತಿಯನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದರು.

ದೈಹಿಕ ಶಿಕ್ಷಣ ಶಿಕ್ಷಕರಿಗೆ ಹಿಂದೆ ಇದ್ದ ಕಷ್ಟ, ನೋವು ಇಂದು ಇಲ್ಲ. ಸರ್ಕಾರ ಮತ್ತು ವಿವಿಗಳು ಸವಲತ್ತು ಒದಗಿಸುತ್ತಿವೆ. ಸ್ವ ಇಚ್ಛೆಯಿಂದ ದೈಹಿಕ ಶಿಕ್ಷಣ ಬೋಧಿಸಲು ಬಂದಿರುವುದಕ್ಕೆ ಅಭಿನಂದನೆ. ಅದಕ್ಕೆ ಬೇಕಾದ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಉತ್ತಮ ನಾಗರಿಕರನ್ನಾಗಿಸಿ ಎಂದು ಹೇಳಿದರು.

ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪಿ.ಕೃಷ್ಣಯ್ಯ, ವಿವಿ ದೈಹಿಕ ಶಿಕ್ಷಣ ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಎಸ್.ಮುದಿಅಳಗನ್, ಬಿ.ಸೋಮಾನಿ ಕಾಲೇಜು ಪ್ರಾಂಶುಪಾಲ ಸದಾಶಿವ ಭಟ್ ಮತ್ತಿತರರು ಉಪಸ್ಥಿತರಿದ್ದರು.

Translate »