ಅಧಿಕಾರಕ್ಕೇರಿ ವರ್ಷ ಕಳೆದರೂ ನಗರಸಭೆ, ಪುರಸಭೆಗೆ ನಾಮನಿರ್ದೇಶನ ಮಾಡದ ಸರ್ಕಾರ
ಮಂಡ್ಯ

ಅಧಿಕಾರಕ್ಕೇರಿ ವರ್ಷ ಕಳೆದರೂ ನಗರಸಭೆ, ಪುರಸಭೆಗೆ ನಾಮನಿರ್ದೇಶನ ಮಾಡದ ಸರ್ಕಾರ

May 27, 2021

ಬಿಜೆಪಿ ಕಾರ್ಯಕರ್ತರ ಕನಸು ‘ಕನ್ನಡಿಯ ಗಂಟು’

ಮಂಡ್ಯ ಮೇ 26- ತಾವು ಪ್ರತಿನಿಧಿಸುವ ಪಕ್ಷಗಳು ರಾಜ್ಯದಲ್ಲಿ ಚುಕ್ಕಾಣಿ ಹಿಡಿದರೆ ಸ್ಥಳೀಯ ಸಂಸ್ಥೆ ಗಳಿಂದ ನಾಮನಿರ್ದೇಶನ ಸದಸ್ಯತ್ವ ಪಡೆದು ಅಧಿ ಕಾರ ಅನುಭವಿಸಬಹುದು ಎಂಬುದು ಕಾರ್ಯ ಕರ್ತರ ಆಸೆ. ಅದರಂತೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಒಂದು ನಗರಸಭೆ, ಆರು ಪುರಸಭೆ ಹಾಗೂ ಒಂದು ಪಟ್ಟಣ ಪಂಚಾಯಿತಿಯ ಪೈಕಿ ಆಡಳಿತಾರೂಢ ಬಿಜೆಪಿ ಸರ್ಕಾರ ಎರಡು ಸ್ಥಳೀಯ ಸಂಸ್ಥೆಗಳಿಗೆ ನಾಮನಿರ್ದೇಶಿತ ಸದಸ್ಯರನ್ನು ಘೋಷಿಸಿದ್ದರೆ, ಉಳಿದ ಆರು ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರ ಹೆಸರನ್ನು ಪ್ರಕಟಿಸಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರ ಪಡೆಯಬೇಕೆಂಬ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಕನಸು ನೆನೆಗುದಿಗೆ ಬಿದ್ದಿದೆ.

ಮಂಡ್ಯ ನಗರಸಭೆ, ಪಾಂಡವಪುರ, ನಾಗಮಂಗಲ, ಕೆ.ಆರ್.ಪೇಟೆ, ಮಳವಳ್ಳಿ, ಮದ್ದೂರು, ಶ್ರೀರಂಗಪಟ್ಟಣ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಗೊಂಡು ಸುಮಾರು ಒಂದು ವರ್ಷ ಕಳೆಯುತ್ತಾ ಬಂದರೂ ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪಪಂ ಹೊರತುಪಡಿಸಿದರೆ ಉಳಿದ ಯಾವ ಸ್ಥಳೀಯ ಸಂಸ್ಥೆಗಳಿಗೂ ನಾಮನಿರ್ದೇಶಿತ ಸದಸ್ಯರ ಹೆಸರುಗಳನ್ನು ಘೋಷಿಸಿಲ್ಲ.
ಮಂಡ್ಯದಲ್ಲಿ ಬಿಜೆಪಿಗೆ ಈ ಹಿಂದಿನಿಂದಲೂ ಅಸ್ತಿತ್ವ ಇಲ್ಲ. ಕಳೆದ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆದು ಇತಿಹಾಸ ಸೃಷ್ಟಿಸಿದ್ದು ಬಿಟ್ಟರೆ ಇತಿ ಹಾಸದ ಪುಟ ತಿರುಗಿ ನೋಡಿದಾಗ ವಿಧಾನಸಭೆ, ವಿಧಾನ ಪರಿಷತ್, ಜಿಲ್ಲಾ ಪಂಚಾಯ್ತಿಯಲ್ಲಿ ಬಿಜೆಪಿ ಖಾತೆಯನ್ನು ತೆರೆದಿಲ್ಲ. ಇದಕ್ಕೆ ಪ್ರಮುಖ ಕಾರಣ ಪಕ್ಷದಲ್ಲಿ ಸಂಘಟನಾ ತ್ಮಕ ಕೊರತೆ ಹಾಗೂ ಜಿಲ್ಲೆಯ ಪಕ್ಷದ ಚುಕ್ಕಾಣಿ ಹಿಡಿದ ವರು ಸಮರ್ಪಕ ಸಂಘಟನೆ ಮಾಡದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸತತವಾಗಿ ಹಿನ್ನಡೆಯಾಗುತ್ತಾ ಬಂದಿದೆ.

ಆದರೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದ ಬಳಿಕ ಹಾಗೂ ಅದಾದ ನಂತರ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ವಿಜಯಕುಮಾರ್ ಆಯ್ಕೆಯಾದ ಬಳಿಕ ಪಕ್ಷದ ಬೆಳವಣಿಗೆ ಜಿಲ್ಲೆಯಲ್ಲಿ ವೃದ್ಧಿಸಿ ಅನೇಕ ಸ್ಥಳೀಯ ಸಂಸ್ಥೆಯಲ್ಲಿ ಬಿಜೆಪಿ ಗೆಲುವು ದಾಖಲು ಮಾಡುವಂತೆ ಮಾಡಿತು. ಜೊತೆಗೆ ಸಚಿವ ನಾರಾಯಣಗೌಡ ಮತ್ತು ಜಿಲ್ಲಾಧ್ಯಕ್ಷ ವಿಜಯಕುಮಾರ್ ಜುಗಲ್‍ಬಂದಿ ಗೆಲುವೇ ಇಲ್ಲದೇ ಸೊರಗಿದ್ದ ಬಿಜೆಪಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು ಸಿಗುವಂತೆ ಮಾಡಿತು.

ಆದರೆ ಸ್ಥಳೀಯವಾಗಿ ಅಧಿಕಾರವೇ ಸಿಗದ ಅನೇಕ ಕಾರ್ಯಕರ್ತರು ಬಿಜೆಪಿ ಪಕ್ಷದಲ್ಲಿದ್ದು, ತಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರೆ ಸ್ಥಳೀಯ ಸಂಸ್ಥೆಗಳಲ್ಲಿ ನಾಮನಿರ್ದೇಶನ ಸದಸ್ಯತ್ವವನ್ನು ಪಡೆದು ಅಧಿಕಾರಕ್ಕೇರಬಹುದು ಎಂಬ ಕನಸು ಹೊತ್ತಿದ್ದಾರೆ.

ಅದರಂತೆ ಅನೇಕ ಬಿಜೆಪಿ ಕಾರ್ಯಕರ್ತರು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ನಾಮನಿರ್ದೇಶನ ಸದಸ್ಯತ್ವದ ಆಕಾಂಕ್ಷೆ ಹೊತ್ತು ಪಕ್ಷಕ್ಕೆ ಅರ್ಜಿ ಸಲ್ಲಿಸಿದ್ದು, ಪಕ್ಷದ ತಾಲೂಕು ಹಾಗೂ ಜಿಲ್ಲಾ ಘಟಕ ಸರ್ಕಾರಕ್ಕೆ ಆಕಾಂಕ್ಷಿಗಳ ಪಟ್ಟಿ ರವಾನಿಸಿದೆ. ಆದರೆ ಯಾರನ್ನು ಸರ್ಕಾರ ಇದುವರೆಗೆ ನೇಮಿಸಿಲ್ಲ.
ನಗರಸಭೆ, ಪುರಸಭೆಗಳಿಗೆ ತಲಾ ಐದು ಹಾಗೂ ಪಟ್ಟಣ ಪಂಚಾಯಿತಿಗಳಿಗೆ ತಲಾ 3 ನಾಮ ನಿರ್ದೇಶನ ಸದಸ್ಯರನ್ನು ಘೋಷಿಸಬಹುದಾಗಿದ್ದು, ನಾಗಮಂಗಲ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯಿತಿ ಹೊರತುಪಡಿಸಿದರೆ ಉಳಿದ ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರುಗಳ ಹೆಸರುಗಳು ಘೋಷಣೆಯಾಗಿಲ್ಲ.

ಪ್ರಮುಖವಾಗಿ ಮಂಡ್ಯ ನಗರಸಭೆಯಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಐದು ನಾಮನಿರ್ದೇಶನ ಸ್ಥಾನಕ್ಕೆ ಸುಮಾರು 20 ಮಂದಿ ಬಿಜೆಪಿ ಕಾರ್ಯಕರ್ತರು ಹೆಸರು ನೋಂದಾಯಿಸಿದ್ದು, ಸರ್ಕಾರಕ್ಕೆ ಪಟ್ಟಿ ರವಾನೆಯಾ ಗಿದೆ. ಆದರೆ ಇನ್ನು ಸಹ ಸದಸ್ಯರ ಆಯ್ಕೆ ಪಟ್ಟಿ ಅಧಿಕೃತ ಘೋಷಣೆಯಾಗಿಲ್ಲ. ಈ ನಿಟ್ಟಿನಲ್ಲಿ ಆಕಾಂಕ್ಷಿತ ಬಿಜೆಪಿ ಕಾರ್ಯಕರ್ತರು ತಮ್ಮ ಹೆಸರು ಘೋಷಣೆಯಾಗ ಬಹುದಾ ಅನ್ನೋ ಕುತೂಹಲದಿಂದ ದಿನ ಕಳೆಯುತ್ತಿದ್ದಾರೆ.

ಇನ್ನು ಶ್ರೀರಂಗಪಟ್ಟಣ, ಪಾಂಡವಪುರ, ಮದ್ದೂರು, ಮಳವಳ್ಳಿಯಲ್ಲಿ ಜೆಡಿಎಸ್ ಪಕ್ಷಗಳು ಆಡಳಿತದ ಚುಕ್ಕಾಣಿ ಹಿಡಿದಿದ್ದು, ಅಲ್ಲಿನ ನಾಮನಿರ್ದೇಶನ ಸದಸ್ಯರ ಪಟ್ಟಿಯನ್ನು ಬಿಜೆಪಿ ಪಕ್ಷ ಸರ್ಕಾರಕ್ಕೆ ಕಳುಹಿಸಿದ್ದರೂ, ನೇಮಕಗೊಂಡ ವರ ಹೆಸರನ್ನು ಸರ್ಕಾರ ಇನ್ನಷ್ಟೇ ಘೋಷಿಸಬೇಕಿದೆ.

ಇನ್ನು ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಪಕ್ಷ ಅತಿ ಹೆಚ್ಚು ಸದಸ್ಯರನ್ನು ಹೊಂದಿತ್ತಾದರೂ ಜೆಡಿಎಸ್‍ನಲ್ಲಿದ್ದ ಕೆ.ಸಿ.ನಾರಾಯಣಗೌಡ ಬಿಜೆಪಿಗೆ ಬಂದ ಪರಿಣಾಮ ಬಹುತೇಕ ಸದಸ್ಯರು ಸಚಿವರ ಬೆನ್ನ ಹಿಂದೆ ಬಂದರು. ಈ ನಿಟ್ಟಿನಲ್ಲಿ ಕೆ.ಸಿ.ನಾರಾಯಣಗೌಡ ಬಣ ಅಲ್ಲಿ ಅಧಿಕಾರ ಹಿಡಿದಿದ್ದು, ಇನ್ನಷ್ಟೇ ನಾಮ ನಿರ್ದೇಶನ ಸದಸ್ಯರ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಬೇಕಿದೆ.

ಒಟ್ಟಾರೆ ಪಕ್ಷದ ಮೊದಲ ಸಾಲಿನ ನಾಯಕರು ಅಧಿಕಾರ ಅನುಭವಿಸುವಂತೆ ಅವರ ಗೆಲುವಿನ ಹಿಂದೆ ಇರುವ ಕಾರ್ಯಕರ್ತರಿಗೂ ಅಧಿಕಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಾಮನಿರ್ದೇಶನ ಸದಸ್ಯತ್ವ ಕೊಡಿಸುವ ಮೂಲಕ ಕಾರ್ಯಕರ್ತರಿಗೂ ಅಧಿಕಾರ ಸಿಗುವಂತೆ ಮಾಡಬೇಕಿದೆ.

ಎಂ.ಕೆ.ಮೋಹನ್‍ರಾಜ್

 

 

Translate »