ಎಂಟು ವರ್ಷದ ಹಿಂದೆ ಟಿಬೆಟಿಯನ್ ಯುವಕನ ಕೊಲೆ ಯತ್ನ: ಕೊನೆಗೂ ಮೂವರು ಆರೋಪಿಗಳ ಸೆರೆ
ಮೈಸೂರು

ಎಂಟು ವರ್ಷದ ಹಿಂದೆ ಟಿಬೆಟಿಯನ್ ಯುವಕನ ಕೊಲೆ ಯತ್ನ: ಕೊನೆಗೂ ಮೂವರು ಆರೋಪಿಗಳ ಸೆರೆ

September 3, 2020

ಮೈಸೂರು, ಸೆ.2(ಆರ್‍ಕೆ)- ಡ್ರ್ಯಾಗರ್‍ನಿಂದ ಟಿಬೆಟಿಯನ್ ಯುವಕನ ಬೆನ್ನಿಗೆ ಇರಿದು, ಆತನ ಹತ್ಯೆಗೆ ಯತ್ನಿಸಿ, ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೂವರು ಆರೋಪಿ ಗಳನ್ನು ಮೈಸೂರಿನ ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಗಾಂಧಿನಗರ 2ನೇ ಕ್ರಾಸ್ ನಿವಾಸಿ ರಫೀಕ್ ಅಹಮದ್ ಮಗ ಸಲೀಮ ಪಾಷ(28), ಎನ್.ಆರ್. ಮೊಹಲ್ಲಾ, ಸೆಂಟ್ ಮೆರೀಸ್ ರಸ್ತೆ 12ನೇ ಕ್ರಾಸ್ ನಿವಾಸಿ ಲೇಟ್ ಮುಕ್ತಾರ್‍ಪಾಷನ ಮಗ ಸಲ್ಮಾನ್ ಪಾಷ(29) ಹಾಗೂ ಲಷ್ಕರ್ ಮೊಹಲ್ಲಾದ ಮೊಹಮದ್ ಸೇಠ್ ಬ್ಲಾಕ್, ಹೈದರ್ ಅಲಿ ಮುಖ್ಯ ರಸ್ತೆ ನಿವಾಸಿ ಅಬ್ದುಲ್ ರಹೀಂಖಾನ್ ಅಲಿಯಾಸ್ ಹಲೀಂ(32) ಬಂಧಿತ ಆರೋಪಿಗಳು.

ಪ್ರಕರಣ ಭೇದಿಸಿದ ದೇವರಾಜ ಠಾಣೆ ಪೊಲೀಸರು ಬಂಧಿತ ರಿಂದ ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್‍ಗೌಡ ತಿಳಿಸಿದ್ದಾರೆ.

ಮೈಸೂರಿನ ದೇವರಾಜ ಠಾಣೆ ಆವರಣದಲ್ಲಿ ಇಂದು ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2012ರ ಆಗಸ್ಟ್ 14ರ ಸಂಜೆ 6.30ರ ಸಮಯದಲ್ಲಿ ದೇವ ರಾಜ ಮೊಹಲ್ಲಾದ ದುರ್ಗಮ್ಮನ ಗುಡಿ ರಸ್ತೆ ಕ್ರಾಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಟಿಬೆಟಿಯನ್ ಯುವಕ ತನ್‍ಜಿನ್‍ದರ ಗ್ಯಾಲ್ ಎಂಬುವನನ್ನು ಹಿಂಬದಿಯಿಂದ ಬೈಕ್‍ನಲ್ಲಿ ಬಂದ ಇಬ್ಬರು ಡ್ರ್ಯಾಗರ್‍ನಿಂದ ಬೆನ್ನಿಗೆ ಇರಿದು ಕೊಲೆಗೆ ಯತ್ನಿಸಿ, ನಂತರ ಪರಾರಿಯಾಗಿದ್ದರು.

ತೀವ್ರವಾಗಿ ಗಾಯಗೊಂಡಿದ್ದ ಟಿಬೆಟಿಯನ್ ಯುವಕ ಒಂದು ವಾರಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖ ನಾದ ನಂತರ ಮೈಸೂರಿನಿಂದ ಹೊರ ಹೋಗಿ ನೆಲೆಸಿದ್ದಾನೆ. ಆದರೆ ಇದನ್ನು ಸೂಕ್ಷ್ಮ ಪ್ರಕರಣ ಎಂದು ಪರಿಗಣಿಸಿ ಸಿಸಿಬಿಗೆ ತನಿಖೆಯ ಜವಾಬ್ದಾರಿ ವಹಿಸಲಾಗಿತ್ತಾದರೂ, ಎಲ್ಲೆಡೆ ಶೋಧ ಕಾರ್ಯ ನಡೆಸಿದರೂ ಆರೋಪಿಗಳು ಪತ್ತೆಯಾಗದ ಕಾರಣ ಪ್ರಕರಣಕ್ಕೆ ತಾತ್ಕಾಲಿಕ ತೆರೆ ಎಳೆಯಲಾಗಿತ್ತು.

ಡಿಸಿಪಿ ಡಾ. ಎ.ಎನ್.ಪ್ರಕಾಶ್‍ಗೌಡರು ಪತ್ತೆಯಾಗದ ಹಳೇ ಅಪರಾಧ ಪ್ರಕರಣಗಳ ಪತ್ತೆಗೆ ಕಾರ್ಯಾಚರಣೆ ನಡೆಸುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ದೇವರಾಜ ಠಾಣೆ ಇನ್ ಸ್ಪೆಕ್ಟ್‍ರ್ ಪ್ರಸನ್ನಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ಸುಳಿವಿನ ಜಾಡು ಹಿಡಿದು ಶೋಧ ನಡೆಸಿದಾಗ ಪ್ರಕರಣದ ಪ್ರಮುಖ ಆರೋಪಿ ಸಲೀಂ ಪಾಷ ಮಂಗಳವಾರ ಮುಂಜಾನೆ ಮೈಸೂರಿನಲ್ಲಿ ಸಿಕ್ಕಿಬಿದ್ದ. ಆತನನ್ನು ವಿಚಾರಣೆಗೊಳಪಡಿಸಿ ದಾಗ 8 ವರ್ಷಗಳ ಹಿಂದೆ ಟಿಬೆಟಿಯನ್ ಯುವಕ ತನ್‍ಜಿನ್ ದರಗ್ಯಾಲ್ ಮೇಲೆ ಡ್ರ್ಯಾಗರ್‍ನಿಂದ ಹಲ್ಲೆ ನಡೆಸಿದ್ದು ತಾನೇ ಎಂಬುದನ್ನು ಒಪ್ಪಿಕೊಂಡ. ಆತನ ಹೇಳಿಕೆಯಿಂದ ಪ್ರಕರಣ ದಲ್ಲಿ ಭಾಗಿಯಾಗಿದ್ದರೆನ್ನಲಾದ ಸಲ್ಮಾನ್ ಪಾಷ ಮತ್ತು ಇಸ್ಮಾ ಯಿಲ್ ಖಾನ್‍ನನ್ನು ಬಂಧಿಸಲಾಗಿದೆ. ಕೃತ್ಯ ನಡೆದ ನಂತರ ಈ ಮೂವರೂ ಬೆಂಗಳೂರು, ದುಬೈಗೆ ತೆರಳಿ ಕೆಲ ವರ್ಷಗಳ ಕಾಲ ತಲೆಮರೆಸಿಕೊಂಡಿದ್ದು, ಇತ್ತೀಚೆಗಷ್ಟೇ ಮೈಸೂರಿಗೆ ವಾಪಸ್ಸಾಗಿ ದ್ದರು. ಸಲೀಂಪಾಷ ಮೈಸೂರಿನ ಎನ್.ಆರ್. ಠಾಣೆಯಲ್ಲಿ ರೌಡಿಶೀಟರ್ ಆಗಿದ್ದು, 2012ರಲ್ಲಿ ತನ್ನ ಪ್ರೇಯಸಿ ಮೇಲೆ ಹಲ್ಲೆ, ಅಪಹರಣ ಸಂಬಂಧ ನಜರ್‍ಬಾದ್ ಠಾಣೆಯಲ್ಲಿ ಪ್ರಕರಣ ಕೇಸ್ ದಾಖಲಿಸಲಾಗಿತ್ತು. ನಂತರ ಅದೇ ವಿಚಾರದಲ್ಲಿ ಪ್ರೇಯ ಸಿಯ ಚಿಕ್ಕಪ್ಪನೊಂದಿಗೆ ಗಲಾಟೆ ಮಾಡಿಕೊಂಡು ಅವರ ಕೊಲೆಗೆ ಪ್ರಯತ್ನಿಸಿದ್ದರಿಂದ ಸಲೀಂಪಾಷ ವಿರುದ್ಧ ಎನ್.ಆರ್. ಠಾಣೆ ಯಲ್ಲಿ ಪ್ರಕರಣ ದಾಖ ಲಾಗಿತ್ತು. ಇದಲ್ಲದೆ ಸ್ನೇಹಿತರೊಂದಿಗೆ ಸೇರಿ ಹುಡುಗಿ ವಿಚಾರದಲ್ಲಿಯೂ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಮ್ಯಾನ್ಮರ್‍ನಲ್ಲಿ ನಡೆಯುತ್ತಿದ್ದ ಜನಾಂಗೀಯ ಹತ್ಯೆಗೆ ಪ್ರತಿಕಾರವಾಗಿ ತಾವು ಈ ಕೃತ್ಯವೆಸಗಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ ಎಂದು ಡಿಸಿಪಿ ಪ್ರಕಾಶ್ ಗೌಡರು ತಿಳಿಸಿದ್ದಾರೆ.

Translate »