ಕೆ.ಆರ್.ಪೇಟೆ ಈಶ್ವರ ದೇವಾಲಯದಲ್ಲಿರೌಡಿಶೀಟರ್ ಬರ್ಬರ ಹತ್ಯೆ
ಮಂಡ್ಯ

ಕೆ.ಆರ್.ಪೇಟೆ ಈಶ್ವರ ದೇವಾಲಯದಲ್ಲಿರೌಡಿಶೀಟರ್ ಬರ್ಬರ ಹತ್ಯೆ

June 28, 2022

ಕೆ.ಆರ್.ಪೇಟೆ,ಜೂ.27-ಹಾಡಹಗಲೇ ದೇವಸ್ಥಾನದ ಆವರಣದಲ್ಲೇ ರೌಡಿಶೀಟರ್ ವೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಕೆ.ಆರ್.ಪೇಟೆ ಪಟ್ಟಣದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಕೊಲೆ, ಅಪಹರಣ, ಹಫ್ತಾ ವಸೂಲಿ ಸೇರಿದಂತೆ ಹಲ ವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕೆ.ಆರ್. ಪೇಟೆಯಿಂದ ಗಡಿಪಾರು ಮಾಡಲಾಗಿದ್ದ ರೌಡಿಶೀಟರ್ ಅರುಣ ಅಲಿಯಾಸ್ ಅಲ್ಲೂ ಅರುಣ(38) ಹತ್ಯೆಗೀಡಾದವನು.

ಮೈಸೂರಲ್ಲಿ ವಾಸವಿದ್ದ ಅರುಣ, ಸೋಮವಾರ ಬೆಳಗ್ಗೆ 9.30ರ ವೇಳೆಯಲ್ಲಿ ತನ್ನ ಸಂಬಂಧಿಕ ಪ್ರವೀಣ್‍ನ ಬೈಕ್‍ನಲ್ಲಿ ಕೆ.ಆರ್.ಪೇಟೆ ಶ್ರವಣಬೆಳಗೊಳ ರಸ್ತೆಯಲ್ಲಿರುವ ಈಶ್ವರ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆಯೇ ಐದಾರು ಜನ ರಿದ್ದ ತಂಡ ಆತನ ಮೇಲೆ ಮುಗಿ ಬಿದ್ದು ದೇವಸ್ಥಾನದ ಆವರಣದಲ್ಲೇ ಮಾರಕಾಸ್ತ್ರ ಗಳಿಂದ ಮನಸೋ ಇಚ್ಛೆ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದೆ.

ವಿವರ: ಹತ್ಯೆಗೀಡಾದ ಅಲ್ಲೂ ಅರುಣ ಕುಖ್ಯಾತ ರೌಡಿಶೀಟರ್ ಆಗಿದ್ದು, ಎರಡು ಕೊಲೆ ಪ್ರಕರಣಗಳಲ್ಲಿ ಜೈಲು ಪಾಲಾಗಿದ್ದ. ರಾಜಕಾರಣಿಗಳೂ ಸೇರಿದಂತೆ ಉದ್ಯಮಿ ಗಳನ್ನು ಬೆದರಿಸಿ ಹಫ್ತಾ ವಸೂಲಿ ಮಾಡುತ್ತಿದ್ದ. ತನಗೆ ಹಫ್ತಾ ನೀಡದಿದ್ದವರನ್ನು ಅಪಹರಿಸಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಈತನಿಗೆ ಹೆದರಿ ಹಲವರು ಪೊಲೀಸರಿಗೆ ದೂರನ್ನೇ ಸಲ್ಲಿಸಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೆ.ಆರ್.ಪೇಟೆ ಪಟ್ಟಣದವನೇ ಆದ ಈತ, ಆರಂಭದಲ್ಲಿ ಎಳನೀರು ವ್ಯಾಪಾರ ಮಾಡುತ್ತಿದ್ದ. ನಂತರ ಪಾತಕ ಲೋಕಕ್ಕೆ ಕಾಲಿಟ್ಟಿದ್ದಾನೆ. ಈತ ಹಾಗೂ ಮತ್ತೋರ್ವ ರೌಡಿಶೀಟರ್ ಯತೀಶ್ ಸ್ನೇಹಿತರೇ ಆಗಿದ್ದು, ರೌಡಿಸಂನಲ್ಲಿ ಪ್ರಭುತ್ವ ಸಾಧಿಸುವ ವಿಚಾರದಲ್ಲಿ ಇವರಿಬ್ಬರ ನಡುವೆ ದ್ವೇಷ ಹುಟ್ಟಿಕೊಂಡಿದೆ. 2009ರಲ್ಲಿ ಯತೀಶ್ ತಂಡ ಅರುಣನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತಾದರೂ, ಆತ ಬದುಕುಳಿದಿದ್ದ. ಈ ವಿಚಾರವಾಗಿ ದ್ವೇಷ ಸಾಧಿಸುತ್ತಿದ್ದ ಅರುಣ, 2012ರಲ್ಲಿ ಯತೀಶ್‍ನ ಬಲಗೈ ಭಂಟ ಭಾಸ್ಕರ್‍ನನ್ನು ಕೊಚ್ಚಿ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಯತೀಶ್ ಮತ್ತು ಅರುಣನ ನಡುವೆ ಕೆಲವರು ಸಂಧಾನ ನಡೆಸಿದರು ಎಂದು ಹೇಳಲಾಗಿದ್ದು, ಸಮರ್ಪಕ ಸಾಕ್ಷಿಗಳು ಇಲ್ಲದ ಕಾರಣ ಅರುಣ ಖುಲಾಸೆಗೊಂಡಿದ್ದ. ಆ ನಂತರವೂ ತನ್ನ ಮೇಲೆ ಹಲ್ಲೆ ನಡೆಸಿದ್ದ ಯತೀಶ್‍ನ ಗ್ಯಾಂಗ್ ವಿರುದ್ಧ ಕತ್ತಿ ಮಸೆಯುತ್ತಿದ್ದ ಅರುಣ, 2016ರಲ್ಲಿ ಯತೀಶ್‍ನ ತಮ್ಮ ರಾಜೇಶ್‍ನನ್ನು ಹುಟ್ಟು ಹಬ್ಬದ ದಿನವೇ ಕೊಚ್ಚಿ ಕೊಲೆ ಮಾಡಿ, ಜೈಲು ಪಾಲಾಗಿದ್ದ.

ಜೈಲಿನಲ್ಲಿದ್ದಾಗಲೂ ಅಪರಾಧ ಕೃತ್ಯಗಳಲ್ಲಿ ಸಕ್ರಿಯನಾಗಿದ್ದ ಅರುಣ, ಕೆ.ಆರ್.ಪೇಟೆಯ ಚಿನ್ನದ ವ್ಯಾಪಾರಿ ಗೋಪಾಲ ಎಂಬಾತನನ್ನು ತನ್ನ ಸಹಚರರ ಮೂಲಕ ಅಪಹರಣ ಮಾಡಿಸಿ, ಕೋಟಿ ರೂ. ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದ. 3 ದಿನಗಳ ಕಾಲ ನಂಜನಗೂಡು ಬಳಿ ತೋಟದ ಮನೆಯೊಂದರಲ್ಲಿ ಚಿನ್ನದ ವ್ಯಾಪಾರಿ ಗೋಪಾಲ್‍ನನ್ನು ಅಕ್ರಮ ಬಂಧನದಲ್ಲಿರಿಸಿದ್ದ ಅರುಣ, ಕೆಲ ಲಕ್ಷ ರೂ. ಪಡೆದು ಬಿಡುಗಡೆ ಮಾಡಿದ್ದ ಎನ್ನಲಾಗಿದೆ.

ಅಪಹರಣ ಪ್ರಕರಣ ಕೆ.ಆರ್.ಪೇಟೆ ಠಾಣೆಯಲ್ಲಿ ದಾಖಲಾಗಿತ್ತು. ಅಪಹರಣಕಾರ ರಿಂದ ಬಿಡುಗಡೆಯಾಗಿ ಬಂದ ಗೋಪಾಲನನ್ನು ಪೊಲೀಸರು ವಿಚಾರಣೆಗೊಳಪಡಿಸಿ ದಾಗ ತನ್ನನ್ನು ಅಪಹರಿಸಿದ ನಂತರ ರೌಡಿಶೀಟರ್ ಅರುಣ, ಮೊಬೈಲ್‍ಗೆ ಕರೆ ಮಾಡಿ ಕೋಟಿ ರೂ. ಒತ್ತೆ ಹಣ ಕೇಳಿದ್ದ ಎಂಬ ವಿಚಾರವನ್ನು ಗೋಪಾಲ ಹೇಳಿದಾಗ, ಜೈಲಿನಲ್ಲಿರುವ ಅರುಣ ಹ್ಯಾಗೆ ಅಪಹರಣ ಮಾಡಿಸಲು ಸಾಧ್ಯ ಎಂದು ತಲೆಕೆಡಿಸಿಕೊಂಡ ಕೆ.ಆರ್.ಪೇಟೆ ಪೊಲೀಸರು ಕಾಲ್‍ಲಿಸ್ಟ್ ಪರಿಶೀಲಿಸಿದಾಗ ಅರುಣ ಬಂಧಿಯಾಗಿದ್ದ ನಂಜನಗೂಡು ಜೈಲಿನ ಅಧಿಕಾರಿಯೊಬ್ಬರ ಮೊಬೈಲ್‍ನಿಂದ ಕರೆ ಬಂದಿರುವುದು ಖಚಿತಪಟ್ಟಿದೆ. ಅ ಪ್ರಕರಣದಲ್ಲಿ ಜೈಲಿನ ಅಧಿಕಾರಿಯೂ ಕೂಡ ಬಂಧಿಸಲ್ಪಟ್ಟು ಜೈಲು ಪಾಲಾಗಿದ್ದರು ಎಂದು ಹೇಳಲಾಗಿದೆ. ತನ್ನ ಆಪ್ತ ಭಾಸ್ಕರ್ ಮತ್ತು ಸಹೋದರ ರಾಜೇಶ್‍ನನ್ನು ಕೊಲೆ ಮಾಡಿದ್ದ ಸೇಡು ತೀರಿಸಿಕೊಳ್ಳಲು ಅರುಣನನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೂ, ಅರುಣ ನಡೆಸುತ್ತಿದ್ದ ಪಾತಕ ಕೃತ್ಯಗಳಿಂದಾಗಿ ಬೇರೆ ಯಾರಾದರೂ ವಿರೋಧಿಗಳು ಹತ್ಯೆ ಮಾಡಿರಬಹುದೇ ಎಂಬ ನಿಟ್ಟಿನಲ್ಲೂ ಕೂಡ ತನಿಖೆ ಮುಂದುವರೆಸಿದ್ದಾರೆ. ರಾಜೇಶ್ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಅರುಣ, ಕಳೆದ 3 ವರ್ಷದ ಹಿಂದೆ ಬಿಡುಗಡೆಯಾಗಿ ಬಂದಾಗ ಆತನನ್ನು ಗಡಿಪಾರು ಮಾಡಲಾಗಿತ್ತು. ಗಡಿಪಾರು ಅವಧಿ ಮುಗಿದ ನಂತರವೂ ಅರುಣ ಕೆ.ಆರ್.ಪೇಟೆಯ ತನ್ನ ಮನೆಯಲ್ಲಿ ನೆಲೆಸದೆ ಮೈಸೂರಿನಲ್ಲೇ ವಾಸವಿದ್ದ. ಆದರೆ ಪ್ರತೀ ಸೋಮವಾರ ಶ್ರವಣಬೆಳಗೊಳ ರಸ್ತೆಯಲ್ಲಿರುವ ಈಶ್ವರನ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಸುಮಾರು ಅರ್ಧ ಗಂಟೆ ಕಾಲ ದೇವಸ್ಥಾನದಲ್ಲೇ ಇರುತ್ತಿದ್ದ ಎಂದು ಹೇಳಲಾಗಿದ್ದು, ಈ ಮಾಹಿತಿ ಸಂಗ್ರಹಿಸಿದ್ದ ಹಂತಕರು ಆತನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರಾದರೂ, ಹೇಗೋ ತಪ್ಪಿಸಿಕೊಳ್ಳುತ್ತಿದ್ದ ಎನ್ನಲಾಗಿದ್ದು, ಕಳೆದ ಶನಿವಾರ ಕೆ.ಆರ್.ಪೇಟೆ ಮನೆಗೆ ಬಂದಿದ್ದ ಆತ, ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳು ತ್ತಿರಲಿಲ್ಲ. ಇಂದು ಬೆಳಗ್ಗೆ ಸಂಬಂಧಿಕ ಪ್ರವೀಣ್ ಬೈಕ್‍ನಲ್ಲಿ ದೇವಸ್ಥಾನಕ್ಕೆ ಡ್ರಾಪ್ ತೆಗೆದು ಕೊಂಡ ಅರುಣ, ದೇವಸ್ಥಾನದ ಆವರಣದಲ್ಲೇ ಬರ್ಬರವಾಗಿ ಕೊಲೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸ ಲಾಗಿದೆ. ಈ ಸಂಬಂಧ ಕೆ.ಆರ್.ಪೇಟೆ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »