ನಾಳೆಯಿಂದ ‘ಮೈ ಬಿಲ್ಡ್’ ವಸ್ತುಪ್ರದರ್ಶನ ನಿರ್ಮಾಣ ತಂತ್ರಜ್ಞಾನ ಅನಾವರಣ
ಮೈಸೂರು

ನಾಳೆಯಿಂದ ‘ಮೈ ಬಿಲ್ಡ್’ ವಸ್ತುಪ್ರದರ್ಶನ ನಿರ್ಮಾಣ ತಂತ್ರಜ್ಞಾನ ಅನಾವರಣ

December 4, 2018

ಮೈಸೂರು: ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಡಿ.5ರಿಂದ 10ರವರೆಗೆ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕಟ್ಟಡ ನಿರ್ಮಾಣ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವ `ಮೈಬಿಲ್ಡ್ ವಸ್ತುಪ್ರದರ್ಶನ’ವನ್ನು ಏರ್ಪಡಿಸಲಾಗಿದೆ ಎಂದು ಮೈಬಿಲ್ಡ್ ಸಮಿತಿ ಅಧ್ಯಕ್ಷ ಕೆ.ಎಂ.ರಘುನಾಥ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಡಿ.5ರಂದು ಸಂಜೆ 5ಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಮುಡಾ ಆಯುಕ್ತ ಪಿ.ಎಸ್.ಕಾಂತ ರಾಜು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಡಿ.10ರಂದು ಸಮಾರೋಪ ಸಮಾರಂಭದಲ್ಲಿ ದಕ್ಷಿಣ ವಲಯ ಐಜಿಪಿ ಶರತ್‍ಚಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್ ಇನ್ನಿತರರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ವಸ್ತು ಪ್ರದರ್ಶನದಲ್ಲಿ ಕಟ್ಟಡ ನಿರ್ಮಾಣದಲ್ಲಿ ಹೊಸದಾಗಿ ಆವಿಷ್ಕಾರಗೊಂಡಿರುವ ಕಟ್ಟಡ ಸಾಮಗ್ರಿಗಳ ಸಮಗ್ರ ಪರಿಚಯ ಹಾಗೂ ಪ್ರದರ್ಶನ ಏರ್ಪಡಿಸಲಾಗುತ್ತದೆ. 200 ಮಳಿಗೆಗಳಲ್ಲಿ ನಿವೇಶನ ಕೊಳ್ಳುವ ಪ್ರಕ್ರಿಯೆ, ನಿವೇಶನ ಸಮೀಕ್ಷೆ, ಮಣ್ಣು ಪರೀಕ್ಷೆ, ವಿನ್ಯಾಸ ಸೇರಿದಂತೆ ಗೃಹಪ್ರವೇಶದವರೆಗೆ ಆವಶ್ಯವಾಗಿರುವ ಪರಿಕರ ಮತ್ತು ಸೇವೆಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಇದರೊಂದಿಗೆ ಸೌರಶಕ್ತಿ ಯೋಜನೆ, ವಿದ್ಯುತ್ ಉಪಕರಣಗಳು, ಕಟ್ಟಡ ನಿರ್ಮಾಣದ ಯಂತ್ರಗಳು, ಜಲಸಂರಕ್ಷಣಾ ವಿಧಾನಗಳು, ನವೀನ ಮಾದರಿಯ ನೆಲಹಾಸುಗಳು, ಅಡುಗೆ ಮನೆ ಮತ್ತು ಸ್ನಾನದ ಮನೆಯ ಅಲಂಕಾರಿಕ ಸಾಮಗ್ರಿಗಳು, ಛಾವಣಿಗಳು, ಹೊಸ ಬಗೆಯ ಬಣ್ಣಗಳು, ಮರಳು ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಬಳಸುವ ವಸ್ತುಗಳ ಪ್ರದರ್ಶನವೂ ಇರುತ್ತದೆ.

ವಸ್ತುಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರ ಮನೋರಂಜನೆಗಾಗಿ ಪ್ರತಿದಿನ ಸಂಜೆ 6.30ರಿಂದ ರಾತ್ರಿ 8.30ರ ವರೆಗೆ `ವಾಯ್ಸ್ ಆಫ್ ಮೈಬಿಲ್ಡ್’ ಸಂಗೀತ ಕಾರ್ಯ ಕ್ರಮವನ್ನು ಆಯೋಜಿಸಲಾಗಿದೆ. ಇದರಲ್ಲಿ 15 ವರ್ಷದೊಳಗಿನ ಮೈಸೂರಿನ ಶಾಲಾ ವಿದ್ಯಾರ್ಥಿಗಳಿಗೆ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಹಾಗೆಯೇ ವಿದ್ಯಾರ್ಥಿಗಳಿಂದ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತವೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಿಲ್ಡರ್ಸ್ ಅಸೋ ಸಿಯೇಷನ್‍ನ ಕೆ.ಸುಬ್ರಹ್ಮಣ್ಯ, ಮೈಬಿಲ್ಡ್ ಸಮಿತಿ ಕಾರ್ಯದರ್ಶಿ ಪಿ.ಪುಟ್ಟಸ್ವಾಮಿ ಇದ್ದರು.

Translate »