ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ವಿಕಲಚೇತನರ ರ್ಯಾಲಿ
ಮೈಸೂರು

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ವಿಕಲಚೇತನರ ರ್ಯಾಲಿ

December 4, 2018

ಮೈಸೂರು: ವಿಕಲಚೇತನರಿಗೆ ಪ್ರತ್ಯೇಕ ಕಾಲೋನಿ ನಿರ್ಮಿಸು ವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೈಸೂರಿನಲ್ಲಿ ಸೋಮವಾರ ವಿಕಲಚೇತನರ ಅಭ್ಯುದಯ ವೇದಿಕೆಯ ಕಾರ್ಯಕರ್ತರು  ತ್ರಿಚಕ್ರ ವಾಹನಗಳ ರ್ಯಾಲಿ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.

ಮೈಸೂರು ಅರಮನೆ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಾ ಲಯ ಮುಂಭಾಗದಿಂದ ಇಂದು ಬೆಳಿಗ್ಗೆ ರ್ಯಾಲಿ ಆರಂಭಿಸಿದ ವಿಕಲಚೇತನರು ದೊಡ್ಡಗಡಿಯಾರ ವೃತ್ತ, ಮಹಾತ್ಮಗಾಂಧಿ ವೃತ್ತ, ಚಿಕ್ಕಗಡಿಯಾರವೃತ್ತ, ದೇವರಾಜ ಅರಸ್ ರಸ್ತೆ, ಜೆಎಲ್‍ಬಿ ರಸ್ತೆ, ವಿನೋಬ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಕೆಲಕಾಲ ಧರಣಿ ನಡೆಸಿದರು. ಬಳಿಕ ಮನವಿ ಸಲ್ಲಿಸಿ, ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ನಡೆಯುತ್ತಿದ್ದ ವಿಶ್ವ ವಿಕಲಚೇತನರ ಕಾರ್ಯಕ್ರಮಕ್ಕೆ ಬಂದು, ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಮುಡಾದಿಂದ ವಿಕಲಚೇತನರಿಗೆ ಪ್ರತ್ಯೇಕ ಕಾಲೋನಿ ನಿರ್ಮಿಸಬೇಕು. ಜಿಲ್ಲಾಡಳಿತ ನಿವೇಶನ ಮಂಜೂರು ಮಾಡಬೇಕು. ರಾಜ್ಯದಲ್ಲಿ 2016ರ ವಿಕಲಚೇತನ ಕಾಯ್ದೆ ಯನ್ನು ಅನುಷ್ಠಾನಗೊಳಿಸಬೇಕು. ಪ್ರತ್ಯೇಕ ಸಭಾಂಗಣ ನಿರ್ಮಿಸಿಕೊಡಬೇಕು. ಮೈಸೂರು ನಗರಪಾಲಿಕೆ ವತಿಯಿಂದ ವಿಕಲಚೇತನರಿಗೆ ಥೆರಪಿ ಸೆಂಟರ್ ಹಾಗೂ ಯೋಗ ಕ್ಷೇಮ ಕೇಂದ್ರವನ್ನು ಸ್ಥಾಪಿಸಬೇಕು.ಮೈಸೂರು ಜಿಲ್ಲೆಯಲ್ಲಿ ವಿಕಲಚೇತನರ ಸಬಲೀ ಕರಣ ಇಲಾಖೆಯಿಂದ ಪೆಟ್ಟಿಗೆ ಅಂಗಡಿಗಳನ್ನು ನೀಡುತ್ತಿದ್ದರೂ,  ರಸ್ತೆ ಬದಿ ವ್ಯಾಪಾರ ಮಾಡಲು ನಗರಪಾಲಿಕೆ, ಪರವಾನಗಿಯನ್ನು ನೀಡುತ್ತಿಲ್ಲ. ತಾವು ಸ್ವಾವಲಂಬಿಯಾಗಿ ಬದುಕುವುದಕ್ಕೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಘೋಷಣೆ ಕೂಗಿದ ವಿಕಲಚೇತನÀರು ಅಧಿ ಕಾರಿಗಳು ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು. ಶಾಸಕ ತನ್ವೀರ್ ಸೇಠ್, ಪ್ರತಿಭಟನಾನಿರತರ ಅಹವಾಲು ಆಲಿಸಿ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಕೆಲಕಾಲ ಶಾಂತವಾಗಿದ್ದವರು, ಮತ್ತೆ ಘೋಷಣೆ ಕೂಗಿದರು. ಈ ವೇಳೆ ಸಚಿವ ಜಿ.ಟಿ.ದೇವೇಗೌಡ ಅವರು ದೂರು ಸ್ವೀಕರಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ವಾಗ್ಧಾನ ಮಾಡಿದರು. ಪ್ರತಿಭಟನೆಯಲ್ಲಿ ವಿಕಲಚೇತನರ ಅಭ್ಯುದಯ ವೇದಿಕೆ ಅಧ್ಯಕ್ಷ ಎಂ.ಪ್ರಭುಸ್ವಾಮಿ, ಕಾರ್ಯದರ್ಶಿ ಅಜ್ಗರ್ ಪಾಷ್, ಸಂಚಾಲಕ ದಿಲೀಪ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

 

Translate »