ಮೈಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರದ ಆರೋಪ ಬೇರೆ ಇಲಾಖೆ ಅಧಿಕಾರಿಯಿಂದ ತನಿಖೆ ನಡೆಸಿ: ಸಾರಾ ಆಗ್ರಹ
ಮೈಸೂರು

ಮೈಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರದ ಆರೋಪ ಬೇರೆ ಇಲಾಖೆ ಅಧಿಕಾರಿಯಿಂದ ತನಿಖೆ ನಡೆಸಿ: ಸಾರಾ ಆಗ್ರಹ

May 26, 2020

ಮೈಸೂರು, ಮೇ 25(ಆರ್‍ಕೆಬಿ)- ಮೈಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಯಾರ ಒತ್ತಡಕ್ಕೆ ಮಣಿಯುತ್ತಿ ದ್ದಾರೆ ಎಂಬುದನ್ನು ಸಚಿವರೇ ಉತ್ತರಿಸ ಬೇಕು ಎಂದು ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಇಂದಿಲ್ಲಿ ಆಗ್ರಹಿಸಿದರು.

ಮೈಸೂರಿನ ಸೀತಾವಿಲಾಸ ರಸ್ತೆಯಲ್ಲಿ ರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮೈಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಪ್ರಕ್ರಿಯೆ ರದ್ದು ಗೊಳಿಸಿ, ತನಿಖೆ ನಡೆಸಿ, ಪಾರದರ್ಶಕ ನೇಮ ಕಾತಿ ಪ್ರಕ್ರಿಯೆ ನಡೆಯಬೇಕು ಎಂದು ನಾನು ಒತ್ತಾಯ ಮಾಡಿದರೆ, ನನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಾರೆ. ಹಾಗಾ ದರೆ ಅನುಮತಿ ಪಡೆದ 165 ಹುದ್ದೆಗಳಿಗೆ ಹೆಚ್ಚುವರಿಯಾಗಿ 25 ಹುದ್ದೆಗಳಿಗೆ ನೇಮ ಕಾತಿ ನಡೆಯುತ್ತಿದೆ ಎನ್ನುವುದಾದರೆ ಸಚಿ ವರು ಯಾರ ಒತ್ತಡಕ್ಕೆ ಮಣಿದಿದ್ದಾರೆ? ಎಂದು ಸಾರಾ ಮಹೇಶ್ ಪ್ರಶ್ನಿಸಿದರು.

ಸಾ.ರಾ.ಮಹೇಶ್ ಹೇಳಿದ ಹಾಗೆ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ಸಚಿವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಹೇಳಿದ ಹಾಗೆ ತನಿಖೆ ಮಾಡುವುದು ಬೇಡ. ಮೆಗಾ ಡೈರಿ ನೇಮಕಾತಿಯಲ್ಲಿ ನಡೆ ದಿರುವ ಅವ್ಯವಹಾರವನ್ನು ಸಂವಿಧಾನದ ಅಡಿ ರೂಪಿತವಾದ ಕಾನೂನಿನ ಮುಖಾಂ ತರ ತನಿಖೆ ನಡೆಸಲಿ. ಇದು ನನ್ನ ವಾದವೇ ಹೊರತು, ಯಾರನ್ನೂ ಬ್ಲಾಕ್‍ಮೇಲ್ ಮಾಡಿಲ್ಲ. ಈಗ ನಡೆದಿರುವ ತನಿಖೆ ಸರಿ ಯಿಲ್ಲ. ನ್ಯಾಯಾಂಗ ತನಿಖೆ ನಡೆಸಬೇಕು ಎಂಬುದು ನನ್ನ ಹೋರಾಟ ಎಂದರು.
ಮೆಗಾ ಡೈರಿಯ 165 ಹುದ್ದೆಗಳ ಜೊತೆಗೆ ಹೆಚ್ಚುವರಿಯಾಗಿ 25 ಹುದ್ದೆಗಳನ್ನು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಮಂಜೂರಾತಿ ಮಾಡಿಸಿಕೊಂಡು, ತರಾತುರಿ ಯಿಂದ ಪ್ರಕ್ರಿಯೆ ಮುಗಿಸುವ ಪ್ರಯತ್ನ ನಡೆದಿದೆ. ಹಾಗೇನಾದರೂ ಸಂದರ್ಶನ ಕರೆದು ಹುದ್ದೆ ನೀಡಲು ಮುಂದಾದರೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ಅನಿ ವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಈ ಮಧ್ಯೆ ಜಿಲ್ಲಾಧಿಕಾರಿ ಕಚೇರಿಯಿಂದ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಕಳೆದ ಮಾ.26ರಂದೇ ಚುನಾವಣಾ ತುರ್ತು ಸೂಚನಾ ಪತ್ರ ಹೋಗಿದ್ದು, ಅದರಲ್ಲಿ 2020ರ ಮಾ.9ಕ್ಕೆ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ಅವಧಿ ಮುಗಿಯ ಲಿದ್ದು, ಚುನಾವಣೆ ನಡೆಸಲು ರಿಟರ್ನಿಂಗ್ ಅಧಿಕಾರಿಗಳ ನೇಮಕಾತಿ ಮಾಡುವ ಸಂಬಂಧ ಸಹಕಾರ ಚುನಾವಣಾ ಪ್ರಾಧಿ ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲಾಗಿದೆ. ಅದೇ ಆಧಾರದಲ್ಲಿ ಹೇಳುವುದಾದರೆ, ಇನ್ನು 3 ತಿಂಗಳು 14 ದಿನಗಳು ಮಾತ್ರ ಬಾಕಿ ಇದ್ದು, ಅಷ್ಟರೊಳಗೆ ನೇಮಕಾತಿ ಪ್ರಕ್ರಿಯೆ ಹೇಗೆ ಸಾಧ್ಯ? ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಪ್ರತಿದಿನ ಕನಿಷ್ಠ 40 ಮಂದಿಗೆ ಸಂದರ್ಶನ ನಡೆಸಿದರೂ ಕನಿಷ್ಠ 2 ತಿಂಗಳಾದರೂ ಆಗುತ್ತದೆ. ಕಾನೂನು ಮಾಡುವ ನೀವೇ ಅದನ್ನು ಗಾಳಿಗೆ ತೂರು ತ್ತೀರಾ? ಅಕ್ರಮವೇ ನಿಮ್ಮದಾದರೆ ನಮಗೆ ಹೋರಾಟ ಅನಿವಾರ್ಯ ಎಂದರು.

ನಾನು ಸಾ.ರಾ.ಮಹೇಶ್‍ನಷ್ಟು ಬುದ್ದಿ ವಂತನಲ್ಲ ಎಂದು ಮಾಜಿ ಸಚಿವ ಜಿ.ಟಿ. ದೇವೇಗೌಡರು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಿ.ಟಿ.ದೇವೇಗೌಡರು ಸರಿಯಾಗಿಯೇ ಹೇಳಿದ್ದಾರೆ. ಹಾಗಾಗಿಯೇ ಅಲ್ಲವೇ ಕುಮಾರಸ್ವಾಮಿ ನನ್ನನ್ನು ಮಂತ್ರಿ ಮಾಡಿದ್ದು ಎಂದರು. ಗೋಷ್ಠಿಯಲ್ಲಿ ತಿ.ನರಸೀ ಪುರ ಶಾಸಕ ಅಶ್ವಿನ್‍ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ ಇನ್ನಿತರರಿದ್ದರು.

Translate »