ಮೈಸೂರು ವಿಮಾನ ನಿಲ್ದಾಣದ ರನ್‍ವೇ ವಿಸ್ತರಣೆಗೆ
ಮೈಸೂರು

ಮೈಸೂರು ವಿಮಾನ ನಿಲ್ದಾಣದ ರನ್‍ವೇ ವಿಸ್ತರಣೆಗೆ

April 17, 2022

ಮೈಸೂರು, ಏ. 16- ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗಾಗಿ ರಾಜ್ಯ ಸರ್ಕಾರವು 319.13 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಕೋರಿಕೆ ಮೇರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 2022-23ನೇ ಸಾಲಿನ ಬಜೆಟ್‍ನಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಿಸಲಾಗುವುದು ಎಂದು ಘೋಷಿಸಿದ್ದರು.

ಅದರಂತೆ ಇದೀಗ ವಿಮಾನ ನಿಲ್ದಾಣ ವಿಸ್ತರಣೆಗೆ ರಾಜ್ಯ ಸರ್ಕಾರದಿಂದ 240 ಎಕರೆ ಭೂಮಿಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ (ಎಎಐ) ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಹಸ್ತಾಂ ತರಿಸಲು ಸರ್ಕಾರ ತೀರ್ಮಾನಿಸಿದೆ. ಈ ಪೈಕಿ ಈಗಾಗಲೇ 22 ಎಕರೆ 9 ಗುಂಟೆ ಜಮೀನು ಎಎಐ ಸ್ವಾಧೀನದಲ್ಲಿದೆ. 11.9 ಎಕರೆ ಜಮೀನು ಎಣ್ಣೆಹೊಳೆ ಕಾಲುವೆ ಯಾಗಿದ್ದು, ಇದು ಸರ್ಕಾರಿ ಜಮೀನಾಗಿರುತ್ತದೆ. ಭೂ ಮಾಲೀಕರಿಂದ ಸ್ವಾಧೀನಪಡಿಸಿಕೊಂಡಿರುವ 206 ಎಕರೆ 22 ಗುಂಟೆ ಜಮೀನು ಪೈಕಿ 160 ಎಕರೆ ಗುಂಟೆ ಜಮೀನಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಉಳಿದಂತೆ 46 ಎಕರೆ 22 ಗುಂಟೆ ಜಮೀನಿಗೆ ಪ್ರಾಥಮಿಕ ಅಧಿಸೂಚನೆ ಬಾಕಿ ಇದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಭೂ ಸ್ವಾಧೀನಪಡಿಸಿಕೊಂಡು ಎಎಐಗೆ ಹಸ್ತಾಂತರಿ ಸಲು ನೋಡಲ್ ಏಜೆನ್ಸಿಯಾಗಿ ಕೆಐಎಡಿಬಿಯನ್ನು ನೇಮಿಸಲಾಗಿದೆ. ಭೂಪರಿಹಾರ ವೆಚ್ಚ ಎಕರೆಗೆ 1.50 ಕೋಟಿಯಂತೆ ಒಟ್ಟು 309,84,37,500 ರೂ.ಗಳಾಗಿದ್ದು, ಸೇವಾ ಶುಲ್ಕ ಶೇ.3ರಂತೆ 9,29,53,125 ರೂ.ಗಳಾಗುತ್ತದೆ. ಒಟ್ಟಾರೆ 219,13,90,625 ರೂ.ಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಲು ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಅಧಿನ ಕಾರ್ಯದರ್ಶಿ ಎಸ್.ಎನ್.ಕಲಾವತಿ ಆದೇಶ ಹೊರಡಿಸಿದ್ದಾರೆ. ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ 319 ಕೋಟಿ ರೂ. ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮೂಲಭೂತ ಸೌಕರ್ಯ ಇಲಾಖೆ ಸಚಿವ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಸಂಸದ ಪ್ರತಾಪ್ ಸಿಂಹ ಧನ್ಯವಾದ ತಿಳಿಸಿದ್ದಾರೆ.

ಮೈಸೂರಿನ ಬಗ್ಗೆ ಸಿಎಂಗೆ ಅಪಾರ ಕಾಳಜಿ: ಈ ಸಂಬಂಧ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಮುಂಬೈ ನೆರಳಲ್ಲಿದ್ದ ಪುಣೆ 20 ವರ್ಷದ ಹಿಂದೆ ನಿರ್ಮಾಣವಾದ ಒಂದು ಹೆದ್ದಾರಿಯಿಂದಾಗಿ ಇಂದು ಸ್ವಂತವಾಗಿ ಗುರುತಿಸಿಕೊಂಡಿದೆ. ಹಾಗೆಯೇ ಮೈಸೂರು ಸಮಗ್ರ ಅಭಿವೃದ್ಧಿಗೆ ಸಂಪರ್ಕ ಸುಧಾರಣೆ ಆಗಲೇಬೇಕು ಎನ್ನುವುದನ್ನು ಮನಗಂಡು ಆ ದಾರಿಯಲ್ಲೇ ನನ್ನ ಪ್ರಯತ್ನ ಮುಂದುವರೆದಿದೆ. ರಸ್ತೆ ಹಾಗೂ ರೈಲ್ವೆ ಸಂಪರ್ಕ ಸುಧಾರಣೆ ಜೊತೆಗೆ 2016ರ ಸೆಪ್ಟೆಂಬರ್‍ನಲ್ಲಿ ವಿಮಾನಯಾನ ಸಂಪರ್ಕ ಸಾಧ್ಯವಾಯಿತು. ಪ್ರಧಾನಿ ಮೋದಿ ಅವರ ಉಡಾನ್ ಯೋಜನೆಯಡಿ ವಿಮಾನ ಯಾನ ಆರಂಭವಾಗಿ ಸದ್ಯ 5 ನಗರಗಳಿಗೆ ಸಂಪರ್ಕಿಸುವ 9 ವಿಮಾನ ಹಾರಾಡುತ್ತಿವೆ. ಆದರೆ ಎಲ್ಲವೂ ಎಡಿಆರ್ ಮಾದರಿಯ ಸಣ್ಣ ವಿಮಾನಗಳು. ಎ3-20 ಮಾದರಿಯ ದೊಡ್ಡ ರೆಕ್ಕೆಯುಳ್ಳ ವಿಮಾನ ಹಾರಾಟ ನಡೆಸಬೇಕಾದರೆ ಕನಿಷ್ಠ 2.8 ಕಿ.ಮೀ. ರನ್‍ವೇ ಬೇಕು. ರನ್‍ವೇ ವಿಸ್ತರಣೆಗೆ ಹೆದ್ದಾರಿ ಅಡ್ಡ ಬಂದಿರುವುದರಿಂದ 2018ರಲ್ಲಿ ಅದಕ್ಕೂ ಅನುಮೋದನೆ ಪಡೆದೆ. ಆದರೆ ನಂತರದ ನಾಲ್ಕೂವರೆ ವರ್ಷಗಳಲ್ಲಿ ಎಲ್ಲಾ ಮುಖ್ಯಮಂತ್ರಿಗಳನ್ನು ಮನವಿ ಮಾಡಿದರೂ ಅಗತ್ಯ ಅನುದಾನ ನೀಡಲಿಲ್ಲ. ಆದರೆ ಸಿಎಂ ಬೊಮ್ಮಾಯಿ ಅವರು ಮೈಸೂರು ಬಗ್ಗೆ ಅಪಾರವಾದ ಕಾಳಜಿ ತೋರಿ ರನ್‍ವೇ ವಿಸ್ತರಣೆ ಅಗತ್ಯವಾದ ಭೂಸ್ವಾಧೀನ ಕ್ಕಾಗಿ 319 ಕೋಟಿ ರೂ. ಬಿಡುಗಡೆ ಮಾಡಿ, ಆದೇಶ ಹೊರಡಿಸಿದ್ದಾರೆ. 2019ರಲ್ಲಿ ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣನವರ ವಿಶೇಷ ಪ್ರಯತ್ನ, ಈಗಿನ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರ ಬೆಂಬಲ, ಪ್ರೋತ್ಸಾಹ ಸಾಕಷ್ಟಿದೆ. ನಾಲ್ಕೈದು ವರ್ಷಗಳ ಸತತ ಪ್ರಯತ್ನದ ನಂತರ ಇಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಭಿವೃದ್ಧಿಪಡಿಸುವುದಕ್ಕೆ ಪೂರಕವಾಗಿ ಮುಖ್ಯಮಂತ್ರಿಗಳು ಬಹಳ ದೊಡ್ಡ ಸಹಕಾರ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Translate »