ಹೆಚ್.ಡಿ.ಕೋಟೆ/ಶ್ರೀರಂಗಪಟ್ಟಣ,ಏ.16(ಮಂಜು, ವಿನಯ್ ಕಾರೇಕುರ)-ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳ ಪೂರ್ಣಗೊಳಿಸುವ ಅಜೆಂಡಾದೊಂದಿಗೆ ಆರಂಭಿಸಲಾಗಿರುವ ಜೆಡಿಎಸ್‍ನ ಮಹತ್ವಾಕಾಂಕ್ಷೆಯ `ಜನತಾ ಜಲಧಾರೆ’ ಗಂಗಾ ಯಾತ್ರೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡ ಅವರು ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಹಾಗೂ ಶ್ರೀರಂಗ ಪಟ್ಟಣ ತಾಲೂಕಿನ ಕೆಆರ್‍ಎಸ್ ಜಲಾಶಯದಲ್ಲಿ ಚಾಲನೆ ನೀಡಿದರು.
ಮೊದಲಿಗೆ ಬೆಂಗಳೂರಿನಿಂದ ಹೆಚ್.ಡಿ.ಕೋಟೆ ತಾಲೂಕಿನ ಬೀಚನ ಹಳ್ಳಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಅವರು, ಸಾರ್ವಜನಿಕ ಸಭೆ ನಂತರ ಕಬಿನಿ ಜಲಾಶಯದ ಮುಖ್ಯ ದ್ವಾರಕ್ಕೆ ತೆರಳಿದರು. ಅಲ್ಲಿ ಪುರೋಹಿತ ಮಹೇಶ್ ಆರಾಧ್ಯ ಅವರು ಅಭಿಜಿತ್ ಮುಹೂರ್ತದಲ್ಲಿ ಪೂಜೆ ಸಲ್ಲಿಸಿದರು. 21 ಮಹಿಳೆಯರು ಕಳಶಗಳಲ್ಲಿ ಕಬಿನಿ ನೀರು ಸಂಗ್ರಹಿಸಿದ ನಂತರ ಗಂಗೆ ಪೂಜೆ ಮತ್ತು ಗಣಪತಿ ಪೂಜೆ ಮಾಡ ಲಾಯಿತು. ಮಾಜಿ ಪ್ರಧಾನಿ ದೇವೇಗೌಡರು ಕಬಿನಿ ನೀರನ್ನು ಜನತಾ ಜಲಧಾರೆ ವಾಹನದಲ್ಲಿದ್ದ ಕಳಸಕ್ಕೆ ಸುರಿದು ಯಾತ್ರೆಗೆ ಚಾಲನೆ ನೀಡಿ ದರು. ಈ ವೇಳೆ ದೇವೇಗೌಡರನ್ನು ಮಂಗಳವಾದ್ಯ, ನಂದಿಕಂಬ, ಸತ್ತಿಗೆ, ಚಂಡೆವಾದ್ಯದೊಂದಿಗೆ ಸ್ವಾಗತಿಸಲಾಯಿತು.
ಈ ವೇಳೆ ಜೆಡಿಎಸ್‍ನ ಮುಖಂಡರು ಹಾಗೂ ಕಾರ್ಯಕರ್ತರು ತಾಲೂಕಿನ ತಾರಕ ಹಾಗೂ ನುಗು ಜಲಾಶಯಗಳಿಂದ ತಂದಿದ್ದ ನೀರನ್ನೂ ದೇವೇಗೌಡರು ಜಲಧಾರೆ ವಾಹನದ ಕಳಸಕ್ಕೆ ಸುರಿದರು. ನಂತರ ಶ್ರೀರಂಗಪಟ್ಟಣ ತಾಲೂಕು ಕೆಆರ್‍ಎಸ್ ಜಲಾಶಯಕ್ಕೆ ಆಗಮಿಸಿದ ದೇವೇಗೌಡರು, ಕಾವೇರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಜಲಾಶಯದ ದಕ್ಷಿಣ ದ್ವಾರದ ಮುಂಭಾಗದಲ್ಲಿ ವೇದಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮ ನೇತೃತ್ವದ ತಂಡ 108 ಕಳಸಗಳನ್ನು ಸ್ಥಾಪಿಸಿ ಗಂಗಾ ಪೂಜೆ ಮಾಡಿ, ಸಂಕಲ್ಪದೊಂದಿಗೆ ಮಂಗಳಾರತಿ ಮಾಡಿದ ನಂತರ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೇರಿದಂತೆ ಜೆಡಿಎಸ್ ಶಾಸಕರು ಕೆಆರ್‍ಎಸ್‍ನಲ್ಲಿ ಸಂಗ್ರಹಿಸಿದ್ದ ನೀರನ್ನು ಜನತಾ ಜಲಧಾರೆ ಕಳಸಕ್ಕೆ ಸುರಿಯುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ನಂತರ 108 ಕಳಸ ಹೊತ್ತಿದ್ದ ಮಹಿಳೆಯರು, ಬೊಂಬೆ ಕುಣಿತ, ವೀರಗಾಸೆ, ಪೂಜಾ ಕುಣಿತ, ಡೊಳ್ಳು ಕುಣಿತ, ನಂದಿ ಧ್ವಜ, ಪಟ್ಟದ ಕುಣಿತದ ಜೊತೆ ಸಾಗಿದ ಜಲಧಾರೆ ರಥವು ತಾಲೂಕಿನ ಕೆಆರ್‍ಎಸ್, ಹುಲಿಕೆರೆ, ಪೇಪರ್ ಮಿಲ್ ಸರ್ಕಲ್, ಬೆಳಗೊಳ, ಹೊಸಹಳ್ಳಿ, ಪಂಪ್ ಹೌಸ್ ಸರ್ಕಲ್, ಪಾಲಹಳ್ಳಿ ಮೂಲಕ ಶ್ರೀರಂಗಪಟ್ಟಣದ ಸ್ನಾನ ಘಟ್ಟದವರೆಗೆ ಸಾಗಿ ಮತ್ತೊಮ್ಮೆ ಕಾವೇರಿ ತೀರ್ಥ ಸಂಗ್ರಹಿಸಿ ರಥದ ಕಳಸಕ್ಕೆ ಸುರಿಯಲಾಯಿತು.
ಕೆಆರ್‍ಎಸ್‍ನ ಸಂತೇಮಾಳದ ಬಳಿ ಜಲಧಾರೆ ರಥಕ್ಕೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅಭಿಮಾನಿ ಬಳಗ ಮತ್ತು ಜೆಡಿಎಸ್ ಮುಖಂಡರು ಸುಮಾರು 300 ಕೆ.ಜಿ. ತೂಕದ ಭಾರೀ ಗಾತ್ರದ ಸೇಬಿನ ಹಾರ ಹಾಕುವ ಮೂಲಕ ಅಭಿಮಾನ ಮೆರೆದರು. ಕಾರ್ಯಕ್ರಮದಲ್ಲಿ ಶಾಸಕರಾದ ಅಶ್ವಿನ್‍ಕುಮಾರ್, ಸಿ.ಎನ್.ಮಂಜೇಗೌಡ, ಪಿ.ಎ.ಶರವಣ, ಮಾಜಿ ಶಾಸಕ ಚಿಕ್ಕಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಮೈಸೂರು ನಗರಾಧ್ಯಕ್ಷ ಚೆಲುವೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಬೃಂದ, ತಾಲೂಕು ಘಟಕದ ಅಧ್ಯಕ್ಷ ರಾಜೇಂದ್ರ, ಪುರಸಭಾಧ್ಯಕ್ಷೆ ಶಿವಮ್ಮ, ಮಾಜಿ ಅಧ್ಯಕ್ಷೆ ಸರೋಜಮ್ಮ, ಸದಸ್ಯೆ ಅನಿತಾ, ಮುಖಂಡರಾದ ಸಿ.ಎನ್.ನರಸಿಂಹೇಗೌಡ, ಸಿ.ವಿ.ನಾಗರಾಜು, ಬೀರಿಹುಂಡಿ ಬಸವಣ್ಣ, ಚಾ.ನಂಜುಂಡ ಮೂರ್ತಿ, ಮಳಲಿ ಶಾಂತ, ಯೋಗನರಸಿಂಹೇಗೌಡ, ಸಫಿ ಉಲ್ಲಾ ಇನ್ನಿತರರಿದ್ದರು.