ಮೈಸೂರು ನಗರ ಪಾಲಿಕೆ ಎಲ್ಲಾ ವಲಯ ಕಚೇರಿ ವ್ಯಾಪ್ತಿಯಲ್ಲಿ ಗೋಡೆ ಚಿತ್ರಕಲೆ ಸ್ಪರ್ಧೆ
ಮೈಸೂರು

ಮೈಸೂರು ನಗರ ಪಾಲಿಕೆ ಎಲ್ಲಾ ವಲಯ ಕಚೇರಿ ವ್ಯಾಪ್ತಿಯಲ್ಲಿ ಗೋಡೆ ಚಿತ್ರಕಲೆ ಸ್ಪರ್ಧೆ

January 25, 2021

ಮೈಸೂರು,ಜ.24(ಪಿಎಂ)-ಸ್ವಚ್ಛ ಸರ್ವೇಕ್ಷಣೆ 2021ರಲ್ಲಿ ಪ್ರಥಮ ಸ್ಥಾನ ಗಳಿಸುವ ಗುರಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ಕಾರ್ಯ ಚಟು ವಟಿಕೆ ಮುಂದುವರೆಸಿದೆ. ಇದರ ಅಂಗವಾಗಿ ಪಾಲಿಕೆಯ ಎಲ್ಲಾ 9 ವಲಯ ಕಚೇರಿ ಗಳ ವ್ಯಾಪ್ತಿಯಲ್ಲಿ ಭಾನುವಾರ ಗೋಡೆ ಚಿತ್ರಕಲಾ ಸ್ಪರ್ಧೆ ನಡೆಸಲಾಯಿತು. ವಲಯ ಕಚೇರಿ-9ರ ವ್ಯಾಪ್ತಿಯ ಸಿದ್ಧಾರ್ಥ ನಗರದ ಸಂಗೀತ ಕಾರ್ನರ್ ಬಳಿ ಉಪ ಮೇಯರ್ ಸಿ.ಶ್ರೀಧರ್, ಪಾಲಿಕೆ ಸದಸ್ಯೆ ಅಶ್ವಿನಿ ಅನಂತು ಸಾಂಕೇತಿಕವಾಗಿ ಕುಂಚದಲ್ಲಿ ಬಣ್ಣ ಬಳೆಯುವ ಮೂಲಕ ಎಲ್ಲಾ ವಲಯ ವ್ಯಾಪ್ತಿಯ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು, ಇಂದು ಎಲ್ಲಾ 9 ವಲಯ ಕಚೇರಿ ವ್ಯಾಪ್ತಿಯಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ. 9 ತಂಡಗಳು ಒಂದೊಂದು ವಲಯ ವ್ಯಾಪ್ತಿಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿವೆ. ಅನೈರ್ಮಲ್ಯದಿಂದ ಕೂಡಿರುವ ಸ್ಥಳಗಳನ್ನು ಗುರುತಿಸಿ, ಶುಚಿತ್ವಗೊಳಿಸಿ ಅಲ್ಲಿನ ಗೋಡೆಗಳಲ್ಲಿ ಚಿತ್ರ ಬರೆಯಲು ಅವಕಾಶ ನೀಡಲಾ ಗಿದೆ. ಇಂದಿನಿಂದ ವಾರ ಕಾಲ ಸ್ಪರ್ಧೆ ನಡೆಸಲಾಗುವುದು. ಆಸಕ್ತರು ತಂಡದೊಂದಿಗೆ ಸ್ಥಳಕ್ಕೆ ಬಂದೂ ನೋಂದಣಿ ಮಾಡಿಕೊಂಡು ಭಾಗವಹಿಸಬಹುದು ಎಂದರು.

ಚಿತ್ರಕಲೆಗೆ ಅಗತ್ಯವಿರುವ ಬಣ್ಣ ಸೇರಿದಂತೆ ಪರಿಕರಗಳನ್ನು ಪಾಲಿಕೆಯಿಂದ ಉಚಿತವಾಗಿ ನೀಡಲಾಗುವುದು. ಬಹುಮಾನ ಕೂಡ ಇರಲಿದೆ. ಸ್ವಚ್ಛ ಸರ್ವೇಕ್ಷಣೆ 2021ರ ಸಂಬಂಧ ವಿವಿಧ ಚಟುವಟಿಕೆಗಳನ್ನು ಪಾಲಿಕೆ ಆಯೋಜಿಸುತ್ತಿದೆ. ನಗರದ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಲಾಗಿದೆ. ಇಂದು ಗೋಡೆ ಚಿತ್ರಕಲಾ ಸ್ಪರ್ಧೆಯ ಮೂಲಕ ನಾಗರಿಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಚಿತ್ರಕಲೆ ಸೇರಿ ಸುಂದರೀಕರಣಕ್ಕೆ 200 ಅಂಕ: ಗೋಡೆ ಚಿತ್ರಕಲೆ ಸೇರಿದಂತೆ ಇನ್ನಿತರ ಸುಂದರೀಕರಣಕ್ಕೆ ಸ್ವಚ್ಛ ಸರ್ವೇಕ್ಷಣೆಯಲ್ಲಿ 200 ಅಂಕಗಳನ್ನು ನಿಗದಿಗೊಳಿಸಲಾಗಿದೆ. ಗೋಡೆ ಚಿತ್ರಕಲಾ ಸ್ಪರ್ಧೆಗೆ ಬಹುಮಾನ ಕೂಡ ಕೊಡಲಾಗುವುದು. ಈಗಾಗಲೇ ಪ್ರಸಕ್ತ ಸಾಲಿನ ಸ್ವಚ್ಛ ಸರ್ವೇಕ್ಷಣೆ ಸಂಬಂಧ ಮೇಯರ್, ಉಪಮೇಯರ್, ಪಾಲಿಕೆಯ ಎಲ್ಲಾ ಸದಸ್ಯರು ಸೇರಿದಂತೆ ಸಂಘ-ಸಂಸ್ಥೆಗಳೊಂದಿಗೆ ಸಭೆ ನಡೆಸಿ ಮಾಹಿತಿ ನೀಡಿ ಅಗತ್ಯ ಸಹಕಾರ ಕೋರಲಾಗಿದೆ. ನಮ್ಮ ಪೌರಕಾರ್ಮಿಕರು ಮನೆ ಮನೆಗೆ ಭೇಟಿ ನೀಡಿ ಓಟ್ ಮಾಡುವಂತೆ ನಾಗರಿಕರಿಗೆ ಪ್ರೇರಣೆ ನೀಡುವ ಪ್ರಕ್ರಿಯೆ ಕೂಡ ಪ್ರಾರಂಭವಾಗಿದೆ ಎಂದು ಡಾ.ನಾಗರಾಜು ತಿಳಿಸಿದರು. ಉಪ ಮೇಯರ್ ಸಿ.ಶ್ರೀಧರ್ ಮಾತನಾಡಿ, ಸ್ವಚ್ಛ ಸರ್ವೇಕ್ಷಣೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪಾಲಿಕೆ ನಾಗರಿಕರಿಗೆ ಅರಿವು ಮೂಡಿಸುವ ಕಾರ್ಯ ಚಟುವಟಿಕೆ ಆರಂಭಿಸಿದೆ. ಹೀಗಾಗಿ ನಾಗರಿಕರು ತಮ್ಮ ಎಲ್ಲಾ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪಾಲಿಕೆ ಸದಸ್ಯ ಅಶ್ವಿನಿ ಅನಂತು ಮಾತನಾಡಿ, ನಾಗರಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದಾಗ್ಯೂ ಕೆಲವೆಡೆ ರಸ್ತೆ ಬದಿಯಲ್ಲಿ ತ್ಯಾಜ್ಯ ಹಾಕುವುದು ಕಂಡು ಬರುತ್ತಿದೆ. ಸಾರ್ವಜನಿಕರು ಸಹಕರಿಸಿದರೆ ಈ ಬಾರಿ ಮೈಸೂರು ದೇಶದ ಮೊದಲ ಸ್ವಚ್ಛ ನಗರವಾಗು ವುದರಲ್ಲಿ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಾಲಿಕೆ ಆರೋಗ್ಯಾಧಿಕಾರಿ ಡಾ.ಜಯಂತ್, ವಲಯ ಕಚೇರಿ 9ರ ಸಹಾಯಕ ಆಯುಕ್ತ ಹರೀಶ್, ಆರೋಗ್ಯ ನಿರೀಕ್ಷಕ ರವಿಶಂಕರ್, ಪರಿಸರ ಅಭಿಯಂತರ ಚೇತನ್ ಮತ್ತಿತರರು ಹಾಜರಿದ್ದರು.

ವಲಯ 1ರ ವ್ಯಾಪ್ತಿಯಲ್ಲಿ ಚಾಮುಂಡಿಪುರಂನ ಮುಸ್ಲಿಂ ಸ್ಮಶಾನದ ಕಾಂಪೌಂಡ್, ವಲಯ-2ರ ವ್ಯಾಪ್ತಿಯಲ್ಲಿ ಜಯನಗರದ ನ್ಯೂ ಕಾಂತರಾಜ ಅರಸ್ ರಸ್ತೆ, ವಲಯ-3ರ ವ್ಯಾಪ್ತಿಯಲ್ಲಿ ರಾಮಸ್ವಾಮಿ ವೃತ್ತ, ವಲಯ-4ರ ವ್ಯಾಪ್ತಿಯಲ್ಲಿ ಗೋಕುಲಂನ ಪಿಕೆ ಕಾಲೋನಿ, ವಲಯ-5ರ ವ್ಯಾಪ್ತಿಯಲ್ಲಿ ಮೇಟಗಳ್ಳಿಯ ಸರ್ಕಾರಿ ಶಾಲೆ, ವಲಯ-6ರ ವ್ಯಾಪ್ತಿಯಲ್ಲಿ ಯಾದವಗಿರಿ ರೈಲ್ವೆ ಬ್ರಿಡ್ಜ್ ಬಳಿ, ವಲಯ-7ರ ವ್ಯಾಪ್ತಿಯಲ್ಲಿ ಫೌಂಟೆನ್ ವೃತ್ತದ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು ಕಾಂಪೌಂಡ್ ಹಾಗೂ ವಲಯ-8ರ ವ್ಯಾಪ್ತಿಯಲ್ಲಿ ಕುರಿಮಂಡಿಯ ಸಾರ್ವಜನಿಕ ಶೌಚಾಲಯ ಬಳಿ ಸ್ಪರ್ಧೆಗಳು ನಡೆದವು.

`7 ಸ್ಟಾರ್’ ಶ್ರೇಯಾಂಕಕ್ಕೂ ಭಾಜನವಾಗಬೇಕು
ಇದಕ್ಕಾಗಿ ಶೇ.30ರಷ್ಟು ಶುದ್ಧೀಕರಿಸಿದ ತ್ಯಾಜ್ಯ ನೀರು ಬಳಕೆಗೆ ಸಿದ್ಧತೆ
ನಗರದ ಪ್ರಮುಖ ಉದ್ಯಾನಗಳ ಹುಲ್ಲುಗಾವಲು, ಕಾರಂಜಿಗೆ ಶುದ್ಧೀಕರಿಸಿದ ತ್ಯಾಜ್ಯ ನೀರು ಬಳಸಲು ಮುಂದಾದ ಪಾಲಿಕೆ
ಮೈಸೂರು,ಜ.24(ಪಿಎಂ)- ಈ ಬಾರಿ ಸ್ವಚ್ಛ ಸರ್ವೇ ಕ್ಷಣೆಯಲ್ಲಿ ಮೈಸೂರು ನಗರಕ್ಕೆ `7 ಸ್ಟಾರ್’ ಶ್ರೇಯಾಂಕ ಲಭ್ಯವಾಗಿಸುವ ನಿಟ್ಟಿನಲ್ಲಿ ಶೇ.30ರಷ್ಟು ಶುದ್ಧೀಕರಿ ಸಿದ ತ್ಯಾಜ್ಯ ನೀರು ಬಳಕೆ ಮಾಡಿಕೊಳ್ಳಲು ಉದ್ದೇಶಿ ಸಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ನಗರದ ಪ್ರಮುಖ ಉದ್ಯಾನವನಗಳ ಹುಲ್ಲುಗಾವಲು ಹಾಗೂ ಫೌಂಟೇನ್‍ಗಳಿಗೆ ಶುದ್ಧೀಕರಿಸಿದ ತ್ಯಾಜ್ಯ ನೀರು ಬಳಕೆಗೆ ಕಾರ್ಯ ಚಟುವಟಿಕೆ ಆರಂಭಿಸಲಾಗುತ್ತಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆರೋ ಗ್ಯಾಧಿಕಾರಿ ಡಾ.ನಾಗರಾಜು ತಿಳಿಸಿದರು.

`ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಸ್ವಚ್ಛ ಸರ್ವೇಕ್ಷಣೆಯಲ್ಲಿ `7 ಸ್ಟಾರ್’ ಶ್ರೇಯಾಂಕ ಪಡೆ ಯಲು ಮೈಸೂರು ನಗರ ವ್ಯಾಪ್ತಿಯಲ್ಲಿ ಶುದ್ಧೀಕರಿಸಿದ ತ್ಯಾಜ್ಯ ನೀರು ಮರು ಬಳಕೆ ಮಾಡುವಲ್ಲಿ ಯಶಸ್ವಿ ಯಾಗಬೇಕು. ಪಾಲಿಕೆಯ ಕೆಸರೆ, ರಾಯನಕೆರೆ ಮತ್ತು ವಿದ್ಯಾರಣ್ಯಪುರಂನ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳು ಪ್ರತಿದಿನಕ್ಕೆ ಒಟ್ಟು 157.65 ಎಂಎಲ್‍ಡಿ ತ್ಯಾಜ್ಯ ನೀರು ಶುದ್ಧೀಕರಣಗೊಳಿಸುವ ಸಾಮಥ್ರ್ಯ ಹೊಂದಿವೆ ಎಂದರು. ಈ ಮೂರು ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಿಂದ ಪ್ರತಿದಿನ 120ರಿಂದ 125 ಎಂಎಲ್‍ಡಿ ನೀರು ಶುದ್ಧೀಕರಿಸಲಾಗುತ್ತಿದೆ. ಈ ಪೈಕಿ ಶೇ.30ರಷ್ಟು ನೀರು ಬಳಕೆಯಾಗುತ್ತಿದೆ. ಆದರೆ ಇದರಲ್ಲಿ ಶೇ.15ರಷ್ಟು ನಗರ ಹೊರವಲಯದಲ್ಲಿ ರೈತರ ಜಮೀನುಗಳಿಗೆ ಬಳಕೆಯಾಗುತ್ತಿದೆ. ಉಳಿದ ಶೇ.15 ರಷ್ಟು ಮಾತ್ರವೇ ನಗರ ವ್ಯಾಪ್ತಿಯಲ್ಲಿ ಬಳಕೆ ಮಾಡಲು ಸಾಧ್ಯವಾಗಿದ್ದು, ಶೇ.30ರಷ್ಟು ನೀರನ್ನು ನಗರ ವ್ಯಾಪ್ತಿಯಲ್ಲೇ ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೆ ಸ್ವಚ್ಛ ಸರ್ವೇಕ್ಷಣೆಯಲ್ಲಿ `7 ಸ್ಟಾರ್’ ಶ್ರೇಯಾಂಕ ಲಭಿಸಲಿದೆ. ದೇಶದ ಪ್ರಥಮ ಸ್ವಚ್ಛ ನಗರ ಸ್ಥಾನಕ್ಕೆ ಈ ಶ್ರೇಯಾಂಕ ಪಡೆಯಬೇಕೆಂಬುದು ಕಡ್ಡಾಯವಿಲ್ಲ. ಈ ಪ್ರಥಮ ಸ್ಥಾನದೊಂ ದಿಗೆ `7 ಸ್ಟಾರ್’ ಶ್ರೇಯಾಂಕವನ್ನೂ ಗಳಿಸಿಕೊಳ್ಳಬೇಕು ಎಂಬುದು ಪಾಲಿಕೆ ಗುರಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಿವೇದಿತಾನಗರದ ಎಸ್.ಆರ್. ಸುಬ್ಬರಾವ್ ಉದ್ಯಾನವನದ ಫೌಂಟೇನ್‍ಗೆ (ಕಾರಂಜಿ) ಶುದ್ಧೀಕರಿಸಿದ ತ್ಯಾಜ್ಯ ನೀರು ಬಳಕೆಗೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲಿ ಮೈಸೂರಿನ ಹೈವೇ ವೃತ್ತದ ಫೌಂಟೇನ್‍ಗೂ ಶುದ್ಧೀಕರಿಸಿದ ತ್ಯಾಜ್ಯ ನೀರು ಬಳಕೆಗೆ ಚಾಲನೆ ನೀಡಲಾಗುವುದು. ಜೊತೆಗೆ ಪ್ರಮುಖ ಉದ್ಯಾನವನದ ಹುಲ್ಲುಗಾವಲು ಹಾಗೂ ಫೌಂಟೇನ್‍ಗೂ ಇದೇ ನೀರು ಬಳಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

Translate »