ಪ್ರಶ್ನೆಪತ್ರಿಕೆ ಸೋರಿಕೆ-ಎಫ್‍ಡಿಎ ಪರೀಕ್ಷೆ ಮುಂದೂಡಿಕೆ: ನೂರಾರು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ವಾಪಸ್
ಮೈಸೂರು

ಪ್ರಶ್ನೆಪತ್ರಿಕೆ ಸೋರಿಕೆ-ಎಫ್‍ಡಿಎ ಪರೀಕ್ಷೆ ಮುಂದೂಡಿಕೆ: ನೂರಾರು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಿಂದ ವಾಪಸ್

January 25, 2021

ಮೈಸೂರು,ಜ.24(ಎಂಟಿವೈ)-ರಾಜ್ಯಾದ್ಯಂತ ಭಾನು ವಾರ ನಡೆಯಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್‍ಸಿ) ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಯಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಈ ಮಾಹಿತಿ ತಿಳಿಯದ ಗ್ರಾಮೀಣ ಪ್ರದೇಶದ ನೂರಾರು ಅಭ್ಯರ್ಥಿಗಳು ಭಾನುವಾರ ಬೆಳಗ್ಗೆ ಮೈಸೂರು ನಗರದಲ್ಲಿನ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಬಂದು ಬೇಸರಗೊಂಡು ವಾಪಸಾದರು. ಪ್ರಥಮ ದರ್ಜೆ ಸಹಾ ಯಕರ(ಎಫ್‍ಡಿಎ) ಹುದ್ದೆ ನೇಮಕಕ್ಕಾಗಿ ನಿಗದಿ ಯಾಗಿದ್ದ ಲಿಖಿತ ಪರೀಕ್ಷೆಗೆ ಮೈಸೂರು ಜಿಲ್ಲೆಯಲ್ಲಿ 25 ಸಾವಿರ ಮಂದಿ ನೋಂದಾಯಿಸಿಕೊಂಡಿದ್ದರು. ಮೈಸೂರಲ್ಲಿ 49 ಪರೀಕ್ಷಾ ಕೇಂದ್ರಗಳನ್ನು ವ್ಯವಸ್ಥೆ ಮಾಡ ಲಾಗಿತ್ತು. ಆದರೆ ಭಾನುವಾರ ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆ ಶನಿವಾರ ಸೋರಿಕೆಯಾಗಿದೆ. ಪರಿಣಾಮ ಕೆಪಿಎಸ್‍ಸಿ ಇಂದು 2 ಹಂತಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ರದ್ದು ಮಾಡಿದೆ. ಮುಂದೆ ಪರೀಕ್ಷೆ ದಿನಾಂಕ ನಿಗದಿಯಾದ ಬಳಿಕ ಮಾಹಿತಿ ಪ್ರಕಟಿಸು ವುದಾಗಿಯೂ ತಿಳಿಸಿದೆ. ಭಾನುವಾರದ ಎಫ್‍ಡಿಎ ಪರೀಕ್ಷೆ ರದ್ದಾಗಿರುವ ಮಾಹಿತಿ ಎಲ್ಲಾ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರೂ ಗ್ರಾಮೀಣ ಪ್ರದೇಶದ ಕೆಲವು ಅಭ್ಯರ್ಥಿ ಗಳ ಗಮನಕ್ಕೆ ಬಂದಿರಲಿಲ್ಲ. ಹಾಗಾಗಿ, ಭಾನುವಾರ ಬೆಳಗ್ಗೆ ಅವರು ಪರೀಕ್ಷಾ ಕೇಂದ್ರಕ್ಕೆ ಬಂದು ವಾಪಸ್ಸಾದ ದೃಶ್ಯ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಕಂಡುಬಂತು. ಪರೀಕ್ಷಾ ಕೇಂದ್ರಗಳ ಬಳಿ ಇದ್ದ ಭದ್ರತಾ ಸಿಬ್ಬಂದಿಯೇ ಪರೀಕ್ಷೆ ಮುಂದೂಡಿಕೆಯಾದ ಮಾಹಿತಿ ನೀಡಿ ಅಭ್ಯರ್ಥಿಗಳನ್ನು ವಾಪಸ್ ಕಳುಹಿಸಿದರು. ಇನ್ನು ಕೆಲವು ಪರೀಕ್ಷಾ ಕೇಂದ್ರ ಗಳಲ್ಲಿ ಪೊಲೀಸರೇ ನಿಂತುಕೊಂಡು ಪರೀಕ್ಷಾರ್ಥಿಗಳಿಗೆ ಮಾಹಿತಿ ನೀಡಿದರು. ಇನ್ನು ಕೆಲವರು ಪರೀಕ್ಷೆಯ ಮುಂದಿನ ದಿನಾಂಕ ಪರೀಕ್ಷಾ ಕೇಂದ್ರದಲ್ಲಿ ಪ್ರಕಟಿಸಿರಬಹುದು ಎಂಬ ಅಂದಾಜಿನಲ್ಲಿ ಅದನ್ನು ನೋಡಲೆಂದೇ ಬರುತ್ತಿದ್ದರು.

Translate »