ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಮೈಸೂರು ಕಾಂಗ್ರೆಸ್ ಅಭಿನಂದನಾ ನಿರ್ಣಯ
ಮೈಸೂರು

ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಮೈಸೂರು ಕಾಂಗ್ರೆಸ್ ಅಭಿನಂದನಾ ನಿರ್ಣಯ

October 21, 2022

ಮೈಸೂರು,ಅ.20(ಎಂಟಿವೈ)- ರಾಜ್ಯದಲ್ಲಿ ಲೀಡರ್ ಬೇಸ್ ರಾಜಕಾರಣವಿದ್ದು, ಅದನ್ನು ಕೇಡರ್ ಬೇಸ್ ಆಗಿ ಪರಿವರ್ತಿಸಬೇಕಾಗಿದೆ. ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಎಲ್ಲರೂ ಹೆಗಲಿಗೆ ಹೆಗಲುಕೊಟ್ಟು ಕೆಲಸ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ಎಐಸಿಸಿ ನೂತನ ಸಾರಥಿಯಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಜಂಟಿ ಯಾಗಿ ಆಯೋಜಿಸಿದ್ದ ಅಭಿನಂದನಾ ನಿರ್ಣಯ ಕೈಗೊಳ್ಳುವ ಸಭೆಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರಾದ ಕನ್ನಡಿಗರಲ್ಲಿ ಎರಡನೆಯವರೆಂಬ ಹೆಗ್ಗಳಿಕೆ ಮಲ್ಲಿ ಕಾರ್ಜುನ ಖರ್ಗೆ ಅವರಿಗೆ ಸಲ್ಲುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆಗೆ ಖರ್ಗೆ ಅವರ ಕೊಡುಗೆ ಅಪಾರ. ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಯಲ್ಲಿ ಕಾರ್ಯಕರ್ತರು ಒಗ್ಗಟ್ಟಾಗಿ ಪಕ್ಷದ ಗೆಲುವಿಗೆ ಶ್ರಮಿಸಬೇಕು. ವೈಮನಸ್ಸು ಬದಿಗೊತ್ತಿ ಕೆಲಸ ಮಾಡಬೇಕು. ಖರ್ಗೆ ಅವರ ಕೆಲಸಕ್ಕೆ ಪ್ರತಿಯೊಬ್ಬ ಕಾರ್ಯಕರ್ತರು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಬೇಕು. ಆಗ ಮಾತ್ರ ಖರ್ಗೆ ಅವರಿಗೆ ಇನ್ನಷ್ಟು ಒಳ್ಳೆ ಹೆಸರು ಲಭಿಸುತ್ತದೆ. ಆ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು, ಮುಖಂಡರು ವೈಮನಸ್ಸು ಬದಿಗೊತ್ತಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕೇರಳದಲ್ಲಿ ಕೇಡರ್ ಬೇಸ್, ರಾಜ್ಯದಲ್ಲಿ ಲೀಡರ್ ಬೇಸ್: ಭಾರತ ಐಕ್ಯತಾ ಯಾತ್ರೆ ವೇಳೆ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರು ನನ್ನ ಜೊತೆ ಮಾತನಾಡುವಾಗ ಕರ್ನಾಟಕ ಹಾಗೂ ಕೇರಳ ಕಾಂಗ್ರೆಸ್ ಸಮಿತಿಯಲ್ಲಿರುವ ವ್ಯತ್ಯಾಸವನ್ನು ಗುರುತಿಸಿರುವುದಾಗಿ ಹೇಳಿದರು. ಕೇರಳದಲ್ಲಿ ಕೇಡರ್(ತಳಮಟ್ಟ) ಬೇಸ್ ಪಕ್ಷ ಸಂಘಟನೆ, ಕರ್ನಾಟಕದಲ್ಲಿ ಲೀಡರ್(ನಾಯಕರ ವರ್ಚಸ್ಸು) ಬೇಸ್ ಸಂಘಟನೆ ಇರುವುದನ್ನು ತಿಳಿಸಿದರು. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಕ್ರಮ ಕೈಗೊಳ್ಳಬೇಕು. ಪಂಚಾಯ್ತಿ, ಬೂತ್ ಮಟ್ಟದಲ್ಲಿ ಸಂಘಟಿಸಿದಾಗ ಮಾತ್ರ ಪಕ್ಷ ಗಟ್ಟಿಯಾಗಿ ನೆಲೆಯೂರುತ್ತದೆ ಎಂದು ಅಭಿಪ್ರಾಯಪಟ್ಟರು.

ಲೀಡರ್ ಆದರೆ ಸಾಲದು: ಪ್ರತಿಯೊಬ್ಬರು ಪಕ್ಷವನ್ನು ಶಿಸ್ತಾಗಿ ತೆಗೆದುಕೊಂಡು ಹೋಗಬೇಕು. ಎಲ್ಲರೂ ಲೀಡರ್ ಆದರೆ ಪ್ರಯೋಜನವಿಲ್ಲ. ಲೀಡರ್ ಆಗಲು ಜನ ಸಂಪಾದನೆ ಮಾಡಬೇಕು. ಜನ ಸಂಪಾದಿಸದೇ ಕೇವಲ ಲೀಡರ್‍ಗಳಾದರೆ ಸಾಕಾಗುವುದಿಲ್ಲ. ಪಕ್ಷಕ್ಕಿಂತ ದೊಡ್ಡವರು ಯಾರೂ ಇರಲ್ಲ. ಮುಂದಿನ ದಿನಗಳಲ್ಲಿ ಲೋಪವಾಗದಂತೆ ಕಟ್ಟೆಚ್ಚರ ವಹಿಸಬೇಕು. ಯಾವುದೇ ಲೋಪವಾದರೆ ಈ ಭಾಗದ ಉಸ್ತುವಾರಿಯಾಗಿ ರುವ ನಾನು ಕೂಡ ತಲೆಬಾಗಬೇಕು. ಹಾಗಾಗಿ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.

ವಿಶೇಷ ಸ್ಥಾನಮಾನಕ್ಕೆ ಖರ್ಗೆ ಕೊಡುಗೆ: ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾದ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. ಬಿಜೆಪಿ ನಾಯಕರು ಕೇವಲ ರಾಜಕಾರಣಕ್ಕಾಗಿ ಮಾತನಾಡುತ್ತಿದ್ದಾರೆ. ಹೈದ್ರಾಬಾದ್ -ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರಕಿಸಿಕೊಡಲು ಮಲ್ಲಿಕಾರ್ಜುನ ಖರ್ಗೆ ಹೋರಾಟ ಪ್ರಧಾನ ಪಾತ್ರ ವಹಿಸಿದೆ. ಆರ್ಟಿಕಲ್ 371ಎ ಅನುಷ್ಠಾನಕ್ಕೆ ಹೋರಾಟ ಮಾಡಿ ಹೈದ್ರಾಬಾದ್-ಕರ್ನಾಟಕಕ್ಕೆ ವಿಶೇಷ ಸವಲತ್ತು ದೊರಕಿಸಿಕೊಡಲು ಶ್ರಮಿಸಿದರು. ಆಂಧ್ರಪ್ರದೇಶದ ಸಿಎಂ ಆಗಿದ್ದ ಚಂದ್ರಬಾಬು ನಾಯ್ಡು ಅವರು ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ಮಾಡಿದ್ದರು. ಆದರೆ ಪ್ರಧಾನಿ ಮೋದಿ, ಅವರ ಬೇಡಿಕೆ ತಿರಸ್ಕರಿಸಿದ್ದರಿಂದ ಚಂದ್ರ ಬಾಬು ನಾಯ್ಡು ಎನ್‍ಡಿಎನಿಂದ ಹೊರ ಬಂದರು ಎಂದರು.
ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್ ಅತ್ಯಂತ ಹಿರಿಯ ನಾಯಕರಾಗಿರುವ ಮಲ್ಲಿ ಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದು ಸಂತೋಷದ ಸಂಗತಿ. ಖರ್ಗೆ ಅವರು ದಲಿತ ನಾಯಕ ರೆಂದು ಈ ಪಟ್ಟ ನೀಡಿಲ್ಲ. ಬದಲಾಗಿ ರಾಷ್ಟ್ರಮಟ್ಟದಲ್ಲಿ ಪಕ್ಷವನ್ನು ಮುನ್ನಡೆಸಲು ಸಮರ್ಥರಿದ್ದಾರೆ ಎಂದು ಅರಿತು, ಚುನಾವಣೆ ಮೂಲಕವೇ ಆಯ್ಕೆ ಮಾಡಲಾಗಿದೆ. 9 ಭಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಎದುರಿಸಿದ 12 ಚುನಾವಣೆಯಲ್ಲಿ ಕೇವಲ 1 ಬಾರಿ ಮಾತ್ರ ಸೋಲು ಕಂಡಿದ್ದಾರೆ. ಸೋಲಿಲ್ಲದ ಸರದಾರ ಎಂಬ ಬಿರುದಾಂಕಿತ ರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರುವುದಕ್ಕೆ ಅಭಿನಂದನಾ ನಿರ್ಣಯ ಕೈಗೊಂಡಿ ರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಮಂಡಿಸಿದ ಅಭಿನಂದನಾ ನಿರ್ಣಯಕ್ಕೆ ಎಲ್ಲರೂ ಕೈ ಎತ್ತುವ ಮೂಲಕ ಎಲ್ಲರೂ ಸಹಮತಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ. ವಿಜಯ್‍ಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷರಾದ ಕೆ.ಮರೀಗೌಡ, ಬಿ.ಎಂ. ರಾಮು, ವಕ್ತಾರ ಹೆಚ್.ಎ. ವೆಂಕಟೇಶ್, ಕೆಪಿಸಿಸಿ ಸದಸ್ಯ ಕೆ.ಹರೀಶ್‍ಗೌಡ, ಮಾಜಿ ಮೇಯರ್‍ಗಳಾದ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಮುಖಂಡರಾದ ಎಂ.ಶಿವಣ್ಣ, ಸೋಮಶೇಖರ್, ಪ್ರದೀಪ್ ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಇದೇ ವೇಳೆ ಸಿಹಿ ವಿತರಿಸಲಾಯಿತು.

Translate »