ಮೈಸೂರು ಜಿಲ್ಲೆ; ಮಾರ್ಗಸೂಚಿ ಮೀರಿದ 1674 ವಾಹನ ವಶ
ಮೈಸೂರು

ಮೈಸೂರು ಜಿಲ್ಲೆ; ಮಾರ್ಗಸೂಚಿ ಮೀರಿದ 1674 ವಾಹನ ವಶ

June 9, 2021

ಮೈಸೂರು,ಜೂ.8(ಎಂಕೆ)-ಮೈಸೂರು ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್ ಕಫ್ರ್ಯೂ, ಲಾಕ್‍ಡೌನ್ ಜಾರಿಯಾದಾಗಿನಿಂದ ಈವರೆಗೆ ಮಾರ್ಗಸೂಚಿ ಉಲ್ಲಂಘಿಸಿದ 1674 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, 393 ಪ್ರಕರಣ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ 24 ಚೆಕ್‍ಪೋಸ್ಟ್‍ಗಳಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವ ಹಿಸುತ್ತಿವೆ. ಮೈಸೂರು ನಗರದೊಳಗೆ ಬರುವ ವಾಹನಗಳ ತಪಾಸಣೆಗಾಗಿ ಜಯಪುರ, ಬನ್ನೂರು, ಇಲವಾಲ, ನಂಜನಗೂಡು ರಸ್ತೆಯ ಎಪಿಎಂಸಿ ಮಾರುಕಟ್ಟೆ ಬಳಿ ಇರುವ ಚೆಕ್‍ಪೋಸ್ಟ್‍ಗಳಲ್ಲಿ ನಿತ್ಯ ವಾಹನಗಳ ತಪಾಸಣೆ ನಡೆಯುತ್ತಿದೆ.

ಏ.27ರಿಂದ ಈವರೆಗೆ ಕೋವಿಡ್ ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನ, ಕಾರು, ಲಾರಿ ಸೇರಿದಂತೆ ಒಟ್ಟು 1674 ವಾಹನಗಳು ವಶಪಡಿಸಿಕೊಂಡಿದ್ದು, 393 ಪ್ರಕರಣ ದಾಖಲಾಗಿವೆ. ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತದ ವತಿಯಿಂದ ರಚಿಸಿರುವ ತಾಲೂಕು ಟಾಸ್ಕ್‍ಫೋರ್ಸ್‍ನಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯೂ ಸೇರಿದ್ದು, ಸೋಂಕು ತಡೆಗೆ ಶ್ರಮಿಸಲಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶಿವಕುಮಾರ್ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

270 ಮಂದಿ ಹೋಂಗಾರ್ಡ್: ಜಿಲ್ಲೆಯಲ್ಲಿನ 26 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜನಸಂದಣಿ ಹೆಚ್ಚಿರುವೆಡೆ ಬ್ಯಾರಿಕೇಡ್ ಅಳವಡಿಸಿ, ಹೆಚ್ಚಾಗಿ ಜನರು ಓಡಾಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಪ್ರಮುಖ ಚೆಕ್‍ಪೋಸ್ಟ್ ಹಾಗೂ ಕೋವಿಡ್ ಸಂಬಂಧ ಕರ್ತವ್ಯಕ್ಕೆ ಹೊಸದಾಗಿ 200 ಹೋಂ ಗಾರ್ಡ್ ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ 70 ಮಂದಿ ಹೋಂ ಗಾರ್ಡ್ ಸೇರಿ 270 ಮಂದಿ ಕೊರೊನಾ ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ನಂಜನಗೂಡು, ಹೆಚ್.ಡಿ.ಕೋಟೆ, ಟಿ.ನರಸೀಪುರ, ಪಿರಿಯಾಪಟ್ಟಣ ತಾಲೂಕುಗಳಿಗೆ ಹೆಚ್ಚುವರಿಯಾಗಿ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್‍ಗಳನ್ನು ನಿಯೋಜಿಸಲಾಗಿದೆ. ನಿಯೋಜಿತ ಪಿಎಸ್‍ಐಗಳು ನಿತ್ಯವೂ ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್ ಹಾಗೂ ಚೆಕ್‍ಪೋಸ್ಟ್‍ಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದರು.

ಮನವೊಲಿಕೆ: ಗ್ರಾಮೀಣ ಪ್ರದೇಶಗಳಲ್ಲಿ ಚಿಕ್ಕ ಮನೆಗಳಲ್ಲಿ ಇರುವವರು, ಸೋಂಕಿತರ ಸಂಪರ್ಕಕ್ಕೆ ಸಿಲುಕುತ್ತಿದ್ದಾರೆ. ಕೊರೊನಾ ತಪಾಸಣೆಗೆ ಹಿಂಜರಿಯುವವರ ಮನವೊಲಿಸಿ ಕೋವಿಡ್ ಕೇರ್ ಸೆಂಟರ್‍ಗಳಿಗೆ ಕರೆದೊಯ್ಯುವ ಕೆಲಸವನ್ನೂ ಪೊಲೀಸರು ಮಾಡು ತ್ತಿದ್ದಾರೆ. ಹಳ್ಳಿಗಳಲ್ಲಿ ನಾವು ಚೆನ್ನಾಗಿದ್ದೇವಿ, ನಮಗೆ ಏನೂ ಆಗಿಲ್ಲ ಎನ್ನುವವರು ಜಾಸ್ತಿ. ಆದ್ದರಿಂದ ಕೊರೊನಾ ಸೋಂಕು ಹರಡದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಗಳನ್ನು ತೆಗೆದುಕೊಳ್ಳಲಾಗಿದೆ. ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸದೆ ಪ್ರತಿಯೊಬ್ಬರು ಪರಿಸ್ಥಿತಿ ಅರಿತರೆ ಕೊರೊನಾ ಸೋಂಕು ಕಡಿಮೆಯಾಗುತ್ತದೆ ಎಂದು ಹೇಳಿದರು.

Translate »