ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಮಾತುಕತೆ ನಂತರ ನಾಯಕತ್ವ ತ್ಯಜಿಸಲು ಯಡಿಯೂರಪ್ಪ ಸಮ್ಮತಿ?
News

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಮಾತುಕತೆ ನಂತರ ನಾಯಕತ್ವ ತ್ಯಜಿಸಲು ಯಡಿಯೂರಪ್ಪ ಸಮ್ಮತಿ?

June 9, 2021

ಬೆಂಗಳೂರು, ಜೂ.8(ಕೆಎಂಶಿ)- ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ಬಿ.ಎಸ್.ಯಡಿಯೂರಪ್ಪ ಸಮ್ಮತಿಸಿದ್ದಾರೆ.
ಕರ್ನಾಟಕದಲ್ಲಿನ ನಾಯಕತ್ವ ಗೊಂದಲ ನಿವಾರಿಸಲು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಸುದೀರ್ಘ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಯಡಿ ಯೂರಪ್ಪ ಅಧಿಕಾರದಿಂದ ಕೆಳಗಿಳಿಯುವ ಮಾತುಗಳನ್ನಾಡಿ ದ್ದಾರೆ ಎಂದು ಮೂಲಗಳು ತಿಳಿಸಿವೆ.

ಭೂಪೇಂದ್ರ ಯಾದವ್, ಯಡಿಯೂರಪ್ಪನವರ ಸಂದೇಶ ವನ್ನು ವರಿಷ್ಠರಿಗೆ ರವಾನಿಸುತ್ತಿದ್ದಂತೆ ಜೂನ್ 14 ರಂದು ಬಿಜೆಪಿಯ ಸಂಸದೀಯ ಮಂಡಳಿ ಸಭೆ ಕರೆದು, ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಈ ಮಧ್ಯೆ ವಿಧಾನಸಭೆಯ ಆಡಳಿತ ಪಕ್ಷದ ಮುಖ್ಯ ಸಚೇತಕ ಸುನೀಲ್‍ಕುಮಾರ್ ಸರಣಿ ಟ್ವೀಟ್ ಮಾಡಿ, ಪಕ್ಷ ಮತ್ತು ಸರ್ಕಾರದ ವಿಚಾರಗಳ ಬಗ್ಗೆ ಚರ್ಚೆ ಮಾಡಲು ನಮಗೊಂದು ವೇದಿಕೆ ಕಲ್ಪಿಸಬೇಕು ಎಂದು ವರಿಷ್ಠರನ್ನು ಆಗ್ರಹಿಸಿದ್ದಾರೆ.

ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರನ್ನು ಟ್ವೀಟ್ ಸರಣಿಗೆ ಒಳಪಡಿಸಿದ್ದಾರೆ. ನಾಯಕತ್ವ, ಆಡಳಿತ, ಸಚಿವರ ಕಾರ್ಯವೈಖರಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ಚರ್ಚಿಸಬೇಕಾಗಿದೆ. ಆದರೆ ಇವುಗಳನ್ನು ಹೊರಗೆ ಹೇಳಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಶಾಸಕರ ಅಭಿಪ್ರಾಯ ಹೇಳಲು ಒಂದು ವೇದಿಕೆ ಸೃಷ್ಟಿ ಮಾಡಿ ಎಂದು ಮನವಿ ಮಾಡಿದ್ದಾರೆ. ಇದೇ ಶಾಸಕರು ಜೂ.7 ರಂದು ಬಿಜೆಪಿ ಶಾಸಕಾಂಗ ಸಭೆ ಕರೆಯುವಂತೆ ಹಿಂದೆ ಒತ್ತಾಯಿಸಿ, ಸಹಿ ಸಂಗ್ರಹ ಮಾಡಿ, ವರಿಷ್ಠರಿಗೆ ಕಳುಹಿ ಸಿದ್ದರು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಇದೀಗ ಸುನೀಲ್‍ಕುಮಾರ್ ಟ್ವೀಟ್ ಮಾಡಿ, ಬಹಿರಂಗ ವಾಗಿ ಸಭೆಗೆ ಆಗ್ರಹಿಸಿದ್ದಾರೆ. ಪಕ್ಷ ಹೇಳಿದರೆ ಅಧಿಕಾರದಿಂದ ಇಳಿಯಲು ಸಿದ್ಧ ಎಂದು ಮುಖ್ಯಮಂತ್ರಿಯವರೇ ಘೋಷಣೆ ಮಾಡಿದ ನಂತರವೂ ಪರ ವಿರೋಧ ಬೆಳವಣಿಗೆಗಳು ನಡೆಯುತ್ತಿವೆ.

ಯಡಿಯೂರಪ್ಪ ಬೆಂಬಲಿಗ ಶಾಸಕರು, ಇಂದು ಮುಖ್ಯಮಂತ್ರಿ ಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಹೇಳಿದ್ದೆಲ್ಲ ವನ್ನು ಕೇಳಿಸಿಕೊಂಡರು. ನೀವು ನನಗೆ ಹೇಳುವುದರಿಂದ ಏನೂ ಆಗುವುದಿಲ್ಲ. ದೆಹಲಿಗೆ ಹೋಗಿ ನಿಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳಿ ಎಂದು ಕಳುಹಿಸಿದ್ದಾರೆ. ಎಲ್ಲ ಬೆಳವಣಿಗೆಗಳು ವರಿಷ್ಠರು ತೆಗೆದು ಕೊಳ್ಳುವ ಮುಂದಿನ ನಿರ್ಧಾರದ ಮೇಲೆ ಯಡಿಯೂರಪ್ಪನವರ ಭವಿಷ್ಯವಿದೆ. ಪಕ್ಷದ ಮೂಲಗಳ ಪ್ರಕಾರ ಸಂಸದೀಯ ಮಂಡಳಿ ಸಭೆ ಸೇರಿದರೆ ರಾಜ್ಯದ ನಾಯಕತ್ವದ ಬಗ್ಗೆ ಅಂದೇ ತೀರ್ಮಾನವಾಗಲಿದೆ.

Translate »